ADVERTISEMENT

ಆಟೋ ಚಾಲಕನ ಬಾಳು ದಿಕ್ಕಾಪಾಲು

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 18:50 IST
Last Updated 18 ಜನವರಿ 2011, 18:50 IST

ಚನ್ನಪಟ್ಟಣ : ಸುರಿದ ಮಳೆಗೆ ಆಶ್ರಯದ ಸೂರು ಕುಸಿದಿದೆ. ಆ ರಭಸಕ್ಕೆ ಮೂರರ ಪ್ರಾಯದ ಕಂದಮ್ಮ ಬಲಿಯಾಗಿದ್ದಾಳೆ. ಆಟೊ ನಡೆಸುತ್ತಿದ್ದ ಪತಿ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಾರೆ, ಪತ್ನಿಗೆ ಮೂತ್ರಕೋಶದಲ್ಲಿ ಕಲ್ಲು, ಹೃದಯ ಸಂಬಂಧಿ ಬೇನೆಯಿಂದ ಹಾಸಿಗೆ ಹಿಡಿದಿದ್ದಾಳೆ !

ಇದು ಚನ್ನಪಟ್ಟಣದ ಆಟೊ ಚಾಲಕ ಇಮ್ರಾನ್ (24)ನ ಕುಟುಂಬದ ಕರುಣಾಜನಕ ಕಥೆ. ಪಟ್ಟಣದ ಮೆಹದಿನಗರದ ಸಣ್ಣ ಜೋಪಡಿಯಲ್ಲಿ ಪತ್ನಿ ಯಾಸ್ಮಿನ್ (19) ಪುತ್ರಿಯರಾದ ಇರಂ (3) ಹಾಗೂ ಅಂಜಿಲಾ ಇರ್ಫತ್ (1) ಅವರೊಂದಿಗೆ ಇಮ್ರಾನ್ ವಾಸವಿದ್ದರು. ರಿಕ್ಷಾ ಚಾಲನೆಯಿಂದಲೇ ಕುಟುಂಬದ ತುತ್ತಿನ ಚೀಲ ತುಂಬುತ್ತಿತ್ತು.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಗೆ ಇಮ್ರಾನ್ ಅವರ ಜೋಪಡಿಯ  ಒಂದು ಭಾಗದ ಗೋಡೆ ಕುಸಿದು ಬಿತ್ತು. ಹಾಗೆ ಬಿದ್ದ ಗೋಡೆ ವರ್ಷದ ಮಗಳು ಅಂಜಿಲಾ ಇರ್ಫತ್‌ಳನ್ನು ಬಲಿ ತೆಗೆದುಕೊಂಡಿತು. ಮಳೆಗೆ ಮನೆ ಕಳೆದುಕೊಂಡಿದ್ದಕ್ಕೆ ಪರಿಹಾರವಾಗಿ ಜಿಲ್ಲಾಧಿಕಾರಿಗಳ ಒಂದು ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದರು. ದುರಂತವೆಂದರೆ ಪರಿಹಾರದ ರೂಪದಲ್ಲಿ ಒಂದು ಬಿಡಿಗಾಸು ಕೂಡ ಇಮ್ರಾನ್ ಕುಟುಂಬಕ್ಕೆ ಈವರೆಗೂ ತಲುಪಿಲ್ಲ.

ಈ ನಡುವೆ ಇಮ್ರಾನ್ ಅಪಘಾತಕ್ಕೀಡಾಗಿ ಸೊಂಟ ಮುರಿದುಕೊಂಡರು. ಪರಿಣಾಮ ಆಟೊ ಚಾಲನೆ ಬಂದ್ ಆಯಿತು. ಒಂದೆಡೆ ಗಂಡ ಈ ರೀತಿ ನರಳುತ್ತಿರುವಾಗಲೇ ಪತ್ನಿ ಯಾಸ್ಮಿನ್ ಹೃದಯ ಸಂಬಂಧಿ ತೊಂದರೆಯಿಂದಾಗಿ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾದರು. ತಪಾಸಣೆ ನಡೆಸಿದ ವೈದ್ಯರು ಆಕೆಗೆ ಮೂತ್ರ ಕೋಶದಲ್ಲಿ ತೊಂದರೆ ಇದೆ ಎಂದರು. ಎಷ್ಟೇ ಚಿಕಿತ್ಸೆ ನೀಡಿದರೂ ಆಕೆ ಚೇತರಿಸಿಕೊಳ್ಳಲಿಲ್ಲ.  ವೈದ್ಯರೂ ಕೈ ಚೆಲ್ಲಿ ಆಸ್ಪತ್ರೆಯಿಂದ ವಾಪಸು ಕಳುಹಿಸಿಕೊಟ್ಟರು. ಈ ಚಿಕಿತ್ಸೆಗೆ ಆದ ಖರ್ಚನ್ನು ಸಮಾಜ ಸೇವಕ ಜನತಾ ಷಕೀಲ್ ಹಾಗೂ ಮಿತ್ರರು ಭರಿಸಿ, ಮಾನವೀಯತೆ ಮೆರೆದರು.

