ಬೆಂಗಳೂರು: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಅಲ್ಲಿನ ಜಲಾಶಯಗಳಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಲಮಟ್ಟಿ ಜಲಾಶಯದಿಂದ 2.63 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಮುಂದಿನ 24 ಗಂಟೆಗಳಲ್ಲಿ ಆಲಮಟ್ಟಿಗೆ ದಾಖಲೆ ಪ್ರಮಾಣದ ನೀರು ಹರಿದು ಬರುವ ನಿರೀಕ್ಷೆ ಇದೆ. ಚಿಕ್ಕೋಡಿ ತಾಲ್ಲೂಕಿನಲ್ಲಿ ಆರು ಸೇತುವೆಗಳು ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ಸಾರ್ವಜನಿಕರು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸುತ್ತಿದ್ದಾರೆ.
ಯಾದಗಿರಿ ಜಿಲ್ಲೆ ಹುಣಸಗಿ ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದು, ಆಲಮಟ್ಟಿ ಜಲಾಶಯದಿಂದ ಬರುತ್ತಿರುವ ಒಳ ಹರಿವು ಹೆಚ್ಚಾಗಿದೆ.
ನೀರಿನ ಮಟ್ಟವನ್ನು 491.550ಮೀಟರ್‌ಗೆ ಸೀಮಿತಗೊಳಿಸಿ ಹೆಚ್ಚುವರಿ 2.26 ಲಕ್ಷ ಕ್ಯುಸೆಕ್ ನೀರನ್ನು 26 ಕ್ರೆಸ್ಟ್ ಗೇಟ್‌ಗಳ ಮೂಲಕ ನದಿಗೆ ಹರಿಬಿಡಲಾಗಿದೆ. ಪರಿಣಾಮ ಕೃಷ್ಣಾ ನದಿ ಪಾತ್ರದ ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.