ADVERTISEMENT

ಆನೆ ದಾಳಿ: ಡಿಸಿ ಕಚೇರಿ ಮುಂದೆ ಧರಣಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 19:30 IST
Last Updated 21 ಜನವರಿ 2011, 19:30 IST

ಹಾಸನ: ಆಲೂರು ತಾಲ್ಲೂಕಿನ ಚಿನ್ನಳ್ಳಿ ಗ್ರಾಮದ ರೈತ ಜಯರಾಮ್ (55) ಎಂಬುವವರು ಗುರುವಾರ ರಾತ್ರಿ ಆನೆ ತುಳಿದು ಮೃತಪಟ್ಟ ಘಟನೆಯಿಂದ ಕುಪಿತರಾದ ಗ್ರಾಮಸ್ಥರು ಅವರ ಶವವನ್ನು ಶುಕ್ರವಾರ ಇಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು.

ಜಯರಾಮ್ ಅವರು ರಾತ್ರಿ 7.45ರ ಸುಮಾರಿಗೆ ತಮ್ಮ ಮನೆಯ ಕಡೆಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಹಠಾತ್ತನೆ ಬಂದ ಕಾಡಾನೆ ಅವರನ್ನು ತುಳಿದು ತೀವ್ರವಾಗಿ ಗಾಯಗೊಳಿಸಿತ್ತು. ಅವರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ರಾತ್ರಿ 9.45ಕ್ಕೆ ಕೊನೆಯುಸಿರೆಳೆದಿದ್ದರು.

ಈಚಿನ ದಿನಗಳಲ್ಲಿ ಆಲೂರಿನಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಲೇ ಇದ್ದಾರೆ. ಆನೆ ಹಾವಳಿಯ ಹಿನ್ನೆಲೆಯಲ್ಲೇ ಕಳೆದ ಒಂದು ತಿಂಗಳಲ್ಲಿ ಎರಡು ಸಭೆಗಳು, ಒಂದು ರಸ್ತೆ ತಡೆ, ಒಂದೆರಡು ಪ್ರತಿಭಟನೆಗಳು ನಡೆದಿದ್ದವು. ಪ್ರತಿ ಸಲವೂ ಗ್ರಾಮಸ್ಥರಿಗೆ ಸಾಂತ್ವನ ಹೇಳುತ್ತಾರೆಯೇ ವಿನಾ ಆನೆಗಳಿಂದ ರಕ್ಷಣೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಶುಕ್ರವಾರ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಆಲೂರಿನಿಂದ ಆ್ಯಂಬುಲೆನ್ಸ್‌ನಲ್ಲಿ ಶವವನ್ನು ತಂದ ಗ್ರಾಮಸ್ಥರು, ಮೃತರ ಕುಟುಂಬಕ್ಕೆ ಪರಿಹಾರ ನೀಡುವವರೆಗೆ ಮತ್ತು ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೆ ಶವವನ್ನು ಮೇಲೆತ್ತುವುದಿಲ್ಲ ಎಂದು ಹಟ ಹಿಡಿದರು. ಮಾತ್ರವಲ್ಲದೆ ಈ ಭಾಗದ ಸಂಸದ ಎಚ್.ಡಿ.ದೇವೇಗೌಡ, ಜನಪ್ರತಿನಿಧಿಗಳು, ಉಸ್ತುವಾರಿ ಸಚಿವ ಸೋಮಣ್ಣ, ರಜೆಯ ಮೇಲೆ ಹೋಗಿರುವ ಜಿಲ್ಲಾಧಿಕಾರಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಶಾಸಕ ಎಚ್.ಎಸ್.ಪ್ರಕಾಶ್ ಅವರೂ ಪ್ರತಿಭಟನಾಕಾರರ ಜತೆ ಸೇರಿಕೊಂಡರು. ಕೊನೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ ಅವರನ್ನು ಸ್ಥಳಕ್ಕೆ ಕರೆಸಲಾಯಿತು. ಅವರು ಅರಣ್ಯ ಇಲಾಖೆ ವತಿಯಿಂದ ಎರಡು ಲಕ್ಷ ರೂಪಾಯಿಗಳ ಪರಿಹಾರ ಚೆಕ್ ಅನ್ನು ಕುಟುಂಬದವರಿಗೆ ನೀಡಿದರು.

ಉಸ್ತುವಾರಿ ಸಚಿವರಿಗೆ ಕರೆ ಮಾಡಿ ಗ್ರಾಮಸ್ಥರ ಜತೆ ಚರ್ಚಿಸಲು ಶೀಘ್ರದಲ್ಲೇ ಸಭೆ ಆಯೋಜಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಸ್ಥಳದಿಂದಲೇ ಜಿಲ್ಲಾ ಸಚಿವ ವಿ.ಸೋಮಣ್ಣ ಅವರನ್ನು ಸಂಪರ್ಕಿಸಿದ ಅಂಬಾಡಿ ಮಾಧವ, ಘಟನೆ ವಿವರ ತಿಳಿಸಿದರು.

ಇದೇ 23 ಅಥವಾ 26ರಂದು ಕೇಂದ್ರದ ಅಧಿಕಾರಿಗಳ ಜತೆಗೆ ಹಾಸನಕ್ಕೆ ಬಂದು ಜಿಲ್ಲಾಧಿಕಾರಿ ಕಚೇರಿಯಲ್ಲೇ ಸಭೆ ನಡೆಸುವುದಾಗಿ ಸಚಿವ ಸೋಮಣ್ಣ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೊನೆಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.