ADVERTISEMENT

ಆಸ್ತಿ ವಿವರ ಶೀಘ್ರ ಬಹಿರಂಗ: ಸಿಎಂ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 16:50 IST
Last Updated 5 ಫೆಬ್ರುವರಿ 2011, 16:50 IST


ಬೆಳಗಾವಿ: ‘ವೈಯಕ್ತಿಕ ಆಸ್ತಿ ವಿವರವನ್ನು ಶೀಘ್ರದಲ್ಲೇ ಜನತೆಯ ಮುಂದಿಡುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಇಲ್ಲಿ ಘೋಷಿಸಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದ ಸಭಾಂಗಣದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜತೆಗೆ   ಮಾತನಾಡಿದರು.

‘ಆಸ್ತಿ ವಿವರ ಒದಗಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸೂಚಿಸಿದ್ದಾರೆ. ಆ ಪ್ರಕಾರ ಘೋಷಣೆ ಮಾಡುತ್ತಿದ್ದೇನೆ’ ಎಂದು ಅವರು ಉತ್ತರಿಸಿದರು. ‘ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ನನ್ನ ವಿರುದ್ಧದ ಆರೋಪ ಮುಂದುವರಿಸಿದ್ದಾರೆ.

 ನಾನು ಮತ್ತು ನನ್ನ ಕುಟುಂಬದ ಸದಸ್ಯರು ಒಂದು ಸಾವಿರ ಕೋಟಿ ರೂಪಾಯಿ ಆಸ್ತಿ ಮಾಡಿರುವುದಾಗಿ ಹೇಳುತ್ತಿದ್ದಾರೆ. ಅವರಲ್ಲಿ ದಾಖಲೆಗಳಿದ್ದರೆ ಲೋಕಾಯುಕ್ತರಿಗೆ, ಮಾಧ್ಯಮದವರಿಗೆ ನೀಡಲಿ. ಆಸ್ತಿ ಹೊಂದಿರುವುದನ್ನು ಸಾಬೀತು ಪಡಿಸಿದರೆ ರಾಜಕೀಯವಾಗಿ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದು ಸವಾಲು ಹಾಕಿದರು.

‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ತಪ್ಪು ಕಲ್ಪನೆಯಿಂದ ಭ್ರಷ್ಟ ರಾಜ್ಯ ಎಂದಿದ್ದಾರೆ. ಶೀಘ್ರದಲ್ಲಿ ಅವರ ಮನೆಗೆ ತೆರಳಿ ವಸ್ತುಸ್ಥಿತಿಯ ಮನವರಿಕೆ ಮಾಡಿಕೊಡುತ್ತೇನೆ’ ಎಂದು ಅವರುಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಚಿಕ್ಕೋಡಿಯಲ್ಲಿ ಹಮ್ಮಿಕೊಂಡಿರುವ ಸಮಾವೇಶ ರಾಜ್ಯಪಾಲರ ವಿರುದ್ಧ ಅಲ್ಲ; ರಾಜ್ಯ ಸರ್ಕಾರದ ಅಭಿವೃದ್ಧಿ ವಿರುದ್ಧ ನಿರಂತರವಾಗಿ ಅಪಪ್ರಚಾರಮಾಡುತ್ತಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ವಿರುದ್ಧ’ ಎಂದರು.

‘ಮುಂದಿನ ಪೀಳಿಗೆ ಮೆಲುಕು ಹಾಕುವಂತೆ ವಿಶ್ವ ಕನ್ನಡ ಸಮ್ಮೇಳನ ಮಾಡಲಾಗುವುದು. ಸಮ್ಮೇಳನಕ್ಕೆ ಪ್ರಧಾನಮಂತ್ರಿ ಆಹ್ವಾನಿಸಲು ಫೆ. 15 ಅಥವಾ 16ರಂದು ನಿಯೋಗದೆಹಲಿಗೆ ತೆರಳಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.