ADVERTISEMENT

‘ಅಲ್ಪಸಂಖ್ಯಾತ: ವ್ಯಾಖ್ಯಾನ ಬದಲಾಗಲಿ’

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST
ಗೋಪಾಲ್‌
ಗೋಪಾಲ್‌   

ವಿಜಯಪುರ: ‘ಅಲ್ಪಸಂಖ್ಯಾತ’ ಪದದ ವ್ಯಾಖ್ಯಾನವೇ ಬದಲಾಗಬೇಕಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್‌ ಶುಕ್ರವಾರ ಇಲ್ಲಿ ಅಭಿಪ್ರಾಯಪಟ್ಟರು.

‘ಭಾರತದಲ್ಲಿ ಜನಿಸಿದ ಎಲ್ಲರೂ ಬಹುಸಂಖ್ಯಾತರು. ಅಲ್ಪಸಂಖ್ಯಾತರು ಎಂದರೆ ಪಾರ್ಸಿಗಳು, ಯಹೂದಿಗಳು, ಆಂಗ್ಲೊ ಇಂಡಿಯನ್ನರು ಮಾತ್ರ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ 90ಕ್ಕೂ ಹೆಚ್ಚು ಮುಸ್ಲಿಮರಿದ್ದಾರೆ. ಅಲ್ಲಿಯೂ ಅವರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸುವುದು ಎಷ್ಟರ ಮಟ್ಟಿಗೆ ಸರಿ? ಇದೇ ರೀತಿ ನಾಗಾಲ್ಯಾಂಡ್‌ನಲ್ಲಿ ಶೇ 95ರಷ್ಟು ಜನರು ಕ್ರೈಸ್ತರಿದ್ದಾರೆ. ಅಲ್ಲಿ ಅವರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸುವುದು ಸೂಕ್ತವೇ ಎಂಬುದನ್ನು ಆಳುವ ಸರ್ಕಾರಗಳು ಮತ್ತೊಮ್ಮೆ ಪರಾಮರ್ಶಿಸಬೇಕಿದೆ’ ಎಂದು ಹೇಳಿದರು.

ADVERTISEMENT

‘ಅಲ್ಪಸಂಖ್ಯಾತರು ಎಂಬ ಗೊಂದಲವೇ ಬೇಕಿಲ್ಲ. ಸಾಮಾಜಿಕವಾಗಿ ತುಳಿತಕ್ಕೊಳಗಾದವರಿಗೆ ಸಮಾನತೆ ದೊರಕುವ ತನಕವೂ ಮೀಸಲಾತಿ ಬೇಕಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಈಗಲೂ ನಮ್ಮ ಸಹಮತವಿದೆ’ ಎಂದು ಗೋಪಾಲ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಭಾರತ ಒಂದಾಗಿರಲಿಕ್ಕೆ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂಬುದೇ ಬೇಕಿಲ್ಲ. ಪ್ರತ್ಯೇಕ ಧರ್ಮದ ಹೋರಾಟದಿಂದ ಜನ ಸಾಮಾನ್ಯರಿಗೆ ಯಾವುದೇ ಲಾಭ ಸಿಗುವುದಿಲ್ಲ. ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನುಕೂಲವಾಗಲಿದೆ. ಇದರ ಬಗ್ಗೆ ಅಧ್ಯಯನ ನಡೆಸುವುದು ಒಳಿತು’ ಎಂದರು.

‘ಸುಪ್ರೀಂಕೋರ್ಟ್‌ ಎಂದೆಂದೂ ಹೊಸ ಧರ್ಮಕ್ಕೆ ಮಾನ್ಯತೆ ನೀಡುವುದಿಲ್ಲ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಇದಕ್ಕೆ ಅನುಮೋದನೆಯನ್ನೇ ನೀಡಿಲ್ಲ. ರಾಜಕೀಯಕ್ಕಾಗಿ ಕೆಲವರು ನಾಟಕವಾಡುತ್ತಿದ್ದಾರೆ. ಧರ್ಮದ ವಿಷಯದಲ್ಲಿ ರಾಜಕೀಯ ಸ್ಪರ್ಶ ಬೇಕಿಲ್ಲ’ ಎಂದು ಗೋಪಾಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.