ADVERTISEMENT

ಅವಿಶ್ವಾಸ ಮಂಡಿಸಿ: ಈಶ್ವರಪ್ಪ ಸವಾಲು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2012, 22:00 IST
Last Updated 9 ಡಿಸೆಂಬರ್ 2012, 22:00 IST

ಶಿವಮೊಗ್ಗ: ಯಡಿಯೂರಪ್ಪಗೆ ತಾಕತ್ತಿದ್ದರೆ ತಮ್ಮ ಸಮಾವೇಶಕ್ಕೆ ಬಂದಿದ್ದ 14 ಶಾಸಕರಿಂದ ರಾಜೀನಾಮೆ ಕೊಡಿಸಿ, ವಿಧಾನಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಭಾನುವಾರ ಇಲ್ಲಿ ಸವಾಲು ಹಾಕಿದರು.

`ಕಾಂಗ್ರೆಸ್ ಅಧ್ಯಕ್ಷೆ  ಸೋನಿಯಾ ಗಾಂಧಿ ಜನ್ಮದಿನದಂದೇ ಕೆಜೆಪಿ ಸಮಾವೇಶ ನಡೆದಿದ್ದು ಏಕೆ ಎಂಬುದರ ರಹಸ್ಯ ಮುಂದೆ ಬಯಲಾಗಲಿದೆ' ಎಂದು ವ್ಯಂಗ್ಯವಾಡಿದರು. ತಮ್ಮಂದಿಗೆ 60 ರಿಂದ 80 ಶಾಸಕರಿದ್ದಾರೆ ಎನ್ನುತ್ತಿದ್ದ ಯಡಿಯೂರಪ್ಪಗೆ ಹಾವೇರಿ ಸಮಾವೇಶದಿಂದ ಭ್ರಮನಿರಸನವಾಗಿದೆ. ಸಮಾವೇಶದಲ್ಲಿ ಭಾಗವಹಿಸಿದ್ದು ಬೆರಳೆಣಿಕೆಯಷ್ಟು ಶಾಸಕರು ಮಾತ್ರ. ಹಾಗಾದರೆ ಉಳಿದವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ಶಿಸ್ತು ಕ್ರಮ: ಕೆಜೆಪಿ ಸಮಾವೇಶದಲ್ಲಿ ಪಾಲ್ಗೊಂಡವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಡಿಸೆಂಬರ್ 12ರಂದು ಬೆಳಗಾವಿಯಲ್ಲಿ ನಡೆಯುವ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು.

`ಸರ್ಕಾರ ಉರುಳಿದರೂ ಚಿಂತೆ ಇಲ್ಲ. ಕೆಜೆಪಿ ಸಮಾವೇಶದಲ್ಲಿ ಪಾಲ್ಗೊಂಡವರ ವಿರುದ್ಧ ಶಿಸ್ತು ಕ್ರಮ ನಿಶ್ಚಿತ' ಎಂದು ದೃಢವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.