ADVERTISEMENT

ಆನೆ ತುಳಿತಕ್ಕೆ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2011, 19:30 IST
Last Updated 9 ಆಗಸ್ಟ್ 2011, 19:30 IST
ಆನೆ ತುಳಿತಕ್ಕೆ ವ್ಯಕ್ತಿ ಸಾವು
ಆನೆ ತುಳಿತಕ್ಕೆ ವ್ಯಕ್ತಿ ಸಾವು   

ರಾಜರಾಜೇಶ್ವರಿನಗರ (ಬೆಂಗಳೂರು):  ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಮರಿಯಪ್ಪ (40) ಎಂಬಾತ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಘಟನೆ ಕೆಂಚನಪಾಳ್ಯ ಬಳಿ ಮಂಗಳವಾರ ನಡೆದಿದೆ.

 ಗೋಣಿಪುರ ಬಳಿ ನಡೆಯುತ್ತಿರುವ ದೊಡ್ಡಲೈನ್ ವಿದ್ಯುತ್ ಕಾಮಗಾರಿ ಗಾರೆ ಕೆಲಸಕ್ಕೆ ಕೆಂಚನಪಾಳ್ಯದ ವೆಂಕಟೇಶ್ ಮತ್ತು ರವಿಕುಮಾರ್ ಜೊತೆಯಲ್ಲಿ ಮರಿಯಪ್ಪ ಮಂಗಳವಾರ ಬೆಳಿಗೆ 9.30ರ ವೇಳೆಯಲ್ಲಿ ಹೋಗುವಾಗ ಆನೆಯೊಂದು ದಾಳಿ ಮಾಡಿತು. ಮರಿಯಪ್ಪ ತುಳಿತಕ್ಕೆ ಸಿಕ್ಕಿ ಮೃತ ಪಟ್ಟರೆ, ಇತರರು ಪಾರಾದರು.

 ಬನ್ನೇರುಘಟ್ಟದಿಂದ ಮಾಗಡಿ ಅರಣ್ಯ ಪ್ರದೇಶಕ್ಕೆ ತೆರಳುವ ಮದ್ಯೆ ಮೈಸೂರು ರಸ್ತೆ ಹಂಪಾಪುರ ಬಳಿ ವಾಹನಗಳನ್ನು ನೋಡಿ ಆನೆ ಕೆಂಚನಪಾಳ್ಯ ಕಡೆ ಬಂದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟರು.

  ಅಮೃತ ನಾರಾಯಣಸ್ವಾಮಿ ಬೆಟ್ಟದಲ್ಲಿ ತಂಗಿರುವ ಆನೆಯನ್ನು ರಾತ್ರಿ ಬನ್ನೇರುಘಟ್ಟ ಕಾಡಿಗೆ ಹೋಡಿಸಲು ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದರು. ಅರಣ್ಯ ಇಲಾಖೆ ಮುಖ್ಯಸ್ಥ (ವನ್ಯ ಜೀವಿ) ಬಿ.ಕೆ.ಸಿಂಗ್, ತಹಸೀಲ್ದಾರ್ ಮಂಜುನಾಥ್, ವಲಯ ಅರಣ್ಯ ಅಧಿಕಾರಿ ಜಯರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

  ಎಸಿಎಫ್ ಚಕ್ರವರ್ತಿ ಸ್ಥಳಕ್ಕೆ ಭೇಟಿ ನೀಡಿ ಬುಧವಾರ ಎರಡು ಲಕ್ಷ ಪರಿಹಾರ ನೀಡುವ ಭರವಸೆ ನೀಡಿದರು.
  ಅರಣ್ಯ ಮತ್ತು ಸಮಾಜ ಇಲಾಖೆ ವತಿಯಿಂದ ರೂ. 6 ಲಕ್ಷ ಪರಿಹಾರ ದೊರಕಿಸಿಕೊಡಲು ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಸ್ಥಳೀಯ ಜಿ.ಪಂ. ಸದಸ್ಯ ಎ.ಶಿವಕುಮಾರ್, ಗ್ರಾ.ಪಂ. ಅಧ್ಯಕ್ಷ ಬೆಟ್ಟಯ್ಯ, ಮಾಜಿ ಅಧ್ಯಕ್ಷ ರಾಮಚಂದ್ರ ಅವರು ಹೇಳಿದ ಮೇಲೆ ಮರಣೋತ್ತರ ಪರೀಕ್ಷೆಗೆ ಸ್ಥಳೀಯರು ಅನುವು ಾಡಿಕೊಟ್ಟರು.
  ಸ್ಥಳಕ್ಕೆ ಭೇಟಿ ನೀಡಿದ ವಸತಿ ಮಹಾ ಮಂಡಲದ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ವೈಯಕ್ತಿಕವಾಗಿ ಮೃತನ ಕುಟುಂಬದವರಿಗೆ ಹತ್ತು ಸಾವಿರ ರೂಪಾಯಿ ನೆರವು ನೀಡಿದರು.

