ADVERTISEMENT

ಆಂಧ್ರ ಯುವತಿಯರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಬಾಳೆಹೊನ್ನೂರು: ಪೊಲೀಸರು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದರೂ ಧಿಕ್ಕರಿಸಿ ಮುನ್ನುಗ್ಗಿದ ವಾಹನವನ್ನು ತಡೆದು ವಿಚಾರಿಸಿದಾಗ ಅದರಲ್ಲಿ ಆಂಧ್ರಪ್ರದೇಶದ ಆರು ಯುವತಿಯರು ಪತ್ತೆಯಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಇಲ್ಲಿನ ಭದ್ರಾ ಕಾಫಿ ಶಾಪ್ ಸಮೀಪ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಆ ವೇಳೆಗೆ ಚಿಕ್ಕಮಗಳೂರು ಕಡೆಯಿಂದ ಬಾಳೆಹೊನ್ನೂರಿಗೆ ತೆರಳುತ್ತಿದ್ದ ಆಂಧ್ರಪ್ರದೇಶ ನೋಂದಣಿ ಹೊಂದಿದ ವಾಹನವನ್ನು ಪೊಲೀಸರು ನಿಲ್ಲಿಸುವಂತೆ ಸೂಚಿಸಿದರು.
 
ಅದನ್ನು ಲೆಕ್ಕಿಸದೆ ಚಾಲಕ ವಾಹನ ಮುಂದೆ ಚಲಾಯಿಸಿದ. ತಕ್ಷಣ ಹಿಂಬಾಲಿಸಿದ ಪೊಲೀಸರು ಭದ್ರಾ ಸೇತುವೆ ಸಮೀಪ ವಾಹನದ ಆಕ್ಸೆಲ್ ತುಂಡಾಗಿ ನಿಂತಿದ್ದು ಕಂಡರು. ವಾಹನ ಪರಿಶೀಲಿಸಿದಾಗ ಆಂಧ್ರಪ್ರದೇಶದ ಒಬ್ಬ ಯುವಕ ಮತ್ತು ಆರು ಯುವತಿಯರು ಪತ್ತೆಯಾಗಿದ್ದರು.

ಪೊಲೀಸರು ಅವರನ್ನು ಠಾಣೆಗೆ ಕರೆ ತಂದು ವಿಚಾರಣೆಗೆ ಒಳಪಡಿಸಿದರು. ಯುವತಿಯರು ಕಳಸ ಸಮೀಪದ ರೆಸಾರ್ಟ್‌ನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಆಯೋಜಿಸಿದ್ದ ಅರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ತೆರಳುತ್ತಿರುವುದಾಗಿ ತಿಳಿಸಿದರು ಎನ್ನಲಾಗಿದೆ.

ಇದಾದ ಕೆಲವೇ ಹೊತ್ತಿನಲ್ಲಿ ಅಡಳಿತ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವರ ಆಪ್ತ ಎಂದು ಪರಿಚಯಿಸಿಕೊಂಡ ಬಳ್ಳಾರಿಯ ಕೆ.ಆರ್. ವಿ.ಪ್ರಸಾದ್ ಎಂಬುವವರು ಠಾಣೆಯಲ್ಲಿ ಕಾಣಿಸಿಕೊಂಡರು.

ಬಳ್ಳಾರಿಯ ಖಾಸಗಿ ಅಗ್ರೊ ಸಂಸ್ಥೆ ಉತ್ಪನ್ನಗಳ ಮಾರಾಟಗಾರರ ಸಭೆಯನ್ನು ಕಳಸ ಸಮೀಪದ ರೆಸಾರ್ಟ್‌ನಲ್ಲಿ ಅಯೋಜಿಸಿದ್ದು ಅಲ್ಲಿನ ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ಹೈದರಾಬಾದ್‌ನಿಂದ ಯುವತಿಯರನ್ನು ಕರೆಸಲಾಗಿದೆ.

ಬೇರಾವುದೆ ದುರುದ್ದೇಶ ಹೊಂದಿಲ್ಲ ಎಂದು ಅವರು ಸಮಜಾಯಿಷಿ ನೀಡಿದರು. ಕಾರ್ಯಕ್ರಮಕ್ಕಾಗಿ ಅಯೋಜಕರು ರೆಸಾರ್ಟ್ ಕಾದಿರಿಸಿದ ಬಗ್ಗೆ ಇಮೇಲ್ ಪ್ರತಿ ಪಡೆದ ಪೋಲಿಸರು ಯುವತಿಯರನ್ನು ಬಿಡುಗಡೆ ಮಾಡಿದರು.

ಇದೇ ವೇಳೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಅಯೋಜಕರು ಈ ಬಗ್ಗೆ ಭಾನುವಾರ ಮಧ್ಯಾಹ್ನದವರೆಗೆ ಯಾವುದೆ ಪರವಾನಗಿ ಪಡೆದಿರಲಿಲ್ಲ ಎಂಬ ಅಂಶ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ವಾಹನ ಚಾಲಕನಿಗೆ ದಂಡ ವಿದಿಸುವುದಾಗಿ ಠಾಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ಮಲೆನಾಡು ಭಾಗದ ರೆಸಾರ್ಟ್, ಹೋಮ್‌ಸ್ಟೇಗಳಲ್ಲಿ ನಡೆಯುವ ಸಭೆಗಳಿಗೆ ಆಂಧ್ರ ಯುವತಿಯರು ಹಾಡು, ಕುಣಿತ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.