ADVERTISEMENT

ಆನ್‌ಲೈನ್‌ ಪೂಜೆ, ವಸತಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2015, 19:30 IST
Last Updated 11 ಜೂನ್ 2015, 19:30 IST

ಬೆಂಗಳೂರು: ‘ವಾರ್ಷಿಕ ₹ 1ಕೋಟಿಗೂ ಹೆಚ್ಚು ಆದಾಯವಿರುವ ರಾಜ್ಯದ ಹನ್ನೊಂದು ದೇವಸ್ಥಾನಗಳಲ್ಲಿ ಕೊಠಡಿ, ದೇವರ ದರ್ಶನ, ಅಭಿಷೇಕ, ಅರ್ಚನೆ ಮುಂತಾದ ಸೇವೆಗಳನ್ನು ಮುಂಗಡವಾಗಿ ಕಾಯ್ದಿರಿಸಲು ಆನ್‌ಲೈನ್‌ ಸೇವೆ ಜಾರಿಗೊಳಿಸಲಾಗಿದೆ’ ಎಂದು  ಕಾನೂನು ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.

ಆನ್‌ಲೈನ್‌ ಸೇವೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ರಾಜ್ಯದಲ್ಲಿ 34,563 ಮುಜರಾಯಿ ದೇವಾಲಯಗಳಿದ್ದು, 15 ಸಾವಿರ ದೇವಾಲಯಗಳಲ್ಲಿ ವಸತಿ ಹಾಗೂ ವಿಶೇಷ ಪೂಜೆ ಸಲ್ಲಿಸುವ ವ್ಯವಸ್ಥೆ ಇದೆ.  ಬಹುತೇಕ ದೇವಾಲಯಗಳಲ್ಲಿ ಶನಿವಾರ ಮತ್ತು ಭಾನುವಾರ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡು ಮಧ್ಯವರ್ತಿಗಳು ಶೋಷಿಸುವುದನ್ನು ತಪ್ಪಿಸುವ ಉದ್ದೇಶದಿಂದ ಆನ್‌ಲೈನ್ ಸೇವೆ ಒದಗಿಸಲಾಗಿದೆ’ ಎಂದರು.

ಸಾರ್ವಜನಿಕರು ಬೆಂಗಳೂರು ವನ್‌ ವೆಬ್‌ಸೈಟ್‌ www.bangaloreone.gov.in ಗೆ ಲಾಗಿನ್‌ ಆಗಿ ನೆಟ್‌ ಬ್ಯಾಂಕಿಂಗ್‌ ಮೂಲಕ ಹಣ ಪಾವತಿಸಿ ಕೊಠಡಿಗಳನ್ನು ಕಾಯ್ದಿರಿಸಬಹುದು. ದೇಣಿಗೆಯನ್ನೂ ಇದೇ ರೀತಿ ಪಾವತಿಸಬಹುದು ಎಂದು ಮಾಹಿತಿ ನೀಡಿದರು.

ತಿರುಪತಿಯಲ್ಲಿರುವ ಕರ್ನಾಟಕ ರಾಜ್ಯ ಛತ್ರಗಳಲ್ಲಿ ವಸತಿ ವ್ಯವಸ್ಥೆಯನ್ನು ಆನ್‌ಲೈನ್ ಮೂಲಕ ಕಾಯ್ದಿರಿಸಬಹುದು. ರಾಜ್ಯದ ‘ಎ’ ದರ್ಜೆಯ 150 ಹಾಗೂ ‘ಬಿ‘ ದರ್ಜೆಯ 160 ದೇವಾಲಯಗಳಿಗೆ ಮೊದಲ ಹಂತದಲ್ಲಿ ಈ ಸೇವೆ ಒದಗಿಸಲಾಗುವುದು ಎಂದು ಹೇಳಿದರು.

ಒಬ್ಬರಿಗೆ ಎರಡು ಕೊಠಡಿ: ಕೆಲವರು ತಮ್ಮ ಹೆಸರಿನಲ್ಲಿ ತಿಂಗಳುಗಟ್ಟಲೆ ಕೊಠಡಿಗಳನ್ನು ಕಾಯ್ದಿರಿಸಿ ಬೇರೆಯವರಿಗೆ ಬಾಡಿಗೆಗೆ ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಅಕ್ರಮಗಳನ್ನು ತಡೆಯಲು ಸರ್ಕಾರ ದಿಟ್ಟ ಕ್ರಮ ತೆಗೆದುಕೊಂಡಿದೆ. ಇನ್ನು ಮುಂದೆ ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ (ಯಾವುದಾದರೂ ಅಧಿಕೃತ ಗುರುತಿನ ಚೀಟಿ ತೋರಿಸಿ) ಎರಡು ಕೋಣೆಗಳನ್ನು ಎರಡು ದಿನಗಳ ಮಟ್ಟಿಗೆ ಮಾತ್ರ ಕಾಯ್ದಿರಿಸಬಹುದು ಎಂದರು.
*
ಯಾವ ದೇವಸ್ಥಾನ
* ಕೊಲ್ಲೂರು ಮೂಕಾಂಬಿಕಾ
* ಕುಕ್ಕೆ ಸುಬ್ರಹ್ಮಣ್ಯ
* ಮಲೆ ಮಹದೇಶ್ವರ ಬೆಟ್ಟ
* ಮೈಸೂರು ಚಾಮುಂಡೇಶ್ವರಿ
* ನಂಜನಗೂಡು ಶ್ರೀಕಂಠೇಶ್ವರ
* ಹುಲಿಗೆಮ್ಮ ದೇವಿ ಹೊಸಪೇಟೆ
* ಸವದತ್ತಿ ರೇಣುಕಾ ಯಲ್ಲಮ್ಮ
* ಕಟೀಲು ಶ್ರೀ ದುರ್ಗಾಪರಮೇಶ್ವರಿ
* ಅಲೆವೂರು ಶ್ರೀ ದುರ್ಗಾ ಪರಮೇಶ್ವರಿ
* ತಿರುಮಲ ಕರ್ನಾಟಕ ರಾಜ್ಯ ಛತ್ರ (ಕೊಠಡಿಗಳು ಮಾತ್ರ)
* ಬೆಂಗಳೂರು ಬನಶಂಕರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.