ADVERTISEMENT

ಆರೋಗ್ಯ ಇಲಾಖೆಗೆ ಹೆಚ್ಚುವರಿ ಹಣ ನೀಡಲು ಸಿಎಂಗೆ ಮನವಿ.

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 5:55 IST
Last Updated 15 ಫೆಬ್ರುವರಿ 2011, 5:55 IST

ಹಾವೇರಿ: ‘ಆರೋಗ್ಯ ಇಲಾಖೆ ಹಾಗೂ ವಾಜಪೇಯಿ ಆರೋಗ್ಯಶ್ರೀ ಯೋಜನೆಗೆ ಬಜೆಟ್‌ನಲ್ಲಿ 1,300 ಕೋಟಿ ರೂ. ಹೆಚ್ಚುವರಿ ಹಣವನ್ನು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.ನಗರದ  ಹುಕ್ಕೇರಿ ಮಠದ ಆವರಣದಲ್ಲಿ  ಸೋಮವಾರ ವಾಜಪೇಯಿ ಆರೋಗ್ಯಶ್ರೀ ಯೋಜನೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಆರೋಗ್ಯ ಇಲಾಖೆಗೆ ಕಳೆದ ಬಜೆಟ್‌ನಲ್ಲಿ 800 ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಸಲದ ಬಜೆಟ್‌ನಲ್ಲಿ ಹೆಚ್ಚುವರಿಯಾಗಿ 1300 ಕೋಟಿ ರೂ. ಸೇರಿ ಒಟ್ಟು 2100 ಕೋಟಿ ರೂ. ಮೀಸಲಿಡಬೇಕೆಂದು ಮುಖ್ಯಮಂತ್ರಿಗೆ ಕೇಳಿಕೊಳ್ಳಲಾಗಿದೆ ಎಂದರು. ಈ ಹಣದಲ್ಲಿ ವಾಜಪೇಯಿ ಆರೋಗ್ಯಶ್ರೀ ಯೋಜನೆಗೆ 800 ಕೋಟಿ ರೂ.ಗಳನ್ನು ಮೀಸಲಿಡಲು ಉದ್ದೇಶಿಸಿದ್ದು, ಉಳಿದ1300 ಕೋಟಿ ರೂ.ಗಳನ್ನು ಇಲಾಖೆಯ ಇನ್ನಿತರ ಯೋಜನೆಗಳಿಗೆ ಖರ್ಚು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ವಿರೋಧ ಪಕ್ಷಗಳು ಜನತೆಯಲ್ಲಿ ಗೊಂದಲ ಹುಟ್ಟಿಸಲು ಸರ್ಕಾರದ ಅಸ್ಥಿರತೆಯ ಬಗ್ಗೆ ಮಾತನಾಡುತ್ತಿವೆ. 2011ರಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬುದು ವಿಪಕ್ಷಗಳ ಭ್ರಮೆ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಸಚಿವ ಸಿ.ಎಂ. ಉದಾಸಿ, ಶಾಸಕರಾದ ಸುರೇಶಗೌಡ ಪಾಟೀಲ, ನೆಹರೂ ಓಲೇಕಾರ್, ಜಿ. ಶಿವಣ್ಣ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.