ADVERTISEMENT

ಆರ್‌ಟಿಪಿಎಸ್‌ಗೆ ಕಲ್ಲಿದ್ದಲು ಸ್ಥಗಿತ; 5 ಘಟಕ ಬಂದ್

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ರಾಯಚೂರು: ಆಂಧ್ರಪ್ರದೇಶದಲ್ಲಿ  ತೆಲಂಗಾಣ ಹೋರಾಟದ ಭಾಗವಾಗಿ ನಡೆಯುತ್ತಿರುವ ರೈಲು ತಡೆ ಚಳವಳಿ, ತೋಯ್ದ ಕಲ್ಲಿದ್ದಲು, ತಾಂತ್ರಿಕ ಕಾರಣ ಈ ರೀತಿ ಹಲವು ಕಾರಣಗಳಿಂದ ಇಲ್ಲಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್‌ಟಿಪಿಎಸ್)ದ 8 ಘಟಕಗಳಲ್ಲಿ ಮೂರು ಘಟಕಗಳು ಬಂದ್ ಆಗಿದ್ದು ಕೇವಲ 5 ಘಟಕಗಳು ವಿದ್ಯುತ್ ಉತ್ಪಾದಿಸುತ್ತಿವೆ.

ರೈಲು ತಡೆ ಚಳವಳಿ ತೀವ್ರ ಸ್ವರೂಪ ಪಡೆದಿರುವುದರಿಂದ ಆಂಧ್ರಪ್ರದೇಶದ ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ರೈಲಿನಲ್ಲಿ ಆರ್‌ಟಿಪಿಎಸ್‌ಗೆ ಸರಬರಾಜು ಆಗಬೇಕಿದ್ದ ಕಲ್ಲಿದ್ದಲು ಪೂರೈಕೆ ಪ್ರಮಾಣ ತಗ್ಗಿದೆ.

ಎರಡು ದಿನದ ಹಿಂದೆ  ಒಂದು ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹ ಶನಿವಾರದ ಹೊತ್ತಿಗೆ ಅರ್ಧದಷ್ಟು ತಗ್ಗಿದೆ. ತಾಲ್ಚೇರಿಯಿಂದ 1 ರೇಕ್ ಮಾತ್ರ ಕಲ್ಲಿದ್ದಲು ಪೂರೈಕೆ ಆಗಿದ್ದು ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ಪೂರೈಕೆ ಸ್ಥಗಿತಗೊಂಡಿದೆ ಎಂದು ಆರ್‌ಟಿಪಿಎಸ್ ಮೂಲಗಳು ಸ್ಪಷ್ಟಪಡಿಸಿವೆ.

ಉತ್ಪಾದನೆ ಕುಸಿತ: ಮೂರು ದಿನಗಳ ಹಿಂದೆ 23 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. ಶನಿವಾರ ವಿದ್ಯುತ್ ಉತ್ಪಾದನೆ 19 ದಶಲಕ್ಷ ಯೂನಿಟ್‌ಗೆ ತಗ್ಗಿದೆ.

ಗಣಿ ಕಾರ್ಮಿಕರ ಮುಷ್ಕರ:  ಸಿಂಗರೇಣಿ ಕಲ್ಲಿದ್ದಲು ಗಣಿ ಕಾರ್ಮಿಕರು ತೆಲಂಗಾಣ ಚಳವಳಿಯಲ್ಲಿ ಪಾಲ್ಗೊಂಡಿರುವುದರಿಂದ ಆರ್‌ಟಿಪಿಎಸ್ ಕಲ್ಲಿದ್ದಲು ಕೊರತೆ ಎದುರಿಸಲು ಪ್ರಮುಖ ಕಾರಣವಾಗಿದೆ.

ಕಲ್ಲಿದ್ದಲು ಪೂರೈಕೆ ಪ್ರಮಾಣಕ್ಕೆ ಅನುಗುಣವಾಗಿ ಘಟಕಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಆರ್‌ಟಿಪಿಎಸ್ ಕಾರ್ಯ ನಿರ್ವಾಹಕ ನಿರ್ದೇಶಕ ಭಾಸ್ಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.