ADVERTISEMENT

ಆರ್‌ಟಿಇ: ಸೀಟು ಭರ್ತಿಗೆ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 10 ಮೇ 2012, 19:30 IST
Last Updated 10 ಮೇ 2012, 19:30 IST

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ವ್ಯಾಸಂಗ ಮಾಡಲು ಅವಕಾಶವಿರುವ ಶೇ 25ರಷ್ಟು ಸೀಟುಗಳ ಭರ್ತಿ ಮತ್ತು ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಒಳಗೊಂಡ ಸುತ್ತೋಲೆ ಹೊರಡಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ತುಷಾರ್ ಗಿರಿನಾಥ್ ಗುರುವಾರ ಈ ಸಂಬಂಧ  ಹೊರಡಿಸಿರುವ ಸುತ್ತೋಲೆಯನ್ನು ಎಲ್ಲ ಜಿಲ್ಲೆಗಳ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಲಾಗಿದೆ.

ಶಾಲೆಗಳಲ್ಲಿ ಲಭ್ಯ ಸೀಟುಗಳಿಗಿಂತ ಪ್ರವೇಶ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರೆ ಲಾಟರಿ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಸೂಚಿಸಲಾಗಿದೆ.

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಶೇ 25ರಷ್ಟು ಸೀಟುಗಳನ್ನು ಉಚಿತವಾಗಿ ನೀಡುವುದು ಕಾಯ್ದೆ ಪ್ರಕಾರ ಕಡ್ಡಾಯವಾಗಿದೆ. ಈ ರೀತಿ ಪ್ರವೇಶ ಪಡೆದವರು ಮತ್ತು ಇತರ ಮಕ್ಕಳ ನಡುವೆ ಯಾವುದೇ ರೀತಿಯ ತಾರತಮ್ಯ ಮಾಡುವಂತಿಲ್ಲ. ಶೇ 75ರಷ್ಟು ಮಕ್ಕಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ಪ್ರವೇಶ ಪಡೆಯುವ ಮಕ್ಕಳಿಗೂ ಕಲ್ಪಿಸಿಕೊಡಬೇಕು.

ಒಂದನೇ ತರಗತಿ ಅಥವಾ ನರ್ಸರಿಗೆ ಯಾವ ಯಾವ ಶಾಲೆಯಲ್ಲಿ ಶೇ 25ರಷ್ಟು ಸೀಟುಗಳು ಪ್ರವೇಶಕ್ಕೆ ಲಭ್ಯ ಇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಧಿಸೂಚನೆ ಹೊರಡಿಸಿ ಸಾರ್ವಜನಿಕರ ಮಾಹಿತಿಗಾಗಿ ಪ್ರಮುಖ ಸ್ಥಳಗಳಲ್ಲಿ ಪ್ರಕಟಿಸಬೇಕು. ಶಿಕ್ಷಕರು ಮತ್ತು ಪೋಷಕರ ಸಂಘಟನೆಗಳಿಗೂ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.

ಪ್ರವೇಶ ವೇಳಾಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಿಸಲಿದ್ದು, 2013-14ನೇ ಸಾಲಿನ ಪ್ರವೇಶಕ್ಕೆ ಬರುವ ಜನವರಿಯಿಂದಲೇ ಪ್ರಕ್ರಿಯೆ ಶುರುವಾಗಲಿದೆ. ಮಾರ್ಚ್ ಅಂತ್ಯದ ಒಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆದರೆ ಈ ವರ್ಷ ಶಿಕ್ಷಣ ಹಕ್ಕು ಕಾಯ್ದೆ ತಡವಾಗಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಇದೇ 25ರವರೆಗೂ ಪ್ರವೇಶ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಪ್ರವೇಶಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಶಾಲೆಗಳು ಕಡ್ಡಾಯವಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಗೆ ನೀಡಬೇಕು. ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಅವರು ಸೂಚಿಸಿದ ಅಧಿಕಾರಿಯ ಸಮ್ಮುಖದಲ್ಲಿ ಲಾಟರಿ ಮೂಲಕ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.

ಯಾವುದೇ ಶಾಲೆ, ಸರ್ಕಾರದ ಆದೇಶವನ್ನು ಪಾಲಿಸದಿದ್ದರೆ, ಅಂತಹ ಶಾಲೆಯ ಆಡಳಿತ ಮಂಡಳಿಗಳ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಪ್ರವೇಶ ಸಂಬಂಧ ಗೊಂದಲ ಉಂಟಾದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.

ಪ್ರವೇಶ ದಿನಾಂಕವನ್ನು ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ, ಶಾಲೆಗಳಲ್ಲಿ ಪ್ರಕಟಿಸಲಾಗುತ್ತದೆ. ನೆರೆಹೊರೆ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ಮೊದಲು ಪ್ರವೇಶ ನೀಡಲಾಗುತ್ತದೆ. ಒಂದು ವೇಳೆ ಆ ವ್ಯಾಪ್ತಿಯಲ್ಲಿ ಮಕ್ಕಳು ಲಭ್ಯವಾಗದೆ ಇದ್ದರೆ, ವ್ಯಾಪ್ತಿ ಹೊರಗಿನ ಮಕ್ಕಳಿಗೆ ಪ್ರವೇಶ ನೀಡಲು ಅವಕಾಶವಿದೆ.