  ನಂತರ ಮಾತನಾಡಿದ ಅವರು, `ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಆನೆಗಳು ಆಗಿಂದಾಗ್ಗೆ ಕಗ್ಗಲಿಪುರ, ಆನೆಪಾಳ್ಯ ಮತ್ತಿತರರ ಕಡೆ ದಾಳಿ ಮಾಡುತ್ತಿವೆ. ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಅನಾಹುತಗಳಾಗುತ್ತಿವೆ. ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬೇಕು~ ಎಂದು  ಒತ್ತಾಯಿಸಿದರು.

ಸಾಕಾನೆಯ ಪುಂಡಾಟ
ಶಿವಮೊಗ್ಗ:   ಸಾಕಾನೆಯೊಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಮದವೇರಿ ಪುಂಡಾಟ ನಡೆಸಿದ ಘಟನೆ ಮಂಗಳವಾರ ಬೆಳಿಗ್ಗೆ ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ 206ರ ಮಾಚೇನ ಹಳ್ಳಿಯಲ್ಲಿ ನಡೆಯಿತು.

  ಶಿವಮೊಗ್ಗದಿಂದ ಭದ್ರಾವತಿಗೆ ಬೆಳಿಗ್ಗೆ 9ಗಂಟೆ ಸುಮಾರಿಗೆ ಮಾವುತನೊಂದಿಗೆ ತೆರಳುತ್ತಿದ್ದ ತಾಲ್ಲೂಕಿನ ಬೀರನಕೆರೆ ಆಶ್ರಮದ ಆನೆ `ಶ್ರೀದೇವಿ~ ಏಕಾಏಕಿ ಮಾಚೇನಹಳ್ಳಿಯ ಶಿವಮೊಗ್ಗ ಹಾಲು ಉತ್ಪಾದಕರ ಕೇಂದ್ರ (ಶಿಮೂಲ್)ಗೆ ನುಗ್ಗಿ ಕೆಲಕಾಲ ಆತಂಕ ಹುಟ್ಟಿಸಿತು.

  ಮಾವುತನನ್ನು ಕೆಡವಿದ ಆನೆ, ತಕ್ಷಣ ಕೇಂದ್ರದ ಗೇಟ್ ಒಳಗೆ ನುಗ್ಗಿ ಅಲ್ಲಿದ್ದ ಬೈಕ್‌ಸ್ಟ್ಯಾಂಡ್ ಬೀಳಿಸಿತು. ತದನಂತರ ಮರ, ಗಿಡಗಳನ್ನು ಕಿತ್ತಾಡಿ, ಅಡ್ಡಾದಿಡ್ಡಿಯಾಗಿ ಹಾಲಿನ ಕೇಂದ್ರದ ತುಂಬಾ ಓಡಾಡಿತು.

ಇದರಿಂದ ಸಾರ್ವಜನಿಕರು ಗಾಬರಿಯಿಂದ ದಿಕ್ಕಾಪಾಲಾದರು. ಕೊನೆಗೆ ಆವರಣದಲ್ಲಿದ್ದ ಹುಲ್ಲು ತಿಂದ ಮೇಲೆ ಸ್ವಲ್ಪ ಸಮಾಧಾನಗೊಂಡ ಆನೆಯನ್ನು ಮಾವುತರು ನಿಯಂತ್ರಣಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.