ಬೆಂಗಳೂರು: ‘ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿ ಮಂಗಳವಾರ ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದರು.
ಬೆಳಿಗ್ಗೆ 10.30ರ ಸುಮಾರಿಗೆ ಆರ್.ಸಿ.ಕಾಲೇಜಿನ ಆವರಣದಲ್ಲಿ ಜಮಾಯಿಸಿದ ಕಾರ್ಯಕರ್ತರು, ನಂತರ ಕಮಿಷನರ್ ಕಚೇರಿಯತ್ತ ಜಾಥಾ ಹೊರಟರು. ಇದೇ ವೇಳೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜಭವನದ ಬಳಿ ಪ್ರತಿಭಟನೆ ಮಾಡುತ್ತಿದ್ದರು. ಅಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು, ಯಾವುದೇ ಮುನ್ಸೂಚನೆ ಇಲ್ಲದೆ ಬಂದ ಎಬಿವಿಪಿ ಕಾರ್ಯಕರ್ತರ ರ್‌್ಯಾಲಿಯನ್ನು ಕಂಡು ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು.
ಐದಾರು ನಿಮಿಷಗಳಲ್ಲೇ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಜಮಾಯಿಸಿ, ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಹಾಕಿದರು. ಅವರು ಕಮಿಷನರ್ ಕಚೇರಿಗೂ ಹೋಗದಂತೆ, ರಾಜಭವನಕ್ಕೂ ನುಗ್ಗದಂತೆ ಸರ್ಪಗಾವಲು ಹಾಕಿಕೊಂಡರು.
ಪ್ರತಿಭಟನಾಕಾರರ ಮನವೊಲಿಕೆಗೆ ಮುಂದಾದ ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ, ‘ಪ್ರತಿಭಟನೆ ಮಾಡಲು ನೀವು ಅನುಮತಿ ಇಲ್ಲ. ವಾಪಸ್ ಹೋಗಿ’ ಎಂದು ಹೇಳಿದರು. ಅದಕ್ಕೆ ಒಪ್ಪದ ಅವರು, ‘ಕಚೇರಿಗೆ ಮುತ್ತಿಗೆ ಹಾಕೇ ಹಾಕುತ್ತೇವೆ’ ಎನ್ನುತ್ತಾ ಸಿಬ್ಬಂದಿಯನ್ನು ತಳ್ಳಿಕೊಂಡು ಸಾಗಿದರು.
ಈ ವೇಳೆ ಸಿಬ್ಬಂದಿ ಲಾಠಿ ಬೀಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಸಿಟ್ಟಿಗೆದ್ದ ಕಾರ್ಯಕರ್ತರು, ಪೊಲೀಸರ ವಾಹನಗಳ ಮೇಲೆ ಏರಿ ಘೋಷಣೆಗಳನ್ನು ಕೂಗಿದರು. ಈ ಹಂತದಲ್ಲಿ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ ಸೇರಿ 15ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದರು.
ಲಾಠಿ ಪ್ರಹಾರದಿಂದ ಚದುರಿದ ಕಾರ್ಯಕರ್ತರು, ಆನಂದ ರಾವ್ ವೃತ್ತಕ್ಕೆ ತೆರಳಿ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ಮುಂದುವರಿಸಿದರು. ಆ ನಂತರ ಪೊಲೀಸರು ಬಂಧಿತ ಕಾರ್ಯಕರ್ತರನ್ನು ಬಿಟ್ಟು ಕಳುಹಿಸಿದರು.
ಬಿಡುಗಡೆ ನಂತರ ಪ್ರತಿಭಟನಾ ಸ್ಥಳಕ್ಕೆ ತೆರಳಿದ ವಿನಯ್ ಬಿದರೆ, ‘ನಮ್ಮ ಹೋರಾಟ ಪೊಲೀಸರ ವಿರುದ್ಧವಲ್ಲ. ಕಾರ್ಯಕ್ರಮ ಸಂಘಟಸಿದ್ದ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಸಂಸ್ಥೆ ವಿರುದ್ಧ. ಆ ಸಂಸ್ಥೆಯನ್ನು ದೇಶದಾದ್ಯಂತ ನಿಷೇಧಿಸಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಸುತ್ತೇವೆ’ ಎಂದು ಹೇಳಿದರು.