ಶಿಕ್ಷೆ-ಹಿಂಸೆ ನಿಷೇಧ:  ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷೆ ಅಥವಾ ಮಾನಸಿಕ ಹಿಂಸೆ ನೀಡುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.

ಒಂದು ವೇಳೆ ಇದನ್ನು ಉಲ್ಲಂಘಿಸಿ ಮಕ್ಕಳನ್ನು ಹಿಂಸಿಸಿದರೆ ಅಂತಹ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ (ಪ್ರಾಥಮಿಕ) ದೇವಪ್ರಕಾಶ್ ಎಚ್ಚರಿಸಿದ್ದಾರೆ.

ಮಕ್ಕಳಿಗೆ ಹಿಂಸೆ ನೀಡಿದ ಬಗ್ಗೆ ಪೋಷಕರು ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಲಿಖಿತವಾಗಿ ದೂರು ನೀಡಿದರೆ, ಮೂರು ತಿಂಗಳ ಒಳಗೆ ಇತ್ಯರ್ಥಪಡಿಸಲು ಸೂಚಿಸಲಾಗಿದೆ.

ವಯೋಮಿತಿಗೆ ಸಾಕ್ಷ್ಯಾಧಾರ: ಮಗು ಪ್ರವೇಶ ಬಯಸಿ ಶಾಲೆಗೆ ಬಂದ ಸಂದರ್ಭದಲ್ಲಿ ವಯಸ್ಸನ್ನು ನಿರ್ಧರಿಸುವ ದಾಖಲೆಗಳು ಇಲ್ಲ ಎಂಬ ಕಾರಣ ನೀಡಿ, ದಾಖಲಾತಿಯನ್ನು ನಿಷೇಧಿಸುವಂತಿಲ್ಲ. ಆಸ್ಪತ್ರೆ/ಎ.ಎನ್.ಎಂ ರಿಜಿಸ್ಟರ್ ದಾಖಲೆ, ಅಂಗನವಾಡಿಯಲ್ಲಿನ ದಾಖಲೆ, ಮಗುವಿನ ವಯಸ್ಸಿಗೆ ಸಂಬಂಧಿಸಿದಂತೆ ತಂದೆ-ತಾಯಿ/ಪೋಷಕರು ನೀಡುವ ಸ್ವಯಂ ಘೋಷಣೆ ಆಧರಿಸಿ ಪ್ರವೇಶ ನೀಡಬಹುದಾಗಿದೆ. 

ಪ್ರವೇಶ ಅವಧಿ ವಿಸ್ತರಣೆ

ಶೈಕ್ಷಣಿಕ ವರ್ಷ ಆರಂಭವಾದ ನಂತರ ಮೂರು ತಿಂಗಳವರೆಗೂ ಪ್ರವೇಶ ಬಯಸಿ ಬರುವ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.

ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಆಗಸ್ಟ್‌ವರೆಗೂ ಪ್ರವೇಶ ಪಡೆಯಬಹುದಾಗಿದೆ. ನಂತರವೂ ಪ್ರವೇಶ ನೀಡಲು ಅಡ್ಡಿಯಿಲ್ಲ.

ಅವಧಿ ಮುಗಿದ ನಂತರ ದಾಖಲಾಗುವ ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಶೈಕ್ಷಣಿಕ ವರ್ಷ ಮುಗಿಯುವುದರ ಒಳಗೆ ಮಗು ನಿಗದಿತ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿತಿರಬೇಕು ಎಂಬ ಉದ್ದೇಶದಿಂದ ಈ ರೀತಿಯ ತರಬೇತಿಯನ್ನು ನೀಡಲಾಗುತ್ತದೆ.

ಯಾವುದೇ ಶಾಲೆಯಲ್ಲಿ ಮಗುವಿಗೆ ಪ್ರವೇಶ ದೊರೆಯದಿದ್ದರೆ ಸಂಬಂಧಪಟ್ಟ ಪೋಷಕರು ಶಿಕ್ಷಣ ಸಂಸ್ಥೆಗಳ ವಿರುದ್ಧ ದೂರು ನೀಡಬಹುದಾಗಿದೆ.
 

ADVERTISEMENT
ಫೇಲ್ ಮಾಡುವಂತಿಲ್ಲ
ಎಂಟನೇ ತರಗತಿವರೆಗೂ ಮಕ್ಕಳನ್ನು ಅನುತ್ತೀರ್ಣಗೊಳಿಸುವುದನ್ನು, ಶಾಲೆಯಿಂದ ಹೊರ ಹಾಕುವುದನ್ನು ನಿಷೇಧಿಸಲಾಗಿದೆ. 6ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಶಾಲೆಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.