ADVERTISEMENT

ಆಸ್ಪತ್ರೆಗಳಲ್ಲೇ ಉಳಿದ ಸಿ.ಎಂ ಪರಿಹಾರ ನಿಧಿ

ಬಿ.ಎನ್.ಶ್ರೀಧರ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಬೆಂಗಳೂರು: ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ರೋಗಿಗಳ ಚಿಕಿತ್ಸೆ ಸಲುವಾಗಿ ಬಿಡುಗಡೆಯಾದ ಕೋಟಿಗಟ್ಟಲೆ ಹಣವನ್ನು ಸಮರ್ಪಕವಾಗಿ ಬಳಸದೆ ಆಸ್ಪತ್ರೆಗಳಲ್ಲೇ ಬಾಕಿ ಇಟ್ಟುಕೊಂಡಿರುವ ಪ್ರಕರಣಗಳು ಹೆಚ್ಚಾಗಿದ್ದು, ಈ ಬಗ್ಗೆ ಸಿಎಂ ಕಚೇರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಹಣಕಾಸಿನ ತೊಂದರೆ ಇದ್ದು, ತುರ್ತು ಚಿಕಿತ್ಸೆ ಸಲುವಾಗಿ ಆಸ್ಪತ್ರೆಗೆ ದಾಖಲಾಗುವ ಬಡ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಚಿಕಿತ್ಸೆಗಾಗಿ ಭರವಸೆ ಪತ್ರ ನೀಡುವ ವಾಡಿಕೆ ಮೊದಲಿನಿಂದಲೂ ಇದೆ.

ಹೀಗೆ ಭರವಸೆ ಕೊಟ್ಟ ನಂತರ ಸಿಎಂ ಕಚೇರಿಯೇ ಆ ಖರ್ಚನ್ನು ಭರಿಸುತ್ತದೆ ಎಂದರ್ಥ. ಆ ನಂತರ ಆಸ್ಪತ್ರೆಯವರು ಹಣಕ್ಕಾಗಿ ರೋಗಿ ಕಡೆಯವರನ್ನು ಪೀಡಿಸುವುದು ಅಥವಾ ಹಣಕ್ಕಾಗಿ ಕಾದು, ಚಿಕಿತ್ಸೆ ವಿಳಂಬ ಮಾಡದಂತೆ ಇರಲಿ ಎಂಬುದು ಇದರ ಹಿಂದಿನ ಉದ್ದೇಶ.

ಆದರೆ, ಈಗ ಮೂಲ ಉದ್ದೇಶಕ್ಕೆ ಕುಂದುಂಟಾಗುವ ಹಾಗೆ ಆಸ್ಪತ್ರೆಗಳು ನಡೆದುಕೊಳ್ಳುತ್ತಿವೆ. ಮುಖ್ಯಮಂತ್ರಿ ಕಚೇರಿ ರೋಗಿಯ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ ಪತ್ರ ಕೊಟ್ಟರೂ ಹುಬ್ಬಳ್ಳಿ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆ ಮಾತ್ರ ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಸುಮಾರು 178 ರೋಗಿಗಳಿಗೆ ಚಿಕಿತ್ಸೆಯ ಭರವಸೆ ಪತ್ರ ಕೊಟ್ಟಿದ್ದು, ಅವರಲ್ಲಿ ಬಹುತೇಕರಿಗೆ ಚಿಕಿತ್ಸೆಯನ್ನೇ ನೀಡಿಲ್ಲ ಎನ್ನಲಾಗಿದೆ.

ಈ ಕುರಿತು ಮುಖ್ಯಮಂತ್ರಿ ಕಚೇರಿ ಈ ಕ್ಯಾನ್ಸರ್ ಆಸ್ಪತ್ರೆಗೆ ಪತ್ರ ಬರೆದು ಕಾರಣ ಕೇಳಿದೆ. ಚಿಕಿತ್ಸೆ ನೀಡದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವ; ಮಾನ್ಯತೆಯನ್ನೇ ರದ್ದುಪಡಿಸುವ ಎಚ್ಚರಿಕೆಯನ್ನೂ ನೀಡಿದೆ. `ರಾಜ್ಯದ ಎಲ್ಲ ಆಸ್ಪತ್ರೆಗಳೂ ಭರವಸೆ ಪತ್ರಕ್ಕೆ ಮಾನ್ಯತೆ ನೀಡುತ್ತಿದ್ದು, ನೀವ್ಯಾಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ~ ಎಂದೂ ಕೇಳಿದೆ.

ಇಷ್ಟಕ್ಕೂ ಈ ಸಂಸ್ಥೆಯಲ್ಲಿ ಸಿಎಂ ಪರಿಹಾರ ನಿಧಿಯಿಂದ ಕೊಟ್ಟಿರುವ ಸುಮಾರು 2.16 ಕೋಟಿ ರೂಪಾಯಿ ಬಾಕಿ ಇದೆ. 2002ರಿಂದ 2010ರವರೆಗೆ ಈ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಸಲುವಾಗಿ ರೂ 6.06 ಕೋಟಿ ನೀಡಿದ್ದು, ಇದರಲ್ಲಿ ಖರ್ಚಾಗಿರುವುದು ಕೇವಲ ರೂ 3.89 ಕೋಟಿ!

ಸಿಎಂ ಕಚೇರಿಯ ಲೆಕ್ಕ ಪರಿಶೋಧಕರು ಖುದ್ದು ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಿದಾಗ 2.16 ಕೋಟಿ ರೂಪಾಯಿ ಸರ್ಕಾರದ ಹಣವನ್ನು ಆಸ್ಪತ್ರೆಯಲ್ಲೇ ಉಳಿಸಿಕೊಂಡಿರುವುದು ಗೊತ್ತಾಗಿದೆ.

