ADVERTISEMENT

ಅವಧಿ ಪೂರ್ಣಗೊಳಿಸುವೆ: ಭಾರದ್ವಾಜ್‌

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST
ಬೆಂಗಳೂರಿನಲ್ಲಿ ಗುರುವಾರ ನಡೆದ ಅಖಿಲ ಭಾರತ ವಾಣಿಜ್ಯ ಸಮ್ಮೇಳನದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿ.ವಿ ಕುಲಪತಿ ಡಾ. ಬಿ.ಆರ್‌. ಅನಂತನ್‌, ವಿಜಾಪುರ ಮಹಿಳಾ ವಿ.ವಿ ಕುಲಪತಿ ಮೀನಾ ಚಂದಾವರ್ಕರ್‌, ಬೆಂಗಳೂರು ವಿ.ವಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಕೆ. ಈರೇಶಿ ಅವರನ್ನು ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಸನ್ಮಾನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ತಿಮ್ಮೇಗೌಡ ಚಿತ್ರದಲ್ಲಿದ್ದಾರೆ	–ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಗುರುವಾರ ನಡೆದ ಅಖಿಲ ಭಾರತ ವಾಣಿಜ್ಯ ಸಮ್ಮೇಳನದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿ.ವಿ ಕುಲಪತಿ ಡಾ. ಬಿ.ಆರ್‌. ಅನಂತನ್‌, ವಿಜಾಪುರ ಮಹಿಳಾ ವಿ.ವಿ ಕುಲಪತಿ ಮೀನಾ ಚಂದಾವರ್ಕರ್‌, ಬೆಂಗಳೂರು ವಿ.ವಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಕೆ. ಈರೇಶಿ ಅವರನ್ನು ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಸನ್ಮಾನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ತಿಮ್ಮೇಗೌಡ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದಿಂದ ಕಳಿಸಲು ಯಾರು ಏನೇ ಪ್ರಯತ್ನ ಮಾಡಿದರೂ ನನ್ನ ಅವಧಿ ಪೂರ್ಣಗೊಳ್ಳುವವರೆಗೆ ನಾನೇ ರಾಜ್ಯಪಾಲನಾಗಿ ಮುಂದುವರಿ­ಯ­ಲಿದ್ದೇನೆ’ ಎಂದು ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಹೇಳಿದರು. ಗುರುವಾರ ಅಖಿಲ ಭಾರತ ವಾಣಿಜ್ಯ ಸಮ್ಮೇಳನದಲ್ಲಿ ಭಾಗವಹಿ­ಸಿದ್ದ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

‘ರಾಜ್ಯಪಾಲರ ಹುದ್ದೆಗೆ ನಾನು ರಾಜ್ಯದ ಕಾಂಗ್ರೆಸ್‌ ಸರ್ಕಾರದಿಂದ ನೇಮಕಗೊಂಡಿಲ್ಲ. ಆ ಸರ್ಕಾರದ ಯಾವುದೇ ಪ್ರಯತ್ನಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಹಿಂದಿನ ಸರ್ಕಾರವೂ ಇಂತಹ ಪ್ರಯತ್ನ ಮಾಡಿತ್ತು. ಆದರೆ, ರಾಷ್ಟ್ರಪತಿಗಳು ಅದಕ್ಕೆ ಸೊಪ್ಪು ಹಾಕಲಿಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ‘ಮುಂದಿನ ಜೂನ್‌ ತಿಂಗಳವರೆಗೆ ನನ್ನ ಅಧಿಕಾರಾವಧಿ ಇದ್ದು, ಅದನ್ನು ನಾನು ಪೂರ್ಣಗೊಳಿಸಲಿದ್ದೇನೆ’ ಎಂದು ತಿಳಿಸಿದರು.

‘ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲ­ಯದ ಅವ್ಯವ­ಹಾರ­ಗಳ ಕುರಿತು ಆರೋಗ್ಯ ಸಚಿವರು ಮಾತನಾಡಿದ್ದಾರೆ. ವಿ.ವಿಗಳನ್ನು ನಡೆ­ಸು­ವವರು ರಾಜ್ಯ­ಪಾಲರೇ ಹೊರತು ಸಚಿವರಲ್ಲ. ತಪ್ಪುಗಳು ನಡೆದಿದ್ದರೆ ತನಿಖೆ ನಡೆಸಲು ನನ್ನ ಅಭ್ಯಂತರ ಇಲ್ಲ’ ಎಂದು ತಿಳಿಸಿದರು. ‘ಕುಲಪತಿಗಳ ಹುದ್ದೆ ಖಾಲಿಯಾಗಿ ಆರು ತಿಂಗಳಾದರೂ ಧಾರವಾಡ ಕೃಷಿ ವಿ.ವಿ ಸೇರಿದಂತೆ ಕೆಲವು ವಿ.ವಿಗಳಿಗೆ ಕುಲಪತಿಗಳನ್ನು ನೇಮಿಸಲು ರಾಜ್ಯ ಸರ್ಕಾರ ಶೋಧನಾ ಸಮಿತಿ ರಚಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಿಯಮದ ಪ್ರಕಾರ ಆರು ತಿಂಗಳಿಗಿಂತ ಹೆಚ್ಚು ಕಾಲ ಪ್ರಭಾರ ಕುಲಪತಿಗಳು ಕಾರ್ಯ ನಿರ್ವಹಿಸುವಂತಿಲ್ಲ’ ಎಂದೂ ಹೇಳಿದರು. ‘ರಾಜಕಾರಣಿಗಳನ್ನು ಸಿಂಡಿಕೇಟ್‌ಗೆ ಸೇರಿಸಲು ತಿದ್ದುಪಡಿ ತರುವ ಸರ್ಕಾರಕ್ಕೆ ಶೋಧನಾ ಸಮಿತಿ ರಚಿಸುವುದು ತಿಳಿಯುವುದಿಲ್ಲವೆ’ ಎಂದು ಕೇಳಿದರು.

ವಿ.ವಿಗಳ ಗುಣಮಟ್ಟ ಕುಸಿತ
ವಿಶ್ವವಿದ್ಯಾಲಯಗಳ ಗುಣ­ಮಟ್ಟ ದಿನ­ದಿಂದ ದಿನಕ್ಕೆ ಕುಸಿ­ಯುತ್ತಿದ್ದು, ಸಮಯದ ಅಗತ್ಯಗಳಿಗೆ ಅವುಗಳು ಸ್ಪಂದಿಸುತ್ತಿಲ್ಲ’ ಎಂದು ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅಸಮಾ­ಧಾನ ವ್ಯಕ್ತಪಡಿಸಿದರು. ನಗರದಲ್ಲಿ ಗುರುವಾರ ಏರ್ಪಡಿಸ­ಲಾಗಿದ್ದ ಅಖಿಲ ಭಾರತ ವಾಣಿಜ್ಯ ಸಮ್ಮೇಳನವನ್ನು ಉದ್ಘಾಟಿಸಿ  ಮಾತನಾಡಿದರು.

‘ಉತ್ಕೃಷ್ಟವಾಗಿ ಕಾರ್ಯ ನಿರ್ವಹಿಸು­ತ್ತಿದ್ದ ವಿಶ್ವವಿದ್ಯಾಲಯ­ಗಳನ್ನು ಹೋಳು ಮಾಡುವ ಮೂಲಕ ಸರ್ಕಾರವೂ ಅವುಗಳ ಗುಣಮಟ್ಟ ಕುಸಿಯಲು ಕಾರಣ­ವಾಗಿದೆ. ಅಗತ್ಯ ಅನುದಾನ ಮತ್ತು ಬೇಕಾದಷ್ಟು ಸಿಬ್ಬಂದಿ ಇಲ್ಲದೆ ಅವುಗಳು ನರಳುತ್ತಿವೆ. ವಿಶ್ವವಿದ್ಯಾ­ಲಯ­­ಗಳ ಹಲವು ವಿಭಾಗಗಳಿಗೆ ಪ್ರಾಧ್ಯಾಪಕರೇ ಇಲ್ಲ’ ಎಂದರು.

