ADVERTISEMENT

ಅಶ್ಲೀಲ ಚಿತ್ರ ಪ್ರಕರಣ: ಬಿದರೂರು, ಓಲೇಕಾರ ಬಹಿರಂಗ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಬೆಂಗಳೂರು: ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಸದನದ ವಿಚಾರಣಾ ಸಮಿತಿ ಅಧ್ಯಕ್ಷ ಶ್ರೀಶೈಲಪ್ಪ ಬಿದರೂರು, ಸದಸ್ಯ ನೆಹರೂ ಓಲೇಕಾರ ಅವರು ದಿನನಿತ್ಯ ಬಾಯಿಗೆ ಬಂದಂತೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ವಿಧಾನಸಭೆಯ ಸ್ಪೀಕರ್ ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

`ವಿಚಾರಣೆ ನಂತರ ಸದನ ಸಮಿತಿ, ಸ್ಪೀಕರ್‌ಗೆ ವರದಿ ನೀಡಬೇಕು. ನಂತರ ಅದನ್ನು ಸದನದಲ್ಲಿ ಮಂಡಿಸಬೇಕು. ಅಲ್ಲಿಯವರೆಗೂ ವರದಿಯನ್ನು ಬಹಿರಂಗಪಡಿಸಬಾರದು. ಇದು ಹಿಂದಿನಿಂದ ನಡೆದುಕೊಂಡು ಬಂದಿದೆ. ಸದನದ ಘನತೆಗೆ ಚ್ಯುತಿ ಬರುವಂತೆ ಹೇಳಿಕೆಗಳನ್ನು ನೀಡುವುದು ಒಳ್ಳೆಯ ಸಂಪ್ರದಾಯ ಅಲ್ಲ~ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಮೂವರು ಮಾಜಿ ಸಚಿವರ ಮೇಲಿನ ಆರೋಪದ ತನಿಖೆಗೆ ಮಾತ್ರ ಸಮಿತಿಯ ಕಾರ್ಯವ್ಯಾಪ್ತಿ ಸೀಮಿತವಾಗಿದೆ. ಇದನ್ನು ಆದೇಶದಲ್ಲೇ ಸ್ಪಷ್ಟವಾಗಿ ತಿಳಿಸಲಾಗಿದೆ. ಇಷ್ಟಾದರೂ ಇನ್ನೂ 8-10 ಶಾಸಕರು ಮೊಬೈಲ್ ವೀಕ್ಷಣೆ ಮಾಡಿದ್ದಾರೆ ಎಂದು ಓಲೇಕಾರ ಹೇಳಿರುವುದು ಸರಿಯಲ್ಲ~ ಎಂದರು.

ಸಮಿತಿಯು ವರದಿ ನೀಡಿ, ಆ ಬಗ್ಗೆ ಸದನ ತೀರ್ಮಾನ ತೆಗೆದುಕೊಳ್ಳುವವರೆಗೂ ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಮತ್ತು ಅವರಿಗೆ ಮೊಬೈಲ್ ನೀಡಿದ ಆರೋಪ ಎದುರಿಸುತ್ತಿರುವ ಕೃಷ್ಣ ಪಾಲೆಮಾರ್ ಅವರಿಗೆ ಕಲಾಪದಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿದರೂರು ನೇತೃತ್ವದ ಸಮಿತಿ ಗುರುವಾರ ಘಟನೆ ಬಗ್ಗೆ ಕಾನೂನು ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿತು. ಮೂವರು ಶಾಸಕರು ಮತ್ತು ಮಾಧ್ಯಮ ಪ್ರತಿನಿಧಿಗಳು ಈ ಸಮಿತಿ ಮುಂದೆ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಬಿದರೂರು, `ಶುಕ್ರವಾರ ಕೂಡ ಸಮಿತಿ ಸಭೆ ಸೇರುತ್ತಿದ್ದು, ಇದೇ 20ರಂದು ಅಂತಿಮವಾಗಿ ವರದಿಯನ್ನು ಸ್ಪೀಕರ್ ಅವರಿಗೆ ಸಲ್ಲಿಸಲಾಗುವುದು~ ಎಂದರು.

20ರಿಂದ ಅಧಿವೇಶನ
ಇದೇ 20ರಿಂದ ವಿಧಾನ ಮಂಡಲ ಅಧಿವೇಶನ ನಡೆಸುವ ಸಂಬಂಧ ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ.

ಈಗಿನ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಮಾ.30ರವರೆಗೆ ಅಧಿವೇಶನ ನಡೆಯಲಿದೆ. ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಇದೇ 21ರಂದು ಬಜೆಟ್ ಮಂಡಿಸಲಿದ್ದಾರೆ ಎಂದು ಬೋಪಯ್ಯ ತಿಳಿಸಿದರು.

ಅಧಿವೇಶನ ಬಗ್ಗೆ ಕಡಿಮೆ ಕಾಲಾವಧಿಯಲ್ಲಿ ನೋಟಿಸ್ ನೀಡಿರುವುದರಿಂದ ಮಾ.26ರವರೆಗೂ ಪ್ರಶ್ನೋತ್ತರ ಕಲಾಪ ಇರುವುದಿಲ್ಲ. ಆದರೆ 26ರಿಂದ 30ರವರೆಗೆ ಪ್ರಶ್ನೋತ್ತರ ಕಲಾಪ ನಡೆಯಲಿದ್ದು, ಶಾಸಕರು ಪ್ರಶ್ನೆಗಳನ್ನು ಕೇಳಬಹುದಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.