ಮಹಿಳಾ ಸಿಬ್ಬಂದಿ ಇರಲಿಲ್ಲ: ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿತ್ತು. ಮಹಿಳಾ ಪೊಲೀಸರು ಇರದಿದ್ದ ಕಾರಣ, ಪುರುಷ ಸಿಬ್ಬಂದಿಯೇ ಅವರನ್ನು ನಿಯಂತ್ರಿಸಲು ಮುಂದಾದರು. ಇದರಿಂದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿತು. ಈ ವೇಳೆ ವಿದ್ಯಾರ್ಥಿನಿಯರ ಪರಬಂದ ಯುವಕರ ಮೇಲೂ ಪೊಲೀಸರು ಲಾಠಿ ಬೀಸಿದರು.
‘ದೇಶದ್ರೋಹ ಕೃತ್ಯ ಎಸಗಿದವರನ್ನು ಬಂಧಿಸುವುದನ್ನು ಬಿಟ್ಟು, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ನಮ್ಮ ಮೇಲೆ ಕೈ ಮಾಡುತ್ತಿದ್ದಾರೆ. ಪೊಲೀಸರು ಸಹ ದೇಶದ್ರೋಹಿಗಳಂತೆ ವರ್ತಿಸುತ್ತಿದ್ದಾರೆ’ ಎಂದು ಪ್ರತಿಭಟನಾನಿರತ ವಿದ್ಯಾರ್ಥಿನಿ ಶಿಲ್ಪಾ ದೂರಿದರು.
‘ಎನ್‌ಐಎಗೆ ಒಪ್ಪಿಸಿ’
‘ಸೇನೆ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿರುವುದು ಖಂಡನೀಯ.
ಆ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಒಪ್ಪಿಸಬೇಕು’ ಎಂದು ನಿವೃತ್ತ ಕರ್ನಲ್ ಎ.ಜೆ.ಭಂಡಾರಿ ಅವರು, ಕಮಿಷನರ್ ಕಚೇರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.
ಅನುಮತಿ ಕೊಟ್ಟಿರಲಿಲ್ಲ
‘ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಸಂಸ್ಥೆಯು ‘ಬ್ರೋಕನ್‌್ ಫ್ಯಾಮಿಲೀಸ್’ ಕಾರ್ಯಕ್ರಮವನ್ನು ಒಳಾಂಗಣದಲ್ಲಿ ಆಯೋಜಿಸಿದ್ದರಿಂದ ಇಲಾಖೆಯ ಅನುಮತಿ ಕೇಳಿರಲಿಲ್ಲ. ಆದರೆ, ಕಾರ್ಯಕ್ರಮದ ಮಾಹಿತಿ ನೀಡಿದ್ದರು. ಮುಂಜಾಗ್ರತಾ ಕ್ರಮವಾಗಿ ಅಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಎಸ್.ಮೇಘರಿಕ್ ತಿಳಿಸಿದ್ದಾರೆ.
ಜೆಎನ್‌ಯು ಪ್ರಕರಣದ ಮಾದರಿ ತನಿಖೆ
‘ದೆಹಲಿಯ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ವಿರುದ್ಧದ ಪ್ರಕರಣದಲ್ಲಿ ಪೊಲೀಸರು ಅನುಸರಿಸಿದ ತನಿಖಾ ಮಾರ್ಗ ಹಾಗೂ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳ ಬಗ್ಗೆ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಚರಣ್‌ರೆಡ್ಡಿ ಅವರು ಅಧ್ಯಯನ ನಡೆಸುತ್ತಿದ್ದಾರೆ. ಅದೇ ವಿಧಾನದಲ್ಲಿ ಈ ಪ್ರಕರಣದ ತನಿಖೆ ನಡೆಸಲಾಗುವುದು’ ಎಂದು ಇಲಾಖೆಯ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಐವರ ವಿಚಾರಣೆ
ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಿದ ಆರೋಪ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಜೆ.ಸಿ.ನಗರ ಉಪವಿಭಾಗದ ಎಸಿಪಿ ನೇತೃತ್ವದ ತಂಡ, ಐದು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
‘ಘಟನೆಗೆ ಸಂಬಂಧಿಸಿದಂತೆ ದೆಹಲಿ ಮೂಲದ ಒಬ್ಬ ಹಾಗೂ ನಗರದಲ್ಲಿ ನೆಲೆಸಿರುವ ನಾಲ್ವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಎಫ್‌ಐಆರ್ ದಾಖಲಾದ ಕೂಡಲೇ ಸಂಘಟಕರು ಹಾಗೂ ಕೆಲವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಅದರನ್ವಯ ತನಿಖಾ ತಂಡದ ಎದುರು ಹಾಜರಾದ ವ್ಯಕ್ತಿಗಳು, ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಅವುಗಳ ಪರಿಶೀಲನೆ ನಡೆದಿದೆ.’
