ಮಾಲೂರು: ಆಹಾರ ಮತ್ತು ನೀರನ್ನು ಹುಡುಕಿಕೊಂಡು 22 ಕಾಡಾನೆಗಳು ತಾಲ್ಲೂಕಿನ ಕಸಬಾ ಹೋಬಳಿಯ ಹುಲ್ಕೂರು, ಮೇಡಹಟ್ಟಿ ಮತ್ತು ಸೊಣ್ಣಹಳ್ಳಿ ಗ್ರಾಮದ ಬಳಿ ಇರುವ ನೀಲಗಿರಿ ತೋಪುಗಳಲ್ಲಿ ಶನಿವಾರ ಕಾಣಿಸಿಕೊಂಡಿವೆ. ಇವು ನಾಲ್ವರ ಮೇಲೆ ದಾಳಿ ನಡೆಸಿದ್ದರಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಅರಣ್ಯದಿಂದ ತಾಲ್ಲೂಕಿನ ಮಾಸ್ತಿ ಹೋಬಳಿಯ ತೀರ್ಥಬಂಡಹಟ್ಟಿ, ಎಂ.ಹೊಸಹಳ್ಳಿ, ದಿನ್ನೇರಿ ಹಾರೋಹಳ್ಳಿ ಮತ್ತು ತಿರುಮಲಹಟ್ಟಿ ಮೂಲಕ ಶುಕ್ರವಾರ ರಾತ್ರಿ ಬಂದ ಆನೆ ಹಿಂಡು ಹುಲ್ಕೂರು ಗ್ರಾಮದ ಕಲ್ಲು ಗುಡ್ಡಗಳಲ್ಲಿ ವಾಸ್ತವ್ಯ ಹೂಡಿದ್ದವು. ಇವುಗಳನ್ನು ನೋಡಲು ಸುತ್ತ-ಮುತ್ತಲಿನ ಸಾವಿರಾರು ಜನರು ಶನಿವಾರ ಬೆಳಗಿನ ಜಾವದಿಂದಲೇ ನೆರೆದಿದ್ದರು.
ಹುಲ್ಕೂರು ಗ್ರಾಮದಿಂದ ನಡಿಗೆ ಮುಂದುವರಿಸಿದ 12 ಆನೆಗಳ ಹಿಂಡು ಚಾಕನಹಳ್ಳಿ, ಕುಂತೂರು ಮೂಲಕ ಸೊಣ್ಣಹಳ್ಳಿ ಗ್ರಾಮದ ನೀಲಗಿರಿ ತೋಪುಗಳಲ್ಲಿ ಬೀಡುಬಿಟ್ಟ ವೇಳೆ ಸೊಣ್ಣಹಳ್ಳಿ ಗ್ರಾಮದ ಕುರಿಗಾಹಿ ಮಲ್ಲಪ್ಪ (60) ಆನೆ ಕಾಳ್ತುಳಿತಕ್ಕೆ ಸಿಲುಕಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಅಬ್ಬೇನಹಳ್ಳಿಯಲ್ಲಿ ದನ ಮೇಯಿಸುತ್ತಿದ್ದ ಮುನಿಯಪ್ಪ (60) ಸಹ ಆನೆ ತುಳಿತದಿಂದ ಸಾವನಪ್ಪಿದ್ದಾರೆ. ಹುಲ್ಕೂರು ಗ್ರಾಮದ ಕಿಟ್ಟಿ, ತಿರುಮಲಹಟ್ಟಿ ಗ್ರಾಮದ ಮಂಜಪ್ಪ, ಮಂಜುನಾಥ್ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಗಾಯಾಳು ಬಗ್ಗೆ ವಿವರ ಲಭ್ಯವಾಗಿಲ್ಲ.
ಘಟನೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಆನೆಗಳನ್ನು ನೋಡಲು ಬಂದ ಜನರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯ 50 ಸಿಬ್ಬಂದಿ, ಅರಣ್ಯ ಇಲಾಖೆಯ 25 ಸಿಬ್ಬಂದಿ ಹರಸಾಹಸ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.