ADVERTISEMENT

ಆದೇಶ ತಕ್ಷಣ ಪುನರ್ ಪರಿಶೀಲಿಸಲು ಪ್ರದಾನಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಬೆಂಗಳೂರು: `ತಮಿಳುನಾಡಿಗೆ ನೀರು ಬಿಡಬೇಕು ಎಂದು ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ) ನೀಡಿರುವ ಆದೇಶ ಪುನರ್ ಪರಿಶೀಲಿಸುವ ಪೂರ್ಣ ಅಧಿಕಾರ, ಪ್ರಾಧಿಕಾರದ ಅಧ್ಯಕ್ಷರೂ ಆದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಇದೆ.

ಅವರು ತಮ್ಮ ಆದೇಶವನ್ನು ಕೂಡಲೇ ಪುನರ್ ಪರಿಶೀಲಿಸಬೇಕು~ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಬುಧವಾರ ಇಲ್ಲಿ ಆಗ್ರಹಪಡಿಸಿದರು. ಕೇಂದ್ರ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷರಾಗಿರುವ ಕಾವೇರಿ ಉಸ್ತುವಾರಿ ಸಮಿತಿ (ಸಿಎಂಸಿ) ಗುರುವಾರ ದೆಹಲಿಯಲ್ಲಿ ಸಭೆ ಸೇರಲಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರು ಹಿರಿಯ ಅಧಿಕಾರಿಗಳ ಜೊತೆ ಬೆಂಗಳೂರಿನಲ್ಲಿ ಸಭೆ ನಡೆಸಿದರು.

ಕಾವೇರಿ ವ್ಯಾಪ್ತಿಯ ಎಲ್ಲ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಸಿ.ಎಂ.ಸಿ ಸದಸ್ಯರಾಗಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಈ ಸಭೆಯಲ್ಲಿ ಭಾಗವಹಿಸಿ, ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಿದ್ದಾರೆ ಎಂದು ಅವರು ವಿವರಿಸಿದರು.

`ಸಿಆರ್‌ಎ ಆದೇಶವನ್ನು ಪುನರ್ ಪರಿಶೀಲಿಸುವ ಅಧಿಕಾರ ಪ್ರಧಾನಿಗೆ ಇಲ್ಲ ಎನ್ನುವುದು ಸುಳ್ಳು. ಅಂತರ್‌ರಾಜ್ಯ ಜಲ ವಿವಾದ ಕಾಯ್ದೆ ಪ್ರಕಾರ ಆದೇಶವನ್ನು ಪುನರ್ ಪರಿಶೀಲಿಸುವುದಕ್ಕೆ ಅವಕಾಶ ಇದೆ. ಈ ಕುರಿತು ಪ್ರಧಾನಿ ಅವರಿಗೆ ಪತ್ರದ ಮೂಲಕ ತಿಳಿಸಲಾಗುವುದು~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT