ADVERTISEMENT

ಆನೆಗಳ ಸ್ಥಳಾಂತರ ಇಲ್ಲ: ಕೋರ್ಟ್‌ಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಬೆಂಗಳೂರು: ಆನೆಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದರಿಂದ ಆನೆಗಳನ್ನು ಸ್ಥಳಾಂತರ ಮಾಡುವುದಾಗಿ ತಿಳಿಸಿ ಹೈಕೋರ್ಟ್ ಅಸಮಾಧಾನಕ್ಕೆ ಗುರಿಯಾಗಿದ್ದ ಸರ್ಕಾರ, ಕೊನೆಗೂ ಅವುಗಳ ಸ್ಥಳಾಂತರ ಯೋಚನೆಯನ್ನು ಕೈಬಿಟ್ಟಿದೆ.

ಈ ಕುರಿತು ಹೈಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿ, ಯಾವುದೇ ಕಾರಣಕ್ಕೂ ಆನೆಗಳ ಸ್ಥಳಾಂತರ ಮಾಡುವುದಿಲ್ಲ ಎಂದು ತಿಳಿಸಿದೆ. 2008ರಲ್ಲಿ ಮೈಸೂರು, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆ ಆನೆಗಳು ದಾಳಿ ನಡೆಸಿದ ಕುರಿತು ಪತ್ರಿಕೆಗಳಲ್ಲಿ ಬಂದಿರುವ ವರದಿಗಳ ಆಧಾರದ ಮೇಲೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ನಡೆಸುತ್ತಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರ ವಕೀಲರುಮಾಹಿತಿ ನೀಡಿದರು.

`ಆನೆಗಳು ನಮಗೆ ಸಮಸ್ಯೆ ತಂದೊಡ್ಡುತ್ತಿವೆ ಎಂದು ಅಂದುಕೊಳ್ಳಬೇಡಿ. ಬದಲಿಗೆ ನಾವೇ ಅವುಗಳಿಗೆ ತೊಂದರೆ ನೀಡುತ್ತಿದ್ದೇವೆ. ಆನೆಗಳ ಸ್ಥಳಾಂತರದ ಕುರಿತು ಯೋಚನೆಯನ್ನೂ ಮಾಡಬೇಡಿ~ ಎಂದು ಕಳೆದ ಬಾರಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ತಿಳಿಸಿತ್ತು. ಆದುದರಿಂದ ಈ ಯೋಚನೆಯಿಂದ ಸರ್ಕಾರ ಹಿಂದಕ್ಕೆ ಸರಿದಿದೆ.

ಖುದ್ದು ಹಾಜರಿಗೆ ಆದೇಶ: ಇನ್ನೊಂದೆಡೆ ಆನೆಗಳ ಹಾವಳಿ ತಡೆಗೆ ಹೈಕೋರ್ಟ್ ಆದೇಶ ಉಲ್ಲಂಘಿಸಿ ಕಾರ್ಯಪಡೆ ರಚಿಸಿರುವ ಹಿನ್ನೆಲೆಯಲ್ಲಿ, ಈ ಬಗ್ಗೆ ಕಾರಣ ಕೇಳಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಜಂಟಿ ನಿರ್ದೇಶಕ (ವನ್ಯಜೀವಿ) ಪ್ರಭಾತ್ ತ್ಯಾಗಿ ಅವರ ಖುದ್ದು ಹಾಜರಿಗೆ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.

ನ್ಯಾಯಾಲಯವೇ ಖುದ್ದು ಕಾರ್ಯಪಡೆ ರಚನೆ ಮಾಡಲಿದ್ದು, ಅದರಲ್ಲಿ ಯಾರ‌್ಯಾರು ಒಳಗೊಂಡಿರಬೇಕು ಎಂಬ ಬಗ್ಗೆ ಮಾಹಿತಿ ನೀಡುವಂತೆ ಕಳೆದ ಬಾರಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ್ದರು.

ಆದರೆ ಈಗಾಗಲೇ ಕಾರ್ಯಪಡೆ ರಚಿಸಿ ಜ. 20ರಂದು ಅಧಿಸೂಚನೆ ಹೊರಡಿಸಿರುವುದಾಗಿ ಅಧಿಕಾರಿಗಳು ನೀಡಿದ್ದ ಮಾಹಿತಿ ಪತ್ರಿಕೆಗಳಲ್ಲಿ ಬಂದಿತ್ತು. ಈ ಹಿನ್ನೆಲೆಯಲ್ಲಿ  ಸರ್ಕಾರವನ್ನು ತೀವ್ರ ತರಾಟೆಗೆ                    ತೆಗೆದುಕೊಂಡರು.

`ಇದು ನ್ಯಾಯಾಲಯದ ಕಲಾಪಕ್ಕೆ ಅಡ್ಡಿಯುಂಟು ಮಾಡಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಗಾಗಿ ನ್ಯಾಯಾಂಗ ನಿಂದನೆ ಆಗಿದೆ ಎಂಬುದು ನಮ್ಮ ಭಾವನೆ~ ಎಂದು ತಿಳಿಸಿದ ನ್ಯಾಯಮೂರ್ತಿಗಳು, ಸಮಜಾಯಿಷಿ ನೀಡುವ ಸಂಬಂಧ ಬರುವ ಮಂಗಳವಾರ      (ಜ. 31) ಅಧಿಕಾರಿ ಖುದ್ದು ಹಾಜರು ಇರಬೇಕು ಎಂದು ನಿರ್ದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.