ADVERTISEMENT

ಆಶೀಸರ ವಿರುದ್ಧ ಹರಿಹಾಯ್ದ ಬೋಪಯ್ಯ

ಕಸ್ತೂರಿರಂಗನ್‌ ವರದಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 20:00 IST
Last Updated 18 ಡಿಸೆಂಬರ್ 2013, 20:00 IST

ಮಡಿಕೇರಿ: ಪಶ್ಚಿಮಘಟ್ಟ ವ್ಯಾಪ್ತಿಗೆ ಕೊಡಗು ಜಿಲ್ಲೆಯನ್ನು ಸೇರಿಸಲು ಶಿಫಾರಸ್ಸು ಮಾಡಿದ್ದ  ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಹಿಂದಿನ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರ ವಿರುದ್ಧ ಶಾಸಕ ಕೆ.ಜಿ. ಬೋಪಯ್ಯ ಹರಿಹಾಯ್ದರು.

ಇಲ್ಲಿಗೆ ಸಮೀಪದ ಕುಶಾಲನಗರದಲ್ಲಿ ಬುಧವಾರ ನಡೆದ ಕೊಡಗು–ಮೈಸೂರು ಲೋಕಸಭಾ ಕ್ಷೇತ್ರದ ಶಕ್ತಿ ಕೇಂದ್ರ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಪಶ್ಚಿಮಘಟ್ಟದ ಗಡಿಯಿಂದ 10 ಕಿ.ಮೀ.ವರೆಗಿನ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯ ಎಂದು ಘೋಷಿಸ­ಬೇಕು. ಇದರಲ್ಲಿ ಇಡೀ ಕೊಡಗು ಜಿಲ್ಲೆಯನ್ನು ಸೇರಿಸಬೇಕು’ ಎಂದು ಆಶೀಸರ ಶಿಫಾರಸ್ಸು ಮಾಡಿದ್ದು  ಖಂಡನೀಯ. ಜಿಲ್ಲೆಯ ಜನರ ಹಿತಾಸಕ್ತಿ ವಿರುದ್ಧ ಮಾತನಾಡುವವರು ಯಾರೇ ಆಗಲಿ, ನಮ್ಮ ಪಕ್ಷದವರಾದರೂ ಅವರ ಹೇಳಿಕೆ­ಯನ್ನು ಖಂಡಿಸುತ್ತೇನೆ’ ಎಂದರು.

ಆಶೀಸರ ಕೂಡ ಬಿಜೆಪಿಯವರು ಎಂಬುದು ಗಮನಾರ್ಹ.

ಅರಣ್ಯದಂಚಿನ ಪ್ರದೇಶವನ್ನು ‘ಬಫರ್‌ ಜೋನ್‌’ ಎಂದು ಘೋಷಿಸುವಂತೆ ನಮ್ಮ ಮೇಲೆ ಒತ್ತಡ ಬಂದಾಗ ಕೊಡಗು ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಯಿತು. ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಜಿಲ್ಲಾ ಪಂಚಾಯಿತಿಯಲ್ಲಿ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಳ್ಳಲಾಯಿತು. ಹೀಗಾಗಿ, ಕೊಡಗಿನಲ್ಲಿ ‘ಬಫರ್‌ ಜೋನ್‌’ ಘೋಷಣೆಯಾಗಲಿಲ್ಲ ಎಂದು ಅವರು ವಿವರಿಸಿದರು.

ಈಗಾಗಲೇ ‘ಬಫರ್‌ ಜೋನ್‌’ ಘೋಷಣೆಯಾಗಿರುವ ಪಕ್ಕದ ಮೈಸೂರಿನ ಹುಣಸೂರು, ಎಚ್‌.ಡಿ. ಕೋಟೆ ಹಾಗೂ ಇತರ ಮಲೆನಾಡು ಪ್ರದೇಶಗಳಲ್ಲಿ ಜನರು ಬವಣೆ ಪಡು­ತ್ತಿದ್ದಾರೆ. ಕ್ವಾರೆ ಕಲ್ಲು, ಮರಳು ಸಿಗದೇ ಪರದಾಡುತ್ತಿದ್ದಾರೆ. ಸ್ವಂತ ನೆಲದಲ್ಲಿ ಓಡಾಡಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಶಾಸಕ ಅಪ್ಪಚ್ಚು ರಂಜನ್‌ ಮಾತನಾಡಿ, ‘ಕಳೆದ ಬಾರಿ ನಮ್ಮ ಪಕ್ಷವೇ ಅಧಿಕಾರದಲ್ಲಿದ್ದಾಗ ಜಮ್ಮಾ ಬಾಣೆ ತಿದ್ದುಪಡಿ ಕುರಿತು ಚರ್ಚೆ ಕಾಲಕ್ಕೆ ಸೂಕ್ತ ಸ್ಪಂದನೆ ದೊರೆಯದಿದ್ದಾಗ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದ್ದೆವು’ ಎಂದು ಸ್ಮರಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ. ಶಿವಪ್ಪ, ವಿಧಾನ ಪರಿಷತ್‌ ಸದಸ್ಯ ಗೋ. ಮಧುಸೂದನ್‌, ಮಾಜಿ ಸಚಿವ ಎಸ್‌.ಎ. ರಾಮದಾಸ್‌, ವಿಜಯಶಂಕರ್‌, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೀನಾ ಪ್ರಕಾಶ್‌, ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಜಾ ಕುಶಾಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.