‘ರಾಜ್ಯದ ವಿ.ವಿ ಕಾಯ್ದೆ ಎಷ್ಟೊಂದು ದುರ್ಬಲವಾಗಿದೆ ಎಂದರೆ ಅದಕ್ಕೆ ದಿನಕ್ಕೊಂದು ತಿದ್ದುಪಡಿ ತರಲಾಗು­ತ್ತಿದೆ. ವಿ.ವಿಗಳ ಸಿಂಡಿಕೇಟ್‌ನಲ್ಲಿ ರಾಜ­ಕಾರಣಿಗಳಿಗೆ ಏನು ಕೆಲಸ? ಎಲ್ಲಾ ವಿ.ವಿಗಳ ಸಿಂಡಿಕೇಟ್‌ಗಳಲ್ಲಿ ಅಂಥವರೇ ತುಂಬಿಕೊಂಡಿದ್ದರಿಂದ ಶೈಕ್ಷಣಿಕ ಗುಣ­ಮಟ್ಟ ಸುಧಾರಣೆ ಆಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಿ.ವಿಗಳ ಕುಲಪತಿಗಳನ್ನು ವಿದ್ವಾಂಸರ ತಂಡ ಆಯ್ಕೆ ಮಾಡಬೇಕೇ ಹೊರತು ರಾಜ್ಯಪಾಲರಲ್ಲ. ಈ ವಿಷಯದಲ್ಲಿ ಕಾಯ್ದೆಗೆ ಅಗತ್ಯ ತಿದ್ದುಪಡಿ ಆಗಬೇಕಿದೆ’ ಎಂದ ಅವರು, ‘ಸಂಪೂರ್ಣ ಸ್ವಾಯತ್ತೆ ಮತ್ತು ಧನ ಸಹಾಯವನ್ನು ವಿ.ವಿ­ಗಳಿಗೆ ನೀಡ­ಬೇಕಿದೆ’ ಎಂದು ಪ್ರತಿಪಾದಿಸಿದರು.

‘ವಿ.ವಿಗಳ ಸುಧಾರಣೆಗೆ ಉತ್ಸುಕ­ರಾಗಿರುವ ರಾಷ್ಟ್ರಪತಿಗಳು ಇನ್ನೆರಡು ತಿಂಗಳಲ್ಲಿ ಈ ವಿಷಯದ ಸಂಬಂಧ ಚರ್ಚಿಸಲು ರಾಜ್ಯಪಾಲರ ಸಭೆ ನಡೆಸ­ಲಿ­ದ್ದಾರೆ. ರಾಜಕೀಯ ಹಸ್ತಕ್ಷೇಪದಿಂದ ದೂರ ಇಡುವ ಸುಧಾರಣಾ ಕ್ರಮಗಳ ಕುರಿತು ನಾನು ಪ್ರಸ್ತಾಪ ಮಾಡಲಿ­ದ್ದೇನೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಭಾರತೀಯ ವಾಣಿಜ್ಯ ಸಂಸ್ಥೆ ಅಧ್ಯಕ್ಷ ಡಾ.ಟಿ.ಎ. ಶಿವಾರೆ, ‘ಕೇವಲ 2–3 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕೇಂದ್ರೀಯ ವಿ.ವಿಗಳಿಗೆ ಕೇಂದ್ರ ಅಗತ್ಯ­ಪ್ರಮಾಣದಲ್ಲಿ ಅನುದಾನ ನೀಡುತ್ತದೆ. ಆದರೆ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಉಳಿದ ವಿ.ವಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ’ ಎಂದು ದೂರಿದರು.

‘ಸರ್ಕಾರದ ಈ ಮಲತಾಯಿ ಧೋರಣೆ ನಿಲ್ಲಬೇಕು’ ಎಂದು ಹೇಳಿದ ಅವರು, ‘ಮುಂದಿನ ದಿನಗಳಲ್ಲಿ ಖಾಸಗಿ ವಿ.ವಿಗಳು ಹೆಚ್ಚಾಗಲಿದ್ದು, ಇಂತಹ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಲಿದೆ’ ಎಂದು ಅಭಿಪ್ರಾಯ­ಪಟ್ಟರು. ‘ವಾಣಿಜ್ಯ ಕ್ಷೇತ್ರದಲ್ಲಿ ಸಂಶೋ­ಧನೆ­ಗಳು ಹೆಚ್ಚಬೇಕಿವೆ’ ಎಂದರು.

ಬೆಳಗಾವಿ ರಾಣಿ ಚನ್ನಮ್ಮ ವಿ.ವಿ ಕುಲಪತಿ ಡಾ. ಬಿ.ಆರ್‌. ಅನಂತನ್‌, ವಿಜಾಪುರ ಮಹಿಳಾ ವಿ.ವಿ ಕುಲಪತಿ ಮೀನಾ ಚಂದಾವರ್ಕರ್‌, ಬೆಂಗಳೂರು ವಿ.ವಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಕೆ. ಈರೇಶಿ ಅವರನ್ನು ಸನ್ಮಾನಿಸ­ಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.