ಆದರೆ, ಕ್ಯಾನ್ಸರ್ ಆಸ್ಪತ್ರೆ ಮಾತ್ರ `ಇಷ್ಟು ಹಣ ತಮ್ಮ ಬಳಿ ಇಲ್ಲ. ಇರುವುದು ಕೇವಲ 66.19 ಲಕ್ಷ ರೂಪಾಯಿ~ ಎಂದು ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದು ತಿಳಿಸಿದೆ. ಈ ಕುರಿತ ತನಿಖೆ ನಡೆದಿದ್ದು, ಬಾಕಿ ಹಣ ಕಳುಹಿಸದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದಕ್ಕೂ ಸರ್ಕಾರ ನೋಟಿಸ್ ಜಾರಿ ಮಾಡಿದೆ.

ಇದು ಹುಬ್ಬಳ್ಳಿಯ ಆಸ್ಪತ್ರೆ ಕತೆಯಾದರೆ ಇನ್ನು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೂ 2002ರಿಂದ 2009ರವರೆಗೆ ಒಟ್ಟು 3.34 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರೂ 1.03 ಕೋಟಿ ಮಾತ್ರ ಬಳಕೆ ಮಾಡಿ, 2.33 ಕೋಟಿ ರೂಪಾಯಿ ಹಾಗೆಯೇ                ಉಳಿಸಿಕೊಂಡಿದೆ.

ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೂ ಈ ಅವಧಿಯಲ್ಲಿ 5.18 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಇದರಲ್ಲಿ ಬಳಕೆಯಾಗಿದ್ದು ಕೇವಲ 3.48 ಕೋಟಿ ರೂಪಾಯಿ. ಅಂದರೆ 1.7 ಕೋಟಿ ರೂಪಾಯಿ ಅಲ್ಲಿಯೂ ಬಾಕಿ ಇದೆ.

ಇದರಲ್ಲಿ 20 ಲಕ್ಷ ರೂಪಾಯಿ ವಾಪಸ್ ಮಾಡಿದ್ದು, ಬಾಕಿ ಹಣದ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗಿದೆ. ಇದೇ ರೀತಿ ಇನ್ನೂ ಅನೇಕ ಆಸ್ಪತ್ರೆಗಳಲ್ಲಿ ಸಮಸ್ಯೆ ಇದ್ದು, ಎಲ್ಲವನ್ನೂ ತನಿಖೆಗೆ ಒಳಪಡಿಸಲು ಸಿದ್ಧತೆ ನಡೆಸಲಾಗಿದೆ. ಸರ್ಕಾರದಿಂದ ಹಣ ಪಡೆದ ನಂತರ ಅದಕ್ಕೆ ಪೂರಕ ದಾಖಲೆಗಳನ್ನು ಒದಗಿಸಬೇಕು.

ಒಂದು ವೇಳೆ ಹಣ ಬಾಕಿ ಉಳಿದರೆ ಅದನ್ನು ತಕ್ಷಣ ವಾಪಸ್ ಕಳುಹಿಸಬೇಕು ಎಂಬುದು ನಿಯಮ. ಆದರೆ ಬಹುತೇಕ ಆಸ್ಪತ್ರೆಗಳು ಇದನ್ನು ಉಲ್ಲಂಘಿಸುತ್ತಿರುವುದು ಸಿಎಂ ಕಚೇರಿಯನ್ನು ಕೂಡ ಇಕ್ಕಟ್ಟಿಗೆ ಸಿಲುಕಿದೆ.
ಸಿಎಂ ಕಚೇರಿಯಿಂದ ಹಣ ನೀಡುವ ಭರವಸೆ ಸಿಕ್ಕ ನಂತರ ಅನೇಕ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ರೋಗಿಯ ಬಿಲ್ ದರವನ್ನು ವಿಪರೀತ ಹೆಚ್ಚಿಸುತ್ತಿರುವ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ. ಈ ರೀತಿ ಬಿಲ್ ಪ್ರಮಾಣವನ್ನು ವಿನಾಕಾರಣ ಹೆಚ್ಚು ಮಾಡುವ ಆಸ್ಪತ್ರೆಗಳ ಪಟ್ಟಿಯನ್ನು ಸಿದ್ಧಪಡಿಸಿ, ಅವುಗಳಿಗೆ ಎಚ್ಚರಿಕೆ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ.


 17 ಕೋಟಿ ರೂಪಾಯಿ ಪರಿಹಾರ ಬಿಡುಗಡೆ
ಬೆಂಗಳೂರು:
ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾದ ದಿನದಿಂದ ಇಲ್ಲಿಯವರೆಗೂ ಒಟ್ಟು 17 ಕೋಟಿ ರೂಪಾಯಿಯನ್ನು ತಮ್ಮ ಪರಿಹಾರ ನಿಧಿಯಿಂದ ವಿವಿಧ ರೋಗಿಗಳ ಚಿಕಿತ್ಸೆ ಸಲುವಾಗಿ ಬಿಡುಗಡೆ ಮಾಡಿದ್ದಾರೆ. ಸುಮಾರು 20 ಕೋಟಿ ರೂಪಾಯಿಗೆ ಭರವಸೆ ಪತ್ರ ನೀಡಿದ್ದರೂ ಕೊಟ್ಟಿರುವುದು ಈ ಮೊತ್ತದ ಹಣ. ಭರವಸೆ ಪ್ರಕಾರ ಉಳಿದ ಹಣವೂ ಬಿಡುಗಡೆಯಾಗಲಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.