ADVERTISEMENT

ಆರೋಪಿಗಳು ಮತ್ತೆ ಕಸ್ಟಡಿಗೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2016, 19:30 IST
Last Updated 12 ಆಗಸ್ಟ್ 2016, 19:30 IST
ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣದ ಆರೋಪಿಗಳಾದ ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಮಗ ನವನೀತ್‌ ಶೆಟ್ಟಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು   ಪ್ರಜಾವಾಣಿ ಚಿತ್ರ
ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣದ ಆರೋಪಿಗಳಾದ ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಮಗ ನವನೀತ್‌ ಶೆಟ್ಟಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಪ್ರಜಾವಾಣಿ ಚಿತ್ರ   

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣದ ಆರೋಪಿಗಳಾದ ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಮಗ ನವನೀತ್‌ ಶೆಟ್ಟಿ ಅವರನ್ನು ಆಗಸ್ಟ್‌16ರ ವರೆಗೆ ಪೊಲೀಸ್‌ ವಶಕ್ಕೆ ನೀಡಲಾಗಿದೆ.

ಶುಕ್ರವಾರ ಸಂಜೆ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಮತ್ತೆ ವಶಕ್ಕೆ ಕೇಳಿದ್ದಾರೆ. ಆದ್ದರಿಂದ ಪೊಲೀಸ್‌ ವಶಕ್ಕೆ ನೀಡಲಾಗಿದೆ ಎಂದು ನ್ಯಾಯಾಧೀಶ ರಾಜೇಶ್‌ ಕರ್ಣಂ ಹೇಳಿದರು. ‘ಪೊಲೀಸರು ತೊಂದರೆ ನೀಡಿದ್ದಾರಾ? ಆಸ್ಪತ್ರೆಗೆ ಹೋಗುವ ಅಗತ್ಯವಿದೆಯೇ’ ಎಂದು ಅವರು ಆರೋಪಿಗಳನ್ನು ಪ್ರಶ್ನಿಸಿದರು. ನ್ಯಾಯಾಲಯಕ್ಕೆ ಬರುವ ಮೊದಲು ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆದಿದೆ ಎಂದು ರಾಜೇಶ್ವರಿ ಹೇಳಿದರು.

ಐಷಾರಾಮಿ ಹೋಟೆಲ್‌ನಲ್ಲಿ ಊಟ:  ರಾಜೇಶ್ವರಿ ಹಾಗೂ ನವನೀತ್‌ ಅವರನ್ನು ಕೃತ್ಯ ನಡೆದ ಸ್ಥಳಕ್ಕೆ ಆಗಸ್ಟ್‌ 10ರಂದು ಕರೆದುಕೊಂಡು ಹೋಗಿದ್ದ ವೇಳೆ ಐಷಾರಾಮಿ ಹೋಟೆಲ್‌ನಲ್ಲಿ ಊಟ ಕೊಡಿಸಿರುವ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ತನಿಖಾಧಿಕಾರಿ ಡಾ. ಸುಮನಾ, ಸಿಬ್ಬಂದಿ ಹಾಗೂ ಇತರ ಆರೋಪಿಗಳು ನಿಟ್ಟೆ ಸಮೀಪದ ಹೋಟೆಲ್‌ವೊಂದರಿಂದ ಹೊರಗೆ ಬರುತ್ತಿರುವ ದೃಶ್ಯಗಳು ವಾಟ್ಸಪ್‌ನಲ್ಲಿ ಹರಿದಾಡುತ್ತಿವೆ.

ಆರೋಪಿಗಳಿಗೆ ಹೋಟೆಲ್‌ನಲ್ಲಿ ಊಟ ಕೊಡಿಸಬಹುದು. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ಪ್ರಕರಣದ ಇನ್ನೊಬ್ಬ ಆರೋಪಿ ನಿರಂಜನ್ ಭಟ್ ಹೊಟ್ಟೆಯಲ್ಲಿದ್ದ ಕಿವಿಯೋಲೆಯನ್ನು ಹೊರತೆಗೆಯಲಾಗಿದ್ದು ಆತ ಚೇತರಿಸಿಕೊಳ್ಳುತ್ತಿದ್ದಾನೆ. ಆತನನ್ನು ಸಹ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ತಪ್ಪು ಒಪ್ಪಿಕೊಂಡ ಆರೋಪಿಗಳು!
ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಕೊಲೆ ಮಾಡಿದ ನಂತರ ಹೋಮ ಕುಂಡದಲ್ಲಿ ಶವ ಸುಟ್ಟಿರುವುದಾಗಿ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್‌ ಶೆಟ್ಟಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಾಕ್ಷ್ಯ ನಾಶಪಡಿಸಿದ ಆರೋಪ ಎದುರಿಸುತ್ತಿರುವ ಪ್ರಕರಣದ ಇನ್ನೊಬ್ಬ ಆರೋಪಿ ನಂದಳಿಕೆಯ ನಿರಂಜನ್‌ ಭಟ್ ಅವರ ತಂದೆ ಶ್ರೀನಿವಾಸ ಭಟ್‌ ಹಾಗೂ ಕಾರು ಚಾಲಕ ರಾಘವೇಂದ್ರ ಅವರೂ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣದ ತನಿಖೆಗೆ ಇನ್ನಷ್ಟು ವೇಗ ನೀಡಲು ಇನ್‌ಸ್ಪೆಕ್ಟರ್ ಸಂಪತ್ ಅವರ ನೇತೃತ್ವದಲ್ಲಿ ಇನ್ನೊಂದು ತಂಡವನ್ನು ಸಹ ರಚಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT