ADVERTISEMENT

ಆತಂಕದಲ್ಲಿ ಕುರಿಗಾರರ ಕುಟುಂಬ

ಮೈಲುಬೇನೆಗೆ ಕುರಿಗಳು ಬಲಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 19:30 IST
Last Updated 11 ಜನವರಿ 2014, 19:30 IST

ಹರಪನಹಳ್ಳಿ:  ತಾಲ್ಲೂಕಿನ ವಿವಿಧೆಡೆ ಮೈಲುಬೇನೆ ಹಾಗೂ ನೀಲಿ ನಾಲಿಗೆ ರೋಗದಂತಹ ವಿಚಿತ್ರ ಕಾಯಿಲೆಗಳು ಕುರಿಗಳಿಗೆ ಆವರಿಸುತ್ತಿವೆ.
ಕಸಬಾ ಹೋಬಳಿ ವ್ಯಾಪ್ತಿಯ ಗೋವೇರಹಳ್ಳಿ, ಅಲಮರಸೀಕೆರೆ, ಮಾಡಲ­ಗೇರಿ ಸೇರಿದಂತೆ ವಿವಿಧೆಡೆ ಕುರಿ­ಗಳಿಗೆ ಮೈಲುಬೇನೆ, ನೀಲಿ ನಾಲಿಗೆ, ಬಾಯಿ­ಹುಣ್ಣು, ಕಾಲು ಹುಣ್ಣು ಸೇರಿ­ದಂತೆ ಹಲವು ರೋಗಗಳು ಕಾಡುತ್ತಿವೆ. ಚಿಕಿತ್ಸೆ ನೀಡಿದರೂ ಹತೋಟಿಗೆ ಬರು­ತ್ತಿಲ್ಲ. ಹೀಗಾಗಿ, ರೋಗ ಆವರಿಸಿಕೊಂಡ ಮೂರ್ನಾಲ್ಕು ದಿನಗಳಲ್ಲೇ  ಕುರಿಗಳು ಸಾವನ್ನಪ್ಪುತ್ತಿವೆ.

ಪಶು ಸಂಗೋಪನಾ ಇಲಾಖೆ ವರದಿ ಪ್ರಕಾರ ಕಸಬಾ, ತೆಲಿಗಿ, ಅರಸೀಕೆರೆ ಹಾಗೂ ಚಿಗಟೇರಿ ಹೋಬಳಿ ವ್ಯಾಪ್ತಿ­ಯಲ್ಲಿ ಜಿಲ್ಲೆಯಲ್ಲಿಯೇ ಅತ್ಯಧಿಕ ಪ್ರಮಾಣ­ದಲ್ಲಿ ಹೈನುಗಾರಿಕೆ ಹಾಗೂ ಕುರಿ ಸಾಕಾಣಿಕೆ ನಡೆಯುತ್ತಿದೆ. ತಾಲ್ಲೂ ಕಿ­ನಲ್ಲಿ ಸುಮಾರು 1.97 ಲಕ್ಷದಷ್ಟು ಕುರಿ ಹಾಗೂ ಮೇಕೆಗಳ ಸಾಕಾಣಿಕೆ ಇದೆ. ಆದರೆ, ಮೈಲು­ರೋಗದಿಂದ ಎಷ್ಟು ಕುರಿಗಳು ಸಾವನ್ನಪ್ಪಿವೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

