ADVERTISEMENT

`ಅರ್ಜುನಂಗ್ ಯಾಕ್ರ ಕೆಟ್ಟ ಹೆಸರು ...'

ದಸರಾ ಗಜಪಡೆ ಮಾವುತರ ಮನದಾಳ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ಮೈಸೂರು: `ನಮ್ ಅರ್ಜುನಂಗ್ ಯಾಕ್ರ ಕೆಟ್ಟ ಹೆಸರು. ಮೊನ್ನೆ ಅದ್ ಎಂತ ತಪ್ಪು ಮಾಡಿರಲಿಲ್ರ. ಯಾವನೋ ಬಂದು ಅದ್ರ ಕೊಂಬ್ (ದಂತಗಳು) ಮೇಲೆ ಭಾರ ಹಾಕಿದ್ದನ್ರ. ಅದಕ್ ಅಂವ ತಲೆ ಜಾಡಿಸಿದ್ದ ಅಷ್ಟ..'
ದಸರಾ ಮಹೋತ್ಸವದ ಜಂಬೂ ಸವಾರಿಗಾಗಿ ಅರಮನೆಗೆ ಬಂದು ಬೀಡು ಬಿಟ್ಟಿರುವ ಗಜಪಡೆಯ ಮಾವುತ, ಕಾವಾಡಿಗಳ ಈ ಮಾತುಗಳು ಬೇಸರ ಮತ್ತು ಆಕ್ರೋಶ ಮಿಶ್ರಿತವಾಗಿದ್ದವು.

ಕಳೆದ ಶುಕ್ರವಾರ ದಸರಾ ಗಜಪಡೆಯು ಜಯಮಾರ್ತಾಂಡ ದ್ವಾರದ ಮೂಲಕ ಅರಮನೆಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಅರ್ಜುನ ಗಲಿಬಿಲಿಗೊಂಡ ಘಟನೆಯ ಬಗ್ಗೆ ಮಾವುತರ ಬಳಗಕ್ಕೆ ತೀವ್ರ ಬೇಸರ ಮೂಡಿದೆ.

`ಅಂವ (ಅರ್ಜುನ) ಮೊದಲಿನಂಗೆ ಅಲ್ಲ. ಹೋದ ವರ್ಷ ಅಷ್ಟು ಚೆನ್ನಾಗಿ ಅಂಬಾರಿ ಹೊತ್ತು ಸಾಗಿದ ಮೇಲೂ ಅವನನ್ನು ಪುಂಡಾನೆ, ಮದದ ಆನೆ ಎಂದು ಕರೆಯುವುದು ಏಕೆ' ಎಂದು ಪ್ರಶ್ನಿಸುವ ಅವರು, `ಅರಮನೆ ದ್ವಾರದಲ್ಲಿ ಒಬ್ಬ ವ್ಯಕ್ತಿ (ಪ್ರಭಾವಿ ರಾಜಕಾರಣಿಯೊಬ್ಬರ ಕಡೆಯವರು) ಅರ್ಜುನನ ದಂತದ ಮೇಲೆ ಕೈಯಿಟ್ಟಿದ್ದ. ಅಲ್ಲದೇ ಅದನ್ನು ಜೋರಾಗಿ ಒತ್ತಿದ, ಇದರಿಂದ ಕುಪಿತಗೊಂಡು ಸೊಂಡಿಲನ್ನು ಒದರಿದ ಅರ್ಜುನ. ಆದ್ದರಿಂದ ಆ ವ್ಯಕ್ತಿ ಹೋಗಿ ಬಿದ್ದ. ಬಹಳಷ್ಟು ಜನರು ಅಲ್ಲಿದ್ದ ಸಂದರ್ಭದಲ್ಲಿ ಇನ್ನೇನಾದರೂ ಹೆಚ್ಚುಕಮ್ಮಿಯಾಗಿದ್ದರೆ ಅರ್ಜುನನ್ನೇ ಸಂಶಯದ ಕಣ್ಣುಗಳಿಂದ ನೋಡುತ್ತಿದ್ದರು. ಅದು ಭಾರೀ ಶಕ್ತಿಶಾಲಿ. ಅಷ್ಟೇ ಸಹಕಾರದಿಂದಲೂ ಇರಬಲ್ಲ. ಮನುಷ್ಯರು ತಪ್ಪು ಮಾಡಿ ಮುಗ್ಧ ಪ್ರಾಣಿಗಳ ಹೆಸರು ಹಾಳು ಮಾಡುವುದು ಯಾಕೆ? ಸಮಾರಂಭದಲ್ಲಿ ನಡೆದ ಘಟನೆಯನ್ನು ಮಾಧ್ಯಮಗಳಲ್ಲಿ ನೋಡಿರುವ ಜನರು ಆನೆಗಳನ್ನು ನೋಡಲು ಬಂದಾಗ, ಅರ್ಜುನನ ಬಗ್ಗೆ ಇಲ್ಲಸಲ್ಲದ ಪ್ರಶ್ನೆ  ಮಾಡುತ್ತಿದ್ದಾರೆ. ಇದು ಬೇಸರ ತರುವ ಸಂಗತಿಯಾಗಿದೆ. ತಪ್ಪು ಮಾಡಿದವರನ್ನು ಯಾರೂ ಕೇಳಲ್ಲ' ಎಂದು ಕೇಳುತ್ತಾರೆ.

