ADVERTISEMENT

ಆಶ್ರಮ ಶಾಲೆ ಮಕ್ಕಳಿಗಿಲ್ಲ `ಕ್ಷೀರಭಾಗ್ಯ'!

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST

ಮೈಸೂರು: ಅಂಗನವಾಡಿಯಿಂದ ಎಸ್ಸೆಸ್ಸೆಲಿ ವರೆಗಿನ ಎಲ್ಲ ಮಕ್ಕಳಿಗೆ ವಾರದಲ್ಲಿ ಮೂರು ದಿನ ಹಾಲು ನೀಡುವ ರಾಜ್ಯ ಸರ್ಕಾರದ `ಕ್ಷೀರಭಾಗ್ಯ' ಯೋಜನೆಯಿಂದ ಗಿರಿಜನ ಆಶ್ರಮ ಶಾಲೆಗಳ ಸುಮಾರು 9 ಸಾವಿರ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ.ಆಗಸ್ಟ್ 1ರಿಂದ ಜಾರಿಯಾಗಿರುವ `ಕ್ಷೀರಭಾಗ್ಯ' ಯೋಜನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಸರ್ಕಾರಿ ಹಾಗೂ ಅನುದಾನಿತ ಶಾಲೆಯ 1.4 ಕೋಟಿ ಮಕ್ಕಳು ಫಲಾನುಭವಿಗಳಾಗಿದ್ದಾರೆ. ಆದರೆ, ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿರುವ ಗಿರಿಜನರ ಮಕ್ಕಳು ಯೋಜನೆಯಿಂದ ಹೊರಗೆ ಉಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.

ಅಪೌಷ್ಟಿಕತೆಯ ಸಮಸ್ಯೆಯಿಂದ ಬಳಲುತ್ತಿರುವ ಆದಿವಾಸಿಗಳಿಗೆ ರಾಜ್ಯ ಸರ್ಕಾರ ಪೌಷ್ಟಿಕ ಆಹಾರ ವಿತರಿಸುತ್ತಿದೆ. ಜೇನು ಕುರುಬರಿಗೆ ಮೀಸಲಾಗಿದ್ದ ಯೋಜನೆಯನ್ನು ಎಲ್ಲ ಅರಣ್ಯವಾಸಿಗಳಿಗೂ ವಿಸ್ತರಿಸಲಾಗಿದೆ. ವರ್ಷದ ಆರು ತಿಂಗಳು ರಾಗಿ, ಬೆಲ್ಲ, ಮೊಟ್ಟೆ, ಬೇಳೆಕಾಳು ಸೇರಿದಂತೆ ವಿವಿಧ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಆದರೆ, ಗಿರಿಜನರ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ತೆರೆದಿರುವ ರಾಜ್ಯದ 118 ಆಶ್ರಮ ಶಾಲೆಗಳು ಮಾತ್ರ `ಕ್ಷೀರಭಾಗ್ಯ'ದಿಂದ ವಂಚಿತವಾಗಿರುವುದು ಗಿರಿಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ `ಆಶ್ರಮ' ಶಾಲೆಗಳಿವೆ. ಸುಮಾರು 9 ಸಾವಿರ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ 10, ಹುಣಸೂರಿನಲ್ಲಿ 3, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 5, ನಂಜನಗೂಡು ತಾಲ್ಲೂಕಿನಲ್ಲಿ 2 ಆಶ್ರಮ ಶಾಲೆಗಳಲ್ಲಿ 2,300 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

`ಸರ್ಕಾರದ ಅನೇಕ ಸೌಲಭ್ಯಗಳು ಈಗಾಗಲೇ ಆದಿವಾಸಿಗಳಿಗೆ ತಲುಪುತ್ತಿಲ್ಲ. ಹಾಲು ವಿತರಿಸುವ ಯೋಜನೆಯಿಂದ ಆಶ್ರಮ ಶಾಲೆಗಳನ್ನು ಹೊರಗಿಟ್ಟಿರುವುದು ತಪ್ಪು. ನಿತ್ಯ ಮೂರು ಹೊತ್ತು ಊಟ ನೀಡುವ ಕಾರಣಕ್ಕೆ ಆಶ್ರಮ ಶಾಲೆಯ ವಿದ್ಯಾರ್ಥಿಗಳನ್ನು ಹೊರಗಿಡಲಾಗಿದೆ ಎಂಬ ಅಧಿಕಾರಿಗಳ ಉತ್ತರ ಸಮರ್ಪಕವಾಗಿಲ್ಲ. ಸರ್ಕಾರಿ ಹಾಸ್ಟೆಲ್‌ಗಳಲ್ಲಿರುವ ಶಾಲಾ ವಿದ್ಯಾರ್ಥಿಗಳು ಕ್ಷೀರಭಾಗ್ಯದ ಫಲಾನುಭವಿಗಳಾಗಿದ್ದಾರೆ.ಇದೇ ರೀತಿ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೂ ಹಾಲು ನೀಡಬೇಕು' ಎನ್ನುವುದು ಗಿರಿಜನ ಕ್ರಿಯಾ ಕೂಟದ ರಾಜ್ಯ ಸಂಚಾಲಕ ಎಸ್. ಶ್ರೀಕಾಂತ್ ಅವರ ಆಗ್ರಹ.

ಇಲಾಖೆಗೆ ಪತ್ರ: `ಶಿಕ್ಷಣ ಇಲಾಖೆ ವ್ಯಾಪ್ತಿಯ ಶಾಲೆಗಳಲ್ಲಿ ಮಾತ್ರ ಕ್ಷೀರಭಾಗ್ಯ ಜಾರಿಯಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಅಡಿ ಕಾರ್ಯ ನಿರ್ವಹಿಸುತ್ತಿರುವ ಶಾಲೆಗಳಿಗೆ ಈಯೋಜನೆ ಅನ್ವಯಿಸುತ್ತಿಲ್ಲ.ಈ ಸಂಬಂಧ ಹಲವು ಸ್ವಯಂಸೇವಾ ಸಂಸ್ಥೆಗಳು ಪ್ರಶ್ನೆ ಮಾಡುತ್ತಿವೆ. ಹೀಗಾಗಿ, ಕೆನೆಭರಿತ ಹಾಲು ವಿತರಿಸುವ ಯೋಜನೆಯ ವ್ಯಾಪ್ತಿಗೆ ಆಶ್ರಮ ಶಾಲೆಯ ಮಕ್ಕಳನ್ನೂ ಸೇರಿಸಬೇಕು ಎಂದು ಇಲಾಖೆಗೆ ಪತ್ರ ಬರೆಯಲಾಗಿದೆ' ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಧೇಶ್‌ಗೌಡ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT