ADVERTISEMENT

ಆರ್‌ಟಿಪಿಎಸ್:8ನೇ ಘಟಕ ಆರಂಭ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ರಾಯಚೂರು: ಇಲ್ಲಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರದ(ಆರ್‌ಟಿಪಿಎಸ್) 250 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವುಳ್ಳ 8ನೇ ಘಟಕವು ಮಂಗಳವಾರದಿಂದ ವಿದ್ಯುತ್ ಉತ್ಪಾದನೆ ಆರಂಭಿಸಿದ್ದು, ಬುಧವಾರ 200 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಿದೆ ಎಂದು ಆರ್‌ಟಿಪಿಎಸ್‌ನ ಮೂಲಗಳು ತಿಳಿಸಿವೆ.

ವಿದ್ಯುತ್ ಉತ್ಪಾದನೆ: ಸದ್ಯ ಆರ್‌ಟಿಪಿಎಸ್‌ನ 8 ಘಟಕಗಳಲ್ಲಿ  5 ಘಟಕಗಳು ವಿದ್ಯುತ್ ಉತ್ಪಾದಿಸುತ್ತಿದ್ದು, ಬುಧವಾರ 1,000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಿವೆ. 1, 2 ಮತ್ತು 3ನೇ ಘಟಕಗಳು ದುರಸ್ತಿಯಲ್ಲಿವೆ. 1.18 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹ ಇದೆ ಎಂದು ತಿಳಿಸಿದ್ದಾರೆ.

8ನೇ ಘಟಕವು ಪ್ರಾಯೋಗಿಕ ಪರೀಕ್ಷಾರ್ಥ ಚಾಲನೆ ಬಳಿಕ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದು. 2010-ಸೆಪ್ಟೆಂಬರ್‌ನಲ್ಲಿಯೇ ವಿದ್ಯುತ್ ಉತ್ಪಾದನೆ ಘೋಷಿಸಿದ್ದರೂ ಈವರೆಗೂ ಒಂದು ಯುನಿಟ್ ವಿದ್ಯುತ್ ಉತ್ಪಾದನೆ ಆಗಿರಲಿಲ್ಲ.

ಬಿಎಚ್‌ಇಎಲ್ ನಿರ್ಮಿಸಿದ ಈ ಘಟಕ ಎದುರಿಸುತ್ತಿದ್ದ ತಾಂತ್ರಿಕ ಸಮಸ್ಯೆಗಳು ಸೋಮವಾರ ಪರಿಹಾರಗೊಂಡವು. ಮಂಗಳವಾರ ಸಂಜೆಯಿಂದ ವಿದ್ಯುತ್ ಉತ್ಪಾದನೆ ಆರಂಭವಾಗಿದೆ.
ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. 200 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಆರ್‌ಟಿಪಿಎಸ್ ತಜ್ಞರು ತಿಳಿಸಿದ್ದಾರೆ.

210 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ 3ನೇ ಘಟಕವು ಬುಧವಾರ ರಾತ್ರಿ ಆರಂಭಗೊಳ್ಳಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.