ಪ್ರತಿ ದಸರೆಗೂ ಅರಮನೆ ಅಂಗಳಕ್ಕೆ ಗಜಪಡೆಯನ್ನು ಕರೆದು ತಂದಾಗಲೆಲ್ಲ ಅರ್ಜುನನಿಗೆ ಪ್ರತ್ಯೇಕ ವಾಸ್ತವ್ಯದ ವ್ಯವಸ್ಥೆ ಮಾಡಲಾಗುತ್ತಿತ್ತು. ಉಳಿದ ಆನೆಗಳೊಂದಿಗೆ ಸ್ವಲ್ಪ ತಂಟೆ ಮಾಡುವ ಮತ್ತು ಮದ ಏರುವ ಆನೆಯೆಂದೇ ಇದನ್ನು ಪರಿಗಣಿಸಲಾಗಿತ್ತು. ಆದರೂ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಅರ್ಜುನ ಎಂದೂ ಜಂಬೂ ಸವಾರಿಗೆ ತೊಡಕಾಗಿರಲಿಲ್ಲ. ಕಾಡಾನೆ ಹಾವಳಿ ಕಾರ್ಯಾಚರಣೆಗಳಲ್ಲಿಯೂ ಉತ್ತಮ ಕಾರ್ಯನಿರ್ವಹಿಸಿದ ಶ್ರೇಯವೂ ಅರ್ಜುನನಿಗೆ ಇದೆ. 

ಕಳೆದ ಬಾರಿ ಬಲರಾಮ ಆನೆಯ ದೈಹಿಕ ಸಾಮರ್ಥ್ಯ ವರ್ಧಿಸಲು ವಿಟಮಿನ್ ಚುಚ್ಚುಮದ್ದು ಕೂಡ ನೀಡಲಾಗಿತ್ತು. ವಿಶೇಷ ಆಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೂ ಬಲರಾಮನ ಜತೆಗೆ ಅರ್ಜುನ ಮತ್ತು ಪಟ್ಟದ ಆನೆ ಗಜೇಂದ್ರನಿಗೂ ಮರದ ಅಂಬಾರಿ ಹೊರುವ ತಾಲೀಮು ನೀಡಲಾಗುತ್ತಿತ್ತು.

ವಿಜಯದಶಮಿಗೆ ಐದು ದಿನಗಳು ಬಾಕಿಯಿದ್ದಾಗ, ಅರ್ಜುನನೇ ಅಂಬಾರಿ ಹೊರುವುದು ಎಂದು ತೀರ್ಮಾನಿಸಲಾಗಿತ್ತು. ಸಹನೆ ಕಡಿಮೆಯಿರುವ ಅರ್ಜುನ ಯಾವ ರೀತಿ ಸ್ಪಂದಿಸುತ್ತಾನೆ ಎಂಬ ಕುತೂಹಲ ಹಲವರಲ್ಲಿತ್ತು. 750 ಕೆ.ಜಿ ಚಿನ್ನದ ಅಂಬಾರಿ ಹೊತ್ತು ಅಂಬಾವಿಲಾಸ ಅರಮನೆ ಅಂಗಳದಲ್ಲಿ ಠೀವಿಯಿಂದ ನಡೆದು ಬಂದ ಅರ್ಜುನನ `ದಾಢಸಿ' ಹೆಜ್ಜೆಗಳು ಎಲ್ಲರ ಪ್ರಶ್ನೆಗಳು ಮತ್ತು ಟೀಕೆಗಳಿಗೆ ಉತ್ತರ ನೀಡಿದ್ದವು. 1968ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ನಡೆದ ಖೆಡ್ಡಾ ಕಾರ್ಯಾಚರಣೆಯಲ್ಲಿ ಹಿಡಿಯಲಾಗಿದ್ದ ಅರ್ಜುನ ಸುಮಾರು 16 ವರ್ಷಗಳಿಂದ ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದ್ದಾನೆ. 1992ರಲ್ಲಿ ಒಂದು ಬಾರಿ ಬನ್ನಿಮಂಟಪದಿಂದ ಸವಾರಿ ಮರಳುವಾಗ ಅಂಬಾರಿಯನ್ನು ಅರ್ಜುನನಿಗೆ ಹೊರಿಸಲಾಗಿತ್ತು. ಆಗ ದ್ರೋಣ ಆನೆ ಅಂಬಾರಿಯನ್ನು ಹೊರುತ್ತಿತ್ತು.

ಸದ್ಯದ ಗಜಪಡೆಯಲ್ಲಿ ಎತ್ತರ ಮತ್ತು ತೂಕದಲ್ಲಿ ಉಳಿದೆಲ್ಲ ಆನೆಗಳಿಗಿಂತ ಬಲಿಷ್ಠವಾಗಿರುವ ಅರ್ಜುನ ತನ್ನ ಮಾವುತ ದೊಡ್ಡಮಾಸ್ತಿ ಮತ್ತು ಕಾವಾಡಿಗ ಸಣ್ಣಪ್ಪನ ಸೂಚನೆಗಳನ್ನು  ವಿಧೇಯತೆಯಿಂದ ಪಾಲಿಸುತ್ತಾನೆ. ಈ ಬಾರಿಯೂ ತನ್ನ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾನೆ ಎನ್ನುವ ವಿಶ್ವಾಸ ಮಾವುತರ ಬಳಗದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.