ADVERTISEMENT

ಅಶೋಕ ವಿರುದ್ಧ ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ಬೆಂಗಳೂರು: ಭೂಹಗರಣದಲ್ಲಿ ಸಿಲುಕಿರುವ ಗೃಹ ಹಾಗೂ ಸಾರಿಗೆ ಸಚಿವ ಆರ್.ಅಶೋಕ  ಅವರ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಲೋಕಾಯುಕ್ತ ವಿಶೇಷ ಕೋರ್ಟ್ ಗುರುವಾರ ಆದೇಶಿಸಿದೆ.

ವಕೀಲ ಜಯಪ್ರಕಾಶ ಹಿರೇಮಠ ಅವರು ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಈ ಆದೇಶ ಹೊರಡಿಸಿದ್ದಾರೆ.

ಈ ತನಿಖೆಯ ವರದಿಯನ್ನು ನವೆಂಬರ್ 5ರ ಒಳಗೆ ಕೋರ್ಟ್‌ಗೆ ಒಪ್ಪಿಸುವಂತೆ ಆದೇಶಿಸಿದ್ದಾರೆ.
ಇದರ ತನಿಖೆಯನ್ನು ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) 156ರ ಅಡಿ ನಡೆಸುವಂತೆ ನ್ಯಾಯಾಧೀಶರು ನಿರ್ದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲು ಮಾಡಿ ತನಿಖೆಯನ್ನು ಆರಂಭಿಸಬೇಕಿದೆ.

ADVERTISEMENT

ನಗರದ ಲೊಟ್ಟೆಗೊಲ್ಲಹಳ್ಳಿಯ ಎರಡು ಪ್ರತ್ಯೇಕ ಸರ್ವೆ ನಂಬರ್‌ಗಳ 23 ಗುಂಟೆ ಭೂಮಿಯನ್ನು ಖರೀದಿಸಿ, ನಂತರ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಆದೇಶ ಪಡೆದ ಆರೋಪ ಈ ದೂರಿನಲ್ಲಿದೆ.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಸಚಿವ ಆರ್.ಅಶೋಕ, ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡುವುದಾಗಿ ತಿಳಿಸಿದ್ದಾರೆ.

ರಾಜೀನಾಮೆಗೆ ಆಗ್ರಹ: ಸಚಿವರ ವಿರುದ್ಧ ತನಿಖೆಗೆ ಆದೇಶಿಸಿರುವುದು ಸರಿಯಾದ ತೀರ್ಮಾನ. ಜಮೀನು ಮಾರಾಟ ಮತ್ತು ಖರೀದಿ ನಿಷೇಧ ಕಾಯ್ದೆ (1991) ಯನ್ನು ಸಚಿವ ಅಶೋಕ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ತಿನ ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಆಗ್ರಹಿಸಿದರು.

`ಇದು ನೈತಿಕತೆ ಪ್ರಶ್ನೆ ಅಲ್ಲ, ಕಾನೂನಿನ ಪ್ರಶ್ನೆ. ಶಿಕ್ಷಾರ್ಹ ಅಪರಾಧ ಎಸಗಿರುವ ಅಶೋಕ ಅವರಿಗೆ ಕಾನೂನಿನಡಿ ಅಧಿಕಾರದಲ್ಲಿ ಮುಂದುವರಿಯಲು ಅವಕಾಶವಿಲ್ಲ. ಯಾವುದೇ ರೀತಿಯ ಹಸ್ತಕ್ಷೇಪವಿಲ್ಲದೆ ನಿಷ್ಪಕ್ಷಪಾತವಾಗಿ ಲೋಕಾಯುಕ್ತ ತನಿಖೆಯಾಗಬೇಕಾದರೆ ರಾಜೀನಾಮೆ ನೀಡಲೇಬೇಕು~ ಎಂದರು.

ಭೂ ಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ ಖರೀದಿ ಮಾಡುವಂತಿಲ್ಲ. ಆದರೆ ಅಶೋಕ ಅವರು ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ಖರೀದಿ ಮಾಡಿ ನಂತರ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ನೋಡಿಕೊಂಡಿದ್ದಾರೆ. ಅವರು ಮಾಡಿರುವ ಅಪರಾಧಕ್ಕೆ ಮೂರು ವರ್ಷ ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ನಾಣಯ್ಯ ಹೇಳಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ನಂತರ ಆರ್‌ಟಿಸಿ ಬದಲಾವಣೆ ಮಾಡುವ ಮೂಲಕ ಕೃಷಿ ಭೂಮಿ ಎಂದು ತೋರಿಸಿ ಖರೀದಿ ಮಾಡಿರುವುದು ಶಿಕ್ಷಾರ್ಹ ಅಪರಾಧ ಎಂದರು.

ಸಮಗ್ರ ತನಿಖೆಯಾಗಲಿ: ಅಶೋಕ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಭೂ ಕಬಳಿಕೆಯಲ್ಲಿ ಭಾಗಿಯಾಗಿರುವವರ ಪಟ್ಟಿಯನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಲೋಕಾಯುಕ್ತರು ಮತ್ತು ರಾಜ್ಯಪಾಲರಿಗೆ ನೀಡಲಾಗಿದೆ. ಆ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ ಆಗ್ರಹಿಸಿದರು.

`ಭೂ ಕಬಳಿಕೆಯಲ್ಲಿ ಭಾಗಿಯಾಗಿರುವ ಎಲ್ಲರ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರು ಜೈಲಿಗೆ ಹೋಗಬೇಕು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.