ADVERTISEMENT

ಆಯುಷ್ಮಾನ್‌ ಭಾರತ್‌ ಜ್ಯೋತಿ ಸಂಜೀವಿನಿ ವಿಲೀನ

ಹೆಚ್ಚುವರಿ ತೃತೀಯ ಹಂತದ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 17 ಮೇ 2019, 20:30 IST
Last Updated 17 ಮೇ 2019, 20:30 IST
   

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ಭದ್ರತೆ ಒದಗಿಸುತ್ತಿರುವ ‘ಜ್ಯೋತಿ ಸಂಜೀವಿನಿ’ ಯೋಜನೆಯನ್ನು ‘ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿಸಂಯೋಜನೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2014–15ನೇ ಸಾಲಿನಲ್ಲಿ ಜಾರಿಯಾದ ‘ಜ್ಯೋತಿ ಸಂಜೀವಿನಿ’ ಯೋಜನೆಯಡಿ ಹೃದ್ರೋಗ, ಕ್ಯಾನ್ಸರ್, ಮೂತ್ರ ಪಿಂಡದ ಕಾಯಿಲೆ, ನರರೋಗ, ಸುಟ್ಟಗಾಯ, ಗಂಭೀರ ಸ್ವರೂಪದ ಅಪಘಾತಗಳಿಗೆ ಆಸ್ಪತ್ರೆಗಳಲ್ಲಿ ನಗದು ರಹಿತ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ.

ಅದೇ ರೀತಿ, ಏಳು ಬಗೆಯ ಮಾರಣಾಂತಿಕ ಕಾಯಿಲೆಗಳಿಗೆ ಸಂಬಂಧಿಸಿದಂತೆ 450 ಚಿಕಿತ್ಸಾ ವಿಧಾನ ಮತ್ತು 50 ಮುಂದುವರಿದ ಚಿಕಿತ್ಸಾ ಸೌಲಭ್ಯಗಳು ನಗದುರಹಿತವಾಗಿ ದೊರೆಯುತ್ತಿದೆ. ಇದೀಗ900 ತೃತೀಯ ಹಂತದ ಚಿಕಿತ್ಸಾ ವಿಧಾನ ಹಾಗೂ169 ತುರ್ತು ಚಿಕಿತ್ಸಾ ವಿಧಾನಗಳು ಹೆಚ್ಚುವರಿಯಾಗಿ ಸಿಗಲಿವೆ.

ADVERTISEMENT

ರಾಜ್ಯ ಸರ್ಕಾರಿ ನೌಕರರ ಜತೆಗೆ ಅವಲಂಬಿತ ಕುಟುಂಬದ ಸದಸ್ಯರು ಕೂಡ ‘ಜ್ಯೋತಿ ಸಂಜೀವಿನಿ’ ಯೋಜನೆಯಡಿ ಸಿಗುವ ಹೆಚ್ಚುವರಿ ಚಿಕಿತ್ಸೆಯ ಲಾಭ ಪಡೆದುಕೊಳ್ಳಬಹುದಾಗಿದೆ.ಗಂಭೀರವಾದ ಏಳು ಚಿಕಿತ್ಸೆಗಳಿಗೂ ಪ್ರತ್ಯೇಕ ಪ್ಯಾಕೇಜ್ ದರವನ್ನು ಸರ್ಕಾರ ನಿಗದಿಪಡಿಸಿದೆ.

2018 ರ ಮಾರ್ಚ್‌ 2ರಂದು ರಾಜ್ಯದಲ್ಲಿ ‘ಆರೋಗ್ಯ ಕರ್ನಾಟಕ’ ಯೋಜನೆ ಜಾರಿಯಾಗಿದ್ದು, ನವೆಂಬರ್ 15, 2018ರಂದು ಕೇಂದ್ರ ಸರ್ಕಾರದ ‘ಆಯುಷ್ಮಾನ್ ಭಾರತ್’ ಯೋಜನೆಯೊಂದಿಗೆ ‘ಆರೋಗ್ಯ ಕರ್ನಾಟಕ’ ಯೋಜನೆ ವಿಲೀನಗೊಂಡು,‘ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ’ ಯೋಜನೆಯಾಗಿ ಬದಲಾಗಿದೆ. ಈ ಯೋಜನೆಯಲ್ಲಿ 1,614 ಪ್ರಥಮ ಹಾಗೂ ದ್ವಿತೀಯ ಹಂತದ ಚಿಕಿತ್ಸಾ ವಿಧಾನ, 900 ತೃತೀಯ ಹಂತದ ಚಿಕಿತ್ಸಾ ವಿಧಾನ, 169 ತುರ್ತು ಚಿಕಿತ್ಸಾ ವಿಧಾನ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.