ADVERTISEMENT

ಆರು ವರ್ಷಗಳಲ್ಲಿ 638 ಆನೆ ಸಾವು!

ಸುಭಾಸ.ಎಸ್.ಮಂಗಳೂರ
Published 29 ನವೆಂಬರ್ 2012, 20:28 IST
Last Updated 29 ನವೆಂಬರ್ 2012, 20:28 IST

ಮೈಸೂರು: ಬಂಡೀಪುರ, ನಾಗರಹೊಳೆ, ಹಾಸನ, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧೆಡೆಯ ಆನೆ ಆವಾಸ ಸ್ಥಾನಗಳಲ್ಲಿ 2007 ರಿಂದ 2012ರ ವರೆಗೆ 638 ಆನೆಗಳು ಹಾಗೂ ಆನೆ ದಾಳಿಯಿಂದ ನೂರಾರು ಮಂದಿ ಮೃತಪಟ್ಟಿದ್ದಾರೆ ಎಂದು ಕರ್ನಾಟಕ ಆನೆ ಕಾರ್ಯ ಪಡೆ (ಕೆಎಟಿಎಫ್) ಹೈಕೋರ್ಟ್‌ಗೆ  ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದೆ.

2010ರ ಆನೆ ಗಣತಿ ಪ್ರಕಾರ ರಾಜ್ಯದ 14,500 ಚದರ ಕಿ.ಮೀ ವ್ಯಾಪ್ತಿಯಲ್ಲಿ 5,300-6,200 ಆನೆಗಳು ಇವೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಅರಣ್ಯ ಇಲಾಖೆ, ಮೃಗಾಲಯ, ದೇವಸ್ಥಾನ, ಮಠಗಳು ಸೇರಿದಂತೆ ಖಾಸಗಿ ಮಾಲೀಕತ್ವದಲ್ಲಿ 159 ಆನೆಗಳು ಇವೆ. ಬಂಡೀಪುರ, ನಾಗರಹೊಳೆ, ಹಾಸನ ಜಿಲ್ಲೆಯ ಆಲೂರು, ಸಕಲೇಶಪುರ, ಅರಕಲಗೂಡಿನಲ್ಲಿ 2007-08 ರಲ್ಲಿ 105, 2008-09ರಲ್ಲಿ 96, 2009-10 ರಲ್ಲಿ 103, 2010-11 ರಲ್ಲಿ 100 ಹಾಗೂ 2011-12 ರಲ್ಲಿ 103 ಆನೆಗಳು ಸ್ವಾಭಾವಿಕ ಮರಣ ಹೊಂದಿವೆ. ಆನೆ ದಾಳಿಯಿಂದ ಸಾವಿರಾರು ರೈತರು ಫಲವತ್ತಾದ ಕಬ್ಬು, ಕಾಫಿ, ಭತ್ತ, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ಕಳೆದುಕೊಂಡಿದ್ದಾರೆ ಎಂಬ ವಿವರಗಳನ್ನು ನೀಡಿದೆ.