‘ತಾಲ್ಲೂಕಿನ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ವಾಹನ ಕೊರತೆ ಹಿನ್ನೆಲೆಯಲ್ಲಿ ಸಂಚಾರಿ ಚಿಕಿತ್ಸಾಲಯ ವನ್ನು ಸ್ಥಗಿತಗೊಳಿಸಲಾಗಿದೆ. ಜತೆಗೆ, ಕುರಿಗಳಿಗೆ ಕಾಲಮಾನಕ್ಕೆ ಅನುಗುಣ ವಾಗಿ ತಗಲುವ ಕಾಯಿಲೆಗಳ ಹತೋ ಟಿಗೆ ಸಮರ್ಪಕ ಔಷಧೋಪಚಾರ ಲಭ್ಯವಾಗುತ್ತಿಲ್ಲ. ಸಾಲ ಮಾಡಿ ಕುರಿ ಗಳನ್ನು ಖರೀದಿಸಿದ್ದೇವೆ. ಇಲಾಖೆ ವೈಫಲ್ಯದ ಪರಿಣಾಮ ಕುರಿಗಳು ಬಲಿ ಯಾಗುತ್ತಿವೆ’ ಎಂದು ಉಪ್ಪಾರಗೇರಿ ಹನುಮಂತಪ್ಪ ವಿವರಿಸಿದರು.
ಪ್ರಕರಣ ವರದಿಯಾಗಿಲ್ಲ!

ಜಾನುವಾರುಗಳ ನೀಲಿನಾಲಿಗೆ ರೋಗ ಹೊರತುಪಡಿಸಿದರೆ, ಉಳಿದೆಲ್ಲಾ ರೋಗಗಳ ಹತೋಟಿಗಾಗಿ ಪ್ರತಿವರ್ಷ ಲಸಿಕೆ ಹಾಕಲಾಗುತ್ತದೆ. ಕಳೆದ ವರ್ಷ ಕುರಿಗಳಿಗೆ ಸಿಪಾಕ್ಸ್‌ ಲಸಿಕೆ ಹಾಕಲಾ ಗಿತ್ತು. ಈ ಲಸಿಕೆಯನ್ನು 3 ತಿಂಗಳ ಮೇಲಿನ ವಯೋಮಾನದ ಕುರಿಗೆ ಹಾಕ ಲಾಗುತ್ತದೆ. ಡಿ. 21ರಿಂದ ಜ. 21 ರವರೆಗೂ ಲಸಿಕೆ ಕಾರ್ಯಕ್ರಮ ಜಾರಿ ಯಲ್ಲಿದೆ. ಮೈಲುಬೇನೆ ಬಗ್ಗೆ ಇದು ವರೆಗೂ ಪ್ರಕರಣ ವರದಿ ಯಾಗಿಲ್ಲ.
–ಡಾ.ವೆಂಕಾರೆಡ್ಡಿ, ಪಶುಸಂಗೋ ಪನಾ ಇಲಾಖೆ ಸಹಾಯಕ ನಿರ್ದೇಶಕ

ಮರಕ್ಕೆ ನೇತಾಟ, ಮೈಲಮ್ಮನ ಓಟ!
ಮೈಲುಬೇನೆಯಿಂದ ಸತ್ತ ಕುರಿ ಗಳನ್ನು ಕುರಿಗಾರರು ಬೇವಿನ ಮರಕ್ಕೆ ತಲೆ ಕೆಳಗೆ ಮಾಡಿ ನೇತು ಹಾಕುತ್ತಾರೆ. ಇದರಿಂದ ದಾರಿಹೋಕರರ ದೃಷ್ಟಿ ಬಿದ್ದು, ಮೈಲಮ್ಮ ಗಡಿ ಬಿಟ್ಟು ಹೋಗು ತ್ತಾಳೆ ಎಂಬ ನಂಬಿಕೆ ಇದೆ. ಜತೆಗೆ, ರೋಗಗಳಿಗೆ ತುತ್ತಾದ ಬೇರೆ ಭಾಗದ ಕುರಿಗಾರರು ಈ ಕಡೆ ಸುಳಿಯದಿರಲಿ ಎಂಬ ಸಂದೇಶವೂ ಇದರಲ್ಲಿ ಅಡಗಿದೆ ಎನ್ನುತ್ತಾರೆ ಗೋವೇರಹಳ್ಳಿಯ ಕುರಿಗಾರ ಎಂ.ರಮೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.