‘ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಸಂಸ್ಥೆಯ ಸಿಬ್ಬಂದಿ, ಅಂದಿನ ಕಾರ್ಯಕ್ರಮವನ್ನು ಹ್ಯಾಂಡಿಕ್ಯಾಮ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ನಮಗೆ ಒಂದೆರಡು ನಿಮಿಷದ ವಿಡಿಯೊಗಳು ಮಾತ್ರ ಲಭ್ಯವಾಗಿವೆ. ಹೀಗಾಗಿ ಎಡಿಟ್ ಮಾಡಿರದ ಪೂರ್ಣ ವಿಡಿಯೊ ನೀಡುವಂತೆ ಸಂಸ್ಥೆಯ ಸಿಬ್ಬಂದಿಗೆ ಸೂಚಿಸಿದ್ದೇವೆ.’
‘ಸಂಸ್ಥೆಯ ಎಲ್ಲ ಸದಸ್ಯರ ಪೂರ್ವಪರ ಪರಿಶೀಲಿಸುವಂತೆಯೂ ಸಿಬ್ಬಂದಿಗೆ ಸೂಚಿಸಿದ್ದೇವೆ. ಕೆಲ ಸದಸ್ಯರು, ನಗರ ತೊರೆದಿದ್ದಾರೆ. ಅವರು ವಾಸವಿದ್ದ ಸ್ಥಳಗಳಿಗೆ ತೆರಳಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
* ಎಬಿವಿಪಿಯವರು ನೀಡಿರುವ ದೂರಿನ ಮೇಲೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಖಂಡಿತ. ಲಾಠಿ ಪ್ರಹಾರ ನಡೆಸಿರುವ ಬಗ್ಗೆ ಮಾಹಿತಿ ಇಲ್ಲ
-ಸಿದ್ದರಾಮಯ್ಯ, ಮುಖ್ಯಮಂತ್ರಿ
* ಸೈನಿಕರ ವಿರುದ್ಧ ಘೋಷಣೆ ಕೂಗುವುವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಲಾಠಿ ಪ್ರಹಾರ ಮಾಡಿರುವುದು ಖಂಡನೀಯ
-ಜಗದೀಶ ಶೆಟ್ಟರ್ ವಿಧಾನಸಭೆ ವಿರೋಧ ಪಕ್ಷದ ನಾಯಕ
* ದೇಶದ್ರೋಹಿ ಚಟುವಟಿಕೆ ನಡೆಸಿದವರ ವಿರುದ್ಧ ಹೋರಾಡುತ್ತಿರುವ ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿರುವುದು ಖಂಡನೀಯ
-ಬಿ.ಎಸ್. ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷ
* ಪ್ರತಿಭಟನಾಕಾರರ ಮನವೊಲಿಸುವ ಯತ್ನ ಕೈಗೂಡದಿದ್ದಾಗ ಪರಿಸ್ಥಿತಿಗೆ ತಕ್ಕಂತೆ ಸಿಬ್ಬಂದಿ ಕೆಲಸ ಮಾಡಿದ್ದಾರೆ
-ಸಂದೀಪ್ ಪಾಟೀಲ ಡಿಸಿಪಿ, ಕೇಂದ್ರ ವಿಭಾಗ
ದೂರು ಆಧಾರರಹಿತ: ಆಮ್ನೆಸ್ಟಿ
‘ಜೆ.ಸಿ.ನಗರ ಠಾಣೆಯಲ್ಲಿ ದಾಖಲಾದ ದೂರಿನ ಅಂಶಗಳಿಗೆ ಯಾವುದೇ ಆಧಾರಗಳಿಲ್ಲ’ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌್ ಇಂಡಿಯಾ ಸ್ಪಷ್ಟಪಡಿಸಿದೆ.
