ಕುಶಾಲನಗರ: ಉತ್ತರ ಕೊಡಗಿನ ಗುಡ್ಡೆಹೊಸೂರು ಸಮೀಪದ ಅತ್ತೂರು ಅರಣ್ಯದಲ್ಲಿ ಭಾನುವಾರ ಸಂಜೆ ಕಾಣಿಸಿಕೊಂಡಿದ್ದ ಕಾಳ್ಗಿಚ್ಚು ಸೋಮವಾರವೂ ಮುಂದುವರಿದಿದೆ.
ಹಾರಂಗಿ ಅಣೆಕಟ್ಟೆ ಬಳಿಯ ಅತ್ತೂರು ಕಾಡಿನಿಂದ ಗಾಳಿಯ ರಭಸಕ್ಕೆ ವ್ಯಾಪಿಸಿರುವ ಕಾಳ್ಗಿಚ್ಚು ಸೋಮವಾರ ಸಂಜೆ ಆನೆಕಾಡು ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಹೇರೂರು ಅರಣ್ಯಕ್ಕೆ ವ್ಯಾಪಿಸಿದೆ.
ಕಾಳ್ಗಿಚ್ಚಿನಿಂದ ಅತ್ತೂರು, ಹೇರೂರು ಗುಡ್ಡದ ವ್ಯಾಪ್ತಿಯಲ್ಲಿ 500 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಕಾಡು ಬೆಂಕಿಗೆ ಆಹುತಿಯಾಗಿದೆ. ಕಾಡಿನಲ್ಲಿ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿರುವ ವನ್ಯಪ್ರಾಣಿಗಳು ಬೆಂಕಿಯ ರಭಸಕ್ಕೆ ಹೆದರಿ ಕಾಡಿನಿಂದ ಹೊರಗೆ ಓಡಲಾರಂಭಿಸಿವೆ.
ಕಾಡಿನಲ್ಲಿ ಬೆಂಕಿ ನಂದಿಸಲು ಅರಣ್ಯ ಇಲಾಖೆ, ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟು ಬೆಂಕಿ ವ್ಯಾಪಿಸದಂತೆ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಬೆಂಕಿ ನಂದಿಸಲು ಸ್ಥಳಕ್ಕೆ ತೆರಳಿದ್ದ ಮಡಿಕೇರಿ ವಿಭಾಗದ ಡಿಸಿಎಫ್ ಕೆ.ಎಸ್.ಆನಂದ್ `ಪ್ರಜಾವಾಣಿ~ಗೆ ತಿಳಿಸಿದರು.
ಸೋಮವಾರ ಬೆಂಕಿ ನಂದಿಸುವ ವೇಳೆ ಕುಶಾಲನಗರ ಆರ್‌ಎಫ್‌ಓ ಎಂ.ಎಂ. ಅಚ್ಚಪ್ಪ ಮತ್ತು ಅರಣ್ಯ ವೀಕ್ಷಕರಿಗೆ ಕಾಡಿನಲ್ಲಿ ಕಾಡಾನೆಗಳು ಎದುರುಗೊಂಡಿವೆ. ಕಾಡಾನೆಗಳಿಂದ ತಪ್ಪಿಸಿಕೊಂಡ ಇವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು ಕಂಡುಬಂತು.ಆನೆಕಾಡು ಅರಣ್ಯಕ್ಕೆ ಬೆಂಕಿ ಹರಡದಂತೆ ತಡೆಗಟ್ಟದಿದ್ದಲ್ಲಿ ಕಾಡಿಗೆ ಮತ್ತಷ್ಟು ಹಾನಿಯಾಗುವ ಸಂಭವವಿದೆ ಎನ್ನಲಾಗಿದೆ.
ಚಾಮರಾಜನಗರ ವರದಿ: ಜಿಲ್ಲೆಯ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚು ಸೋಮವಾರ ತಹಬಂದಿಗೆ ಬಂದಿದ್ದು, 60 ಎಕರೆಯಷ್ಟು ಅರಣ್ಯ ಪ್ರದೇಶ ಭಸ್ಮವಾಗಿದೆ.
ಬೆಟ್ಟದ ಮೇಲ್ಭಾಗದಲ್ಲಿಯೇ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ, ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಶಂಕಿಸಿದ್ದಾರೆ. ರಕ್ಷಿತಾರಣ್ಯದ ವ್ಯಾಪ್ತಿಯ ಕೃಷ್ಣಯ್ಯನಕಟ್ಟೆ, ಬೆಲ್ಲತ್ತ, ಮಂಜಿಗುಂಡಿ ಪೋಡು, ಹಾವರಾಣಿ ಗುಡ್ಡ, ಮಲ್ಕಿಬೆಟ್ಟ, ಹೊಸಪೋಡು ಹಾಗೂ ಮುರಟಿಪಾಳ್ಯ ಪ್ರದೇಶದವರೆಗೂ ಕಾಳ್ಗಿಚ್ಚು ಹಬ್ಬಿತ್ತು. 200ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಯ ನೆರವಿನೊಂದಿಗೆ ಬೆಂಕಿ ನಂದಿಸಲಾಗಿದೆ.
ಮುಂಜಾಗ್ರತೆಯಾಗಿ ಬೆಂಕಿ ಅನಾಹುತ ತಡೆಯಲು ವಲಯ ಅರಣ್ಯಾಧಿಕಾರಿ ಒಳಗೊಂಡ 20 ತಂಡ ರಚಿಸಲಾಗಿದೆ. ಕಾಡಂಚಿನ ಗ್ರಾಮಸ್ಥರು ಹಾಗೂ ಅರಣ್ಯದೊಳಗಿರುವ ಗಿರಿಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಿಡಿಗೇಡಿಗಳ ಮೇಲೆ ನಿಗಾ ಇಡಲಾಗಿದೆ. ಬೆಂಕಿ ಅವಘಡ ತಪ್ಪಿಸಲು ಯತ್ನಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.