ಇದೀಗ ಯಾಸ್ಮಿನ್‌ಳ ಬೆನ್ನು ಮೂಳೆಯಲ್ಲೂ ತೊಂದರೆ ಕಾಣಿಸಿಕೊಂಡಿದೆ. ಮೂತ್ರ ವಿಸರ್ಜನೆಗೆ ಹಾಕಿರುವ ಕೆಥೆಟರ್‌ನಿಂದಾಗಿ ಎದ್ದು ನಡೆದಾಡಲೂ ಆಕೆಯಿಂದ ಸಾಧ್ಯವಾಗುತ್ತಿಲ್ಲ. ಸದಾ ಹಾಸಿಗೆಯಲ್ಲೇ ಮಲಗಿರಬೇಕಾದ ಯಾತನಾಮಯ ಬದುಕು ಅವರದ್ದು. ಪತಿ ಒಂದು ಕಡೆ, ಪತ್ನಿ ಇನ್ನೊಂದು ಕಡೆ ಹಾಸಿಗೆ ಹಿಡಿದಿದ್ದಾರೆ.ಪತ್ನಿಗೂ ಚಿಕಿತ್ಸೆ ಕೊಡಿಸಲಾಗದೆ, ದುಡಿಯಲೂ ಆಗದೇ ದೇವರಲ್ಲಿ ಮೊರೆಯಿಡುತ್ತಾ ಕಣ್ಣೀರು ಸುರಿಸುತ್ತಾ ಕುಳಿತಿದ್ದಾರೆ ಇಮ್ರಾನ್.

ಹಣವಿಲ್ಲದೇ ಬದುಕು ಅಸಾಧ್ಯ. ಆದರೆ ನೆರೆಹೊರೆಯವರು ನೆರವು, ಅವರಿವರ ಮನೆಯಲ್ಲಿ ಇಮ್ರಾನ್‌ನ ತಾಯಿ ಕೆಲಸ ಮಾಡಿ ತರುವ ಕೂಲಿ ಹಣದಲ್ಲಿ ಒಪ್ಪತ್ತಿನ ಗಂಜಿ ಸಿಗುತ್ತಿದೆ. ನೋವು,ಬಡತನ ಅರಗಿಸಿಕೊಳ್ಳಲಾಗದ ಇಮ್ರಾನ್ ಮತ್ತು ಅವನ ಪತ್ನಿ  ಯಾತನಾಮಯ ಬದುಕಿನಿಂದ ಮುಕ್ತಿ ಪಡೆಯಲು ದಯಾಮರಣವನ್ನಾದರೂ ನೀಡಲಿ ಎಂದು ಸರ್ಕಾರಕ್ಕೆ ಅಂಗಲಾಚುತ್ತಿದ್ದಾರೆ.ಮಳೆಯಿಂದ ಮನೆ ಕುಸಿದಾಗ, ಷಕೀಲ್ 500ರೂ ಬಾಡಿಗೆಯ ಜೋಪಡಿಯೊಂದನ್ನು ತಮ್ಮ ಖರ್ಚಿನಲ್ಲಿ ಈ ಕುಟುಂಬಕ್ಕೆ ಕೊಡಿಸಿದ್ದಾರೆ. ಗೆಳೆಯರು ಆಗಾಗ್ಗೆ ಅಷ್ಟಿಷ್ಟು ನೆರವು ನೀಡಿದ್ದಾರೆ. ಈ ಕುಟುಂಬದಲ್ಲಿ ಮತ್ತೆ ಬದುಕುವ ಬೆಳಕು ಕಾಣುವುದು ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.