ಈ ಸಂಬಂಧ ಸಂಸ್ಥೆಯಿಂದ ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದೆ. ‘ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಬಲಿಪಶುವಾದ ಕುಟುಂಬಗಳ ಕಥೆ ಆಲಿಸುವುದು ಹಾಗೂ ಅವುಗಳಿಗೆ ಸಲ್ಲಬೇಕಾದ ಸಂವಿಧಾನದ ಹಕ್ಕು ಅನುಭವಿಸುವುದನ್ನು ಈ ನಾಗರಿಕ ಸಮಾಜದ ಸಂಘಟನೆಗಳು ತಡೆಯುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
‘ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಹಾಗೂ ಕಾಶ್ಮೀರದಲ್ಲಿ ಕುಟುಂಬಗಳಿಗೆ ನ್ಯಾಯದ ನಿರಾಕರಣೆ ಬಗ್ಗೆ ಚರ್ಚಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆಲವರು ‘ಸ್ವಾತಂತ್ರ್ಯ’ ಘೋಷಣೆ ಕೂಗಿದರು. ಅವರ ಪರ ಹಾಗೂ ವಿರುದ್ಧ ನಾವು ನಿಲ್ಲುವುದಿಲ್ಲ. ಕಾರ್ಯಕ್ರಮದ ಎಲ್ಲ ವಿಡಿಯೊ ತುಣುಕುಗಳನ್ನು ಪೊಲೀಸರಿಗೆ ನೀಡಿದ್ದೇವೆ’ ಎಂದು ತಿಳಿಸಲಾಗಿದೆ.
‘ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಮಾತನಾಡಲು ನಗರದಲ್ಲಿರುವ ಕಾಶ್ಮೀರಿ ಪಂಡಿತರಿಗೂ ಆಹ್ವಾನ ನೀಡಲಾಗಿತ್ತು’ ಎಂದು ಹೇಳಲಾಗಿದೆ. ‘ಬಲೂಚಿಸ್ತಾನದ ರಾಜಕೀಯ ಕಾರ್ಯಕರ್ತರ ಹತ್ಯೆ, ಅಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ನಮ್ಮ ಸಂಸ್ಥೆ ಪಾಕಿಸ್ತಾನದಲ್ಲೂ ಕೆಲಸ ಮಾಡಿದೆ’ ಎಂದು ವಿವರಿಸಲಾಗಿದೆ.
ಕಾಯ್ದೆ ಉಲ್ಲಂಘನೆ ‘ಆಮ್ನೆಸ್ಟಿ’ ವಿರುದ್ಧ ಕೇಂದ್ರದ ತನಿಖೆ
ನವದೆಹಲಿ (ಪಿಟಿಐ): ಸ್ವಯಂ ಸೇವಾ ಸಂಸ್ಥೆ ಆಮ್ನೆಸ್ಟಿ ಇಂಟರ್ ನ್ಯಾಷನಲ್ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ) ಉಲ್ಲಂಘಿಸಿರುವ ಸಾಧ್ಯತೆಗಳ ಕುರಿತು ಕೇಂದ್ರ ಗೃಹ ಸಚಿವಾಲಯ ತನಿಖೆ ಆರಂಭಿಸಿದೆ.
ಬೆಂಗಳೂರಿನಲ್ಲಿ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಗಿದೆ ಎನ್ನುವ ಆರೋಪದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಎಫ್‌ಸಿಆರ್ಎ ಅಡಿಯಲ್ಲಿ ಈ ಸಂಸ್ಥೆ ನೋಂದಣಿಯಾಗಿಲ್ಲ. ಬೆಂಗಳೂರಿನಲ್ಲಿ ನಡೆದ ಘಟನೆಯಿಂದಾಗಿ ಸಂಸ್ಥೆಯು ನೋಂದಣಿಗೆ ಸಲ್ಲಿಸಿರುವ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಾಂಶಗಳು
* ಎಬಿವಿಪಿಯ 15ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ, ಬಿಡುಗಡೆ
* ಲಾಠಿ ಪ್ರಹಾರದ ನಂತರ ಆನಂದ ರಾವ್ ವೃತ್ತದ ಬಳಿ ಪ್ರತಿಭಟನೆ
* ‘ಪೊಲೀಸರೂ ದೇಶದ್ರೋಹಿಗಳಂತೆ ವರ್ತಿಸುತ್ತಿದ್ದಾರೆ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.