ADVERTISEMENT

‘ಅಲ್ಪಸಂಖ್ಯಾತ ಅಧಿಕಾರಿಗೇನು ಗೊತ್ತು ಹಿಂದೂ ಧರ್ಮ’

ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠಕ್ಕೆ ಅಶೋಕ ಹಾರನಹಳ್ಳಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 19:44 IST
Last Updated 15 ಮಾರ್ಚ್ 2018, 19:44 IST
ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ
ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ   

ಬೆಂಗಳೂರು: ‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಧಿಕಾರಿಯೊಬ್ಬರು ಲಿಂಗಾಯತರು ಹಿಂದೂಗಳಲ್ಲ ಎಂದು ಅದು ಹೇಗೆ ಹೇಳುತ್ತಾರೆ. ಹಿಂದೂ ಧರ್ಮದ ಬಗ್ಗೆ ಅವರಿಗೆಷ್ಟು ಗೊತ್ತು , ಕೋರ್ಟ್‌ಗೆ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ಮಹಾ ಪ್ರಬಂಧ ಬರೆಯಲು ಇಂಥವರಿಗೆಲ್ಲಾ ಯಾರು ನಿರ್ದೇಶನ ನೀಡಿದ್ದಾರೆ’ ಎಂದು ಹಿರಿಯ ವಕೀಲ ಅಶೋಕ ಹಾರನಹಳ್ಳಿ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠವನ್ನು ಖಾರವಾಗಿ ಪ್ರಶ್ನಿಸಿದರು.

ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತ ಆಯೋಗವು ತಜ್ಞರ ಸಮಿತಿ ರಚನೆಗೆ ಆದೇಶ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಎಂ.ಸತೀಶ್‌ ಎಂಬ ಅರ್ಜಿದಾರರ ಪರ ಹಾಜರಿದ್ದ ಅಶೋಕ ಹಾರನಹಳ್ಳಿ, ‘ನಮ್ಮ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತ ಇಲಾಖೆಯ ಅಧೀನ ಕಾರ್ಯದರ್ಶಿ ಅಕ್ರಂ ಬಾಷಾ ಎಂಬುವರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಈ ಪ್ರಮಾಣ ಪತ್ರದಲ್ಲಿ ಲಿಂಗಾಯತರು ಹಿಂದೂಗಳಲ್ಲ, ಇವರೆಲ್ಲಾ ವೇದಗಳನ್ನು ಅನುಸರಿಸುವುದಿಲ್ಲ, ಇಷ್ಟಲಿಂಗ ಪೂಜಕರು ಎಂದೆಲ್ಲಾ ವಿವರಿಸಿದ್ದಾರೆ. ಈ ರೀತಿ ವಿವರಣೆಯನ್ನು ಒಬ್ಬ ಅಲ್ಪಸಂಖ್ಯಾತ ಹೇಗೆ ಬರೆಯಲು ಸಾಧ್ಯ’ ಎಂದು ನ್ಯಾಯಪೀಠವನ್ನು ಪ್ರಶ್ನಿಸಿದರು.

ADVERTISEMENT

ಇದಕ್ಕೆ ದಿನೇಶ್ ಮಾಹೇಶ್ವರಿ, ‘ಅವರೊಬ್ಬ ಸರ್ಕಾರದ ಅಧಿಕಾರಿ. ಸರ್ಕಾರದ ಪರವಾಗಿ ಅವರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಅದು ಅವರ ವೈಯಕ್ತಿಕ ಹೇಳಿಕೆಯಲ್ಲ. ನೀವು ಈ ರೀತಿ ಪ್ರಶ್ನಿಸಿದರೆ ಸರ್ಕಾರದ ಯಾವುದೇ ಸಂಸ್ಥೆಗಳು ಹೇಗೆ ತಾನೆ ತಮ್ಮ ಗುರಿ ಮುಟ್ಟಲು ಸಾಧ್ಯ’ ಎಂದು ಕೊಂಚ ಗರಂ ಆಗಿಯೇ ಹಾರನಹಳ್ಳಿ ಅವರನ್ನು ಮರು ಪ್ರಶ್ನಿಸಿದರು.

ನ್ಯಾಯಮೂರ್ತಿಗಳು, ಪ್ರತಿವಾದಿಗಳು ತಮ್ಮ ಆಕ್ಷೇಪಣೆ ಸಲ್ಲಿಸಲಿ. ಈ ಅರ್ಜಿಗಳನ್ನು ವಿವರವಾಗಿ ಆಲಿಸೋಣ ಎಂದು ಹೇಳಿ ವಿಚಾರಣೆಯನ್ನು ಏಪ್ರಿಲ್‌ 3ಕ್ಕೆ ಮುಂದೂಡಿದರು.

ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಎಂ.ಆರ್.ನಾಯಕ್‌, ರಾಜ್ಯ ಅಲ್ಪಸಂಖ್ಯಾತ ಆಯೋಗದ ಪರ ಹಿರಿಯ ವಕೀಲ ಶಶಿಕಿರಣ ಶೆಟ್ಟಿ ಹಾಗೂ ಅರ್ಜಿದಾರರ ಪರ ಹಿರಿಯ ವಕೀಲ ಎಸ್‌.ಪಿ.ಶಂಕರ್‌, ಲಕ್ಷ್ಮೀ ಅಯ್ಯಂಗಾರ್ ಹಾಜರಿದ್ದರು.
***
ಎಷ್ಟು ಬಾರಿ ನೆನಪಿಸಲಿ?
ಪ್ರಕರಣದಲ್ಲಿ ಮತ್ತೊಬ್ಬ ಅರ್ಜಿದಾರ ಶಶಿಧರ ಶ್ಯಾನುಭೋಗ ಪರ ಹಾಜರಿದ್ದ ಜಿ.ಆರ್.ಗುರುಮಠ, ‘ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವ ರೀತಿಯಲ್ಲೂ ಮುಂದುವರಿಯದಂತೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ದಿನೇಶ್‌ ಮಾಹೇಶ್ವರಿ, ‘ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮಗಳು ಈ ಪ್ರಕರಣಗಳ ಅಂತಿಮ ಆದೇಶಕ್ಕೆ ಬದ್ಧವಾಗಿರುತ್ತವೆ ಎಂದು ನಿಮಗೆ ಮತ್ತೆ ಮತ್ತೆ ನೆನಪಿಸಬೇಕಿಲ್ಲ ಅಲ್ಲವೇ’ ಎಂದು ಪ್ರಶ್ನಿಸಿದರು.
**
ಇದೊಂದು ಮಹತ್ವದ ವಿಚಾರ: ನಾವಡಗಿ
ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ.ನಾವಡಗಿ, ‘ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದಿಂದ ನಮಗೆ ಇನ್ನೂ ಯಾವುದೇ ನಿರ್ದೇಶನ ಬಂದಿಲ್ಲ. ಅದಕ್ಕಾಗಿ ಉತ್ತರ ಕೊಡಲು ಸಮಯ ಬೇಕು’ ಎಂದು ನ್ಯಾಯಪೀಠಕ್ಕೆ ಕೋರಿದರು.

‘ಇದೊಂದು ಮಹತ್ವದ ವಿಚಾರ ಹಾಗೂ ಅನಪೇಕ್ಷಿತ ಬೆಳವಣಿಗೆಯಾಗಿದೆ. ಸ್ವಾತಂತ್ರ್ಯಾ ನಂತರ ಇಂತಹ ವಿಚಾರ ಚರ್ಚೆಯಾಗಿರಲಿಲ್ಲ. ಇದರಲ್ಲಿ ಸರ್ಕಾರದ ನೀತಿಗೆ ಸಂಬಂಧಿಸಿದ ವಿಷಯಗಳು ಅಡಕವಾಗಿವೆ. ಹಾಗಾಗಿ ಈ ಬಗ್ಗೆ ಕೂಲಂಕಷ ಚರ್ಚೆಯಾಗಬೇಕಿದೆ. ಅದಕ್ಕಾಗಿ ಸಮಯ ಬೇಕು’ ಎಂದು ಕೋರಿದರು.

‘ಸಂವಿಧಾನ ರಚನೆಯಾದ ಮೇಲೆ ಇಂತಹ ಘೋಷಣೆಯ ಬೇಡಿಕೆ ಬಂದಿರುವ ಅಪರೂಪದ ಪ್ರಕರಣವಿದು. ಅಷ್ಟಕ್ಕೂ ಕೇಂದ್ರ ಸರ್ಕಾರಕ್ಕೆ ಯಾರೂ ಈ ಕುರಿತಂತೆ ಕೋರಿಕೆ ಸಲ್ಲಿಸಿಲ್ಲ. ಅರ್ಜಿದಾರರು ತಮ್ಮ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದಿದ್ದಾರೆ. ಎಲ್ಲವನ್ನೂ ಕೂಲಂಕಷವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಿದೆ’ ಎಂದು ಹೇಳಿದರು.
**
ಸರ್ಕಾರ ಈ ರೀತಿ ತಕರಾರು ಹಾಕಿದೆ ಎಂದು ಆಕ್ಷೇಪಿಸಿದರ ಹೇಗೆ? ಈ ಅರ್ಜಿಗಳನ್ನು ಹಾಕುವ ಮೂಲಕ ನೀವೇ ಇಂಥಾದ್ದನ್ನೆಲ್ಲಾ ಮೈಮೇಲೆ ಎಳೆದುಕೊಂಡಿದ್ದೀರಿ.

–ದಿನೇಶ್ ಮಾಹೇಶ್ವರಿ, ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.