ADVERTISEMENT

ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕರೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2011, 19:30 IST
Last Updated 5 ಏಪ್ರಿಲ್ 2011, 19:30 IST
ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕರೆ
ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕರೆ   

ಶಿರಸಿ: ರಾಜಧರ್ಮ, ವ್ಯವಹಾರಕ್ಕಿಂತ ಮಿಗಿಲಾದ ಮಾನವ ಧರ್ಮದ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ.ವಿರೇಂದ್ರ ಹೆಗ್ಗಡೆ ಹೇಳಿದರು.

ಅವರು ನಗರದ ಸಹ್ಯಾದ್ರಿ ರಂಗಮಂದಿರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ನೀಡಿದ ಪ್ರಥಮ ‘ಸಂಯಮ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಜನಜಾಗೃತಿ ವೇದಿಕೆ ಯುವಕರನ್ನು ದುಶ್ಚಟಗಳಿಂದ ದೂರವಿಡುವ ಪ್ರಯತ್ನವಾಗಿ ಸ್ವಾಸ್ಥ್ಯ ಸಂಕಲ್ಪ ಯೋಜನೆ ಅನುಷ್ಠಾನಗೊಳಿಸಿದ್ದು, 823 ಶಾಲೆ-ಕಾಲೇಜುಗಳ 1.20ಲಕ್ಷ ವಿದ್ಯಾರ್ಥಿಗಳನ್ನು ತಲುಪಿದೆ. ಯುವಜನತೆ ದುಶ್ಚಟಗಳಿಂದ ಮುಕ್ತವಾದಾಗ ಮಾತ್ರ ಅಭಿವೃದ್ಧಿ ಕಾರ್ಯ, ಸರ್ಕಾರದ ಯೋಜನೆಗಳು ಸಾಕಾರಗೊಳ್ಳುತ್ತವೆ ಎಂದರು.

ಜನ ಜಾಗೃತಿ ವೇದಿಕೆ ಮದ್ಯವರ್ಜನ ಶಿಬಿರ ಪ್ರಾರಂಭಿಸಿದಾಗ ಸಾಕಷ್ಟು ಸಮಸ್ಯೆ ಎದುರಿಸಿದ್ದು, ಈಗ ಶಿಬಿರಗಳು ಜನಪರವಾಗಿವೆ. ಎಲ್ಲ ಶಿಬಿರಗಳು ಜನಜಾಗೃತಿ ವೇದಿಕೆಯ ಒಂದು ರೂಪಾಯಿ ನೆರವಿಲ್ಲದೆ ಜನರ ಸಹಾಯದಲ್ಲಿ ನಡೆಯುತ್ತಿವೆ. ಕೇವಲ ಬಡವರ್ಗದವರು ಮಾತ್ರವಲ್ಲ ಮೇಲ್ವರ್ಗದ ಜನರಿಗೂ ಮದ್ಯವರ್ಜನ ಶಿಬಿರದ ಅಗತ್ಯ ಮನಗಂಡು ವಿಶೇಷ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಮದ್ಯಪಾನ, ಮಾದಕ ವಸ್ತುಗಳ ದುಷ್ಪರಿಣಾಮದ ಅರಿವು ಮೂಡಿಸುವ ಸಂಗತಿಗಳನ್ನು ಪಠ್ಯದಲ್ಲಿ ಅಳವಡಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, ಬೆಳ್ತಂಗಡಿಯ ಜನಜಾಗೃತಿ ವೇದಿಕೆ ಈವರೆಗೆ 401 ಮದ್ಯವರ್ಜನ ಶಿಬಿರ ನಡೆಸಿ 30 ಸಾವಿರ ಕುಟುಂಬಗಳ ಬದುಕು ಹಸನಾಗಲು ಕಾರಣವಾಗಿದೆ ಎಂದರು.

ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಅಶೀಸರ, ಜನಜಾಗೃತಿ ವೇದಿಕೆ ಪದಾಧಿಕಾರಿಗಳಾದ ವಸಂತ ಸಾಲಿಯಾನ, ರಾಧಾಕೃಷ್ಣ ಆಳ್ವ, ಪ್ರತಾಪಸಿಂಹ ನಾಯಕ, ರುಕ್ಮಯ್ಯ ಪೂಜಾರಿ, ಮಾಜಿ ಶಾಸಕ ಅಪ್ಪಣ್ಣ ಹೆಗ್ಗಡೆ, ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಜೆ.ಎಸ್.ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯಮೋಹನ ರಾಜ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಸ್ವಾಗತಿಸಿದರು.

ಎಲ್ಲಕ್ಕೂ ಕುಡಿತ....!

ಭಾರತ ಶ್ರೀಲಂಕಾ ವಿರುದ್ಧ ಕ್ರಿಕೆಟ್‌ನಲ್ಲಿ ಗೆದ್ದಿದೆ. ಅಂದು 1.49ಸ ಲಕ್ಷ ಮದ್ಯದ ಬಾಟಲಿಗಳು ಖಾಲಿಯಾಗಿರುವನ್ನು ಮಾಧ್ಯಮ ಸುದ್ದಿ ಪ್ರಕಟಿಸಿದೆ. ಗೆದ್ದರೂ ಜನ ಕುಡಿಯುತ್ತಾರೆ, ಸೋತರೂ ಕುಡಿಯುತ್ತಾರೆ. ಕ್ರಿಕೆಟ್ ವೈಭವೀಕರಿಸುವ ಹಿಂದೆ ಮದ್ಯ ತಯಾರಿಕಾ ಕಂಪನಿಗಳ ದೊಡ್ಡ ಜಾಲ ಕೈವಾಡ ಇದೆ. ಈ ಬಗ್ಗೆ ಸಮಾಜಕ್ಕೆ ಎಚ್ಚರಿಕೆ ಕೊಡಬೇಕು ಎಂದು ಹೆಗ್ಗಡೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.