ಏಳು ವರ್ಷಗಳಲ್ಲಿ ದಂತ ಅಪಹರಣಕ್ಕಾಗಿ 10 ಆನೆಗಳನ್ನು ಕೊಲ್ಲಲಾಗಿದೆ. ಗುಂಡೇಟು ತಗುಲಿ 27, ವಿದ್ಯುತ್ ಸ್ಪರ್ಶದಿಂದ 78 ಹಾಗೂ ಇತರ ಕಾರಣಗಳಿಂದ 15 ಆನೆಗಳು ಮೃತಪಟ್ಟಿವೆ. 2007 ರಿಂದ 2012ರ ವರೆಗೆ 302.52 ಲಕ್ಷ ರೂಪಾಯಿ ಬೆಳೆ ಪರಿಹಾರ ನೀಡಲಾಗಿದೆ. ಆನೆಗಳ ಸಾವಿನ ಪ್ರಮಾಣ ತಗ್ಗಿಸಲು ಬಂಡೀಪುರ, ನಾಗರಹೊಳೆಯನ್ನು ಆನೆ ಸಂರಕ್ಷಣಾ ಪ್ರದೇಶ ಎಂದು, ಕಾವೇರಿ ನದಿ ಉತ್ತರ ಭಾಗ, ಸಕಲೇಶಪುರವನ್ನು ಆನೆ- ಮಾನವ ಸಂಘರ್ಷ ಪ್ರದೇಶ ಎಂದು ಘೋಷಿಸಲಾಗಿದೆ. ಆಲೂರು, ಅರಕಲಗೂಡು, ಸಾವನದುರ್ಗದಿಂದ (ತುಮಕೂರು) ಆನೆಗಳನ್ನು ಸ್ಥಳಾಂತರಿಸುವ ಸಂಬಂಧ ಮಾತುಕತೆ ನಡೆದಿದ್ದು, ಇದನ್ನು ಆನೆ ಸಾಗಣೆ ಪ್ರದೇಶ ಎಂದು ಕೆಎಟಿಎಫ್ ಗುರುತಿಸಿದೆ.

ಕೆಎಟಿಎಫ್ ಶಿಫಾರಸು: ಅರಣ್ಯ ವೀಕ್ಷಕರು (ಫಾರೆಸ್ಟ್ ವಾಚರ್ಸ್‌) ಮತ್ತು ಭದ್ರತಾ ಸಿಬ್ಬಂದಿ ನೇಮಕ ಮಾಡಬೇಕು. ಆನೆ-ಮಾನವ ಸಂಘರ್ಷ ಇರುವೆಡೆ ವಲಯ ಅರಣ್ಯ ಅಧಿಕಾರಿಗಳನ್ನು (ಆರ್‌ಎಫ್‌ಒ) ನಿಯೋಜಿಸಬೇಕು. ಆನೆ ಆವಾಸ ಸ್ಥಳಗಳಲ್ಲಿ ಪ್ರವಾಸೋದ್ಯಮ, ಹೊಟೇಲ್, ರೆಸಾರ್ಟ್ ಆರಂಭಕ್ಕೆ ಹೊಸ ನೀತಿ ಜಾರಿಗೆ ತರಬೇಕು. ಕಾವೇರಿ ವನ್ಯಧಾಮ, ಮಂಡ್ಯ, ಕೊಳ್ಳೇಗಾಲ, ಮುತ್ತತ್ತಿಯಲ್ಲಿ ಘನತ್ಯಾಜ್ಯ ಸಮಸ್ಯೆ ಹಾಗೆಯೇ ಉಳಿದಿದ್ದು, ಅದರ ತೆರವಿಗೆ ಕ್ರಮ ವಹಿಸಬೇಕು ಎಂದು ಶಿಫಾರಸು ಮಾಡಿದೆ.

ಅರಣ್ಯ ಇಲಾಖೆ ಸೆರೆ ಹಿಡಿದಿರುವ ಆನೆಗಳ ಆರೋಗ್ಯ ತಪಾಸಣೆ ಕೈಗೊಳ್ಳಬೇಕು. ಮಾವುತ ಮತ್ತು ಕಾವಾಡಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಸೆರೆ ಸಿಕ್ಕ ಆನೆಗಳು, ಮಠ, ದೇವಸ್ಥಾನ, ಮೃಗಾಲಯಗಳಲ್ಲಿ ಇರುವ ಆನೆಗಳ ರಕ್ಷಣೆಗೆ ನೂತನ ನೀತಿ ಜಾರಿಯಾಗಬೇಕು. ಪಶ್ಚಿಮ ಘಟ್ಟದಲ್ಲಿ ಮಿನಿ ಜಲ ವಿದ್ಯುತ್ ಯೋಜನೆಗಳಿಗೆ ಅನುಮತಿ ನಿರಾಕರಿಸಬೇಕು. ಆನೆ ಆವಾಸ ಸ್ಥಾನಗಳನ್ನು ಹೆಚ್ಚಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.