ADVERTISEMENT

ಅಸ್ಮಿತೆಯ ಕೊರತೆಯಿಂದ ಬಳಲುತ್ತಿರುವ ಯುವಜನಾಂಗ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 14:34 IST
Last Updated 20 ಡಿಸೆಂಬರ್ 2013, 14:34 IST

ಮೂಡಬಿದರೆ: 'ಕಳೆದೆರಡು ದಶಕಗಳಿಂದ ಅನೂಹ್ಯ ವೇಗದಲ್ಲಿ ಬಂದಪ್ಪಳಿಸುತ್ತಿರುವ ಪಾಶ್ಚತ್ಯ ಸಂಸ್ಕೃತಿಯ ಪ್ರಭಾವ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿನ ವಿನೂತನ ಆವಿಷ್ಕಾರಗಳು ಭಾರತೀಯ ಸಮಾಜವನ್ನು ವಿಘಟನೆಯತ್ತ ದೂಡುತ್ತಿವೆ' ಎಂದು ಡಾ.ಧರಣಿದೇವಿ ಮಾಲಗತ್ತಿ ಆಂತಕ ವ್ಯಕ್ತಪಡಿಸಿದರು.

ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ - 2013ರ ಅಂಗವಾಗಿ ಇಲ್ಲಿನ ರತ್ನಾಕರವರ್ಣ ವೇದಿಕೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ 'ಸಮಾಜ' ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. "ಆಧುನಿಕತೆ, ತಂತ್ರಜ್ಞಾನಗಳು ಸಮಾಜದಲ್ಲಿ ದ್ವೀಪಗಳನ್ನು ಸೃಷ್ಟಿಸುತ್ತಿವೆ. ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೊಸ ಹೊಸ ಸಂಸ್ಕೃತಿಗಳು ಹುಟ್ಟುತ್ತಿದ್ದು, ಅವು ಸಾಮಾನ್ಯ ಜನರಲ್ಲಿ ಆತಂಕವನ್ನು ತಂದೊಡ್ಡುತ್ತಿವೆ' ಎಂದು ಹೇಳಿದರು.

'ಯುವಕರಿಗೆ ಮೌಲ್ಯಗಳಿಲ್ಲ ಎಂಬುದು ಸದ್ಯದ ದೊಡ್ಡ ಆಪಾದನೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಡೆದ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ ಯುವ ಸಮೂಹವನ್ನು ನೋಡಿದರೆ, ಈ ಆಪಾದನೆ ನಿಜವಲ್ಲ ಎನಿಸುತ್ತದೆ. ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಆದರೆ, ಅವರಿಗೆ ಮುಖ್ಯವಾಗಿ ಇರುವುದು ಅಸ್ಮಿತೆಯ ಕೊರತೆ' ಎಂದು ಅವರು ಅಭಿಪ್ರಾಯಪಟ್ಟರು.

'ದುರ್ದೈವ ಎಂದರೆ, ಯುವಕರಿಗೆ ಅಸ್ಮಿತೆಯ ಅಪಕಲ್ಪನೆ ಉಂಟಾಗಿದೆ. ಹೀಗಾಗಿ, ಅವರು ಸಮಾಜ ಕಂಟಕಗಳಲ್ಲಿ ಭಾಗಿಯಾಗುತ್ತಿದ್ದಾರೆ. ಒಂದು ಕಡೆ ಯುವ ವಿದ್ಯಾರ್ಥಿ ಮೂಲವಿಜ್ಞಾನದ ಕಡೆಗೆ ವಿಮುಖರಾಗುತ್ತಿದ್ದಾರೆ. ಮತ್ತೊಂದು ಕಡೆ ಹಳ್ಳಿಗಳಲ್ಲಿ ಅವರು ಕೃಷಿಯನ್ನು ಕೈಬಿಟ್ಟು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಈ ಕಡೆ ನಗರದಲ್ಲಿರುವ ಯುವ ಸಮೂಹವೂ ಕೂಡ ವಿದೇಶಗಳತ್ತ ಮುಖ ಮಾಡುತ್ತಿದೆ' ಎಂದು ವಿಶ್ಲೇಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.