ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಬಂಧಿತರಾಗಿ ನಗರದ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ಬೆಳಿಗ್ಗೆ ದರ್ಶನ್ ಅವರ ತಪಾಸಣೆ ನಡೆಸಿದ ವೈದ್ಯರು ಆರೋಗ್ಯ ಸುಧಾರಿಸಿರುವುದರ ಬಗ್ಗೆ ಕಾರಾಗೃಹ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆ ನಂತರ ಮಧ್ಯಾಹ್ನ 12.30ರ ಸುಮಾರಿಗೆ ದರ್ಶನ್ ಅವರನ್ನು ಆಸ್ಪತ್ರೆಯಿಂದ ಕಳುಹಿಸಲಾಯಿತು. ಬಳಿಕ ಪೊಲೀಸ್ ಇಲಾಖೆ ವಾಹನದಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಅವರನ್ನು ಮಧ್ಯಾಹ್ನ 1.30ರ ಸುಮಾರಿಗೆ ಕಾರಾಗೃಹಕ್ಕೆ ಕರೆತರಲಾಯಿತು.
ಕಾರಾಗೃಹದ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಅಲ್ಲದೇ ಕಾರಾಗೃಹದಿಂದ ಸುಮಾರು ಒಂದು ಕಿಲೋ ಮೀಟರ್ ವ್ಯಾಪ್ತಿವರೆಗೆ ವಾಹನ ಸಂಚಾರವನ್ನು ಕೆಲ ಕಾಲ ನಿರ್ಬಂಧಿಸಲಾಗಿತ್ತು.
`ದರ್ಶನ್ ಅವರನ್ನು ಅತಿ ಭದ್ರತಾ ವಿಭಾಗದ ನಾಲ್ಕನೇ ಕೊಠಡಿಯಲ್ಲಿ ಇರಿಸಲಾಗಿದೆ. ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಮಗ ಕಟ್ಟಾ ಜಗದೀಶ್ ಮತ್ತು ಇಟಾಸ್ಕಾ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ಶ್ರೀನಿವಾಸ್ ಅವರು ಸಹ ಇದೇ ಕೊಠಡಿಯಲ್ಲಿದ್ದಾರೆ~ ಎಂದು ಕಾರಾಗೃಹ ಅಧಿಕಾರಿಗಳು ಹೇಳಿದ್ದಾರೆ.
`ದರ್ಶನ್ ಅವರ ವಿಚಾರಣಾಧೀನ ಕೈದಿ ಸಂಖ್ಯೆ 8993. ಅವರ ಕೊಠಡಿಯಲ್ಲಿ ಕಲರ್ ಟಿ.ವಿ, ಕೇಬಲ್ ಮತ್ತು ಫ್ಯಾನ್ ಸೌಕರ್ಯವಿದೆ. ಅವರು ಜೈಲಿಗೆ ಬಂದ ಸ್ವಲ್ಪ ಸಮಯದಲ್ಲೇ ನಿದ್ರೆ ಮಾಡಲಾರಂಭಿಸಿದರು. ಅವರನ್ನು ಭೇಟಿ ಮಾಡಲು ಅನುಮತಿ ಕೋರಿ ದಿನಕರ್ ತೂಗುದೀಪ ಅವರು ಅರ್ಜಿ ಸಲ್ಲಿಸಿದ್ದಾರೆ~ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
`ದರ್ಶನ್ ಅವರಿಗೆ ಜೈಲಿನ ಊಟವನ್ನೇ ನೀಡಲಾಗುತ್ತಿದೆ. ಮಲಗಲು ಚಾಪೆ, ತಲೆ ದಿಂಬು ಹಾಗೂ ಹೊದಿಕೆ ನೀಡಲಾಗಿದೆ. ಮನೆಯಿಂದ ಊಟ ತರಿಸಿಕೊಳ್ಳಲು ಹಾಗೂ ಹಾಸಿಗೆ ಬೇಕೆಂದು ದರ್ಶನ್ ಅವರು ಮನವಿ ಸಲ್ಲಿಸಿದರೆ ಅನುಮತಿ ನೀಡಲಾಗುತ್ತದೆ~ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕ ಟಿ.ಎಚ್.ಲಕ್ಷ್ಮಿನಾರಾಯಣ`ಪ್ರಜಾವಾಣಿ~ ಗೆ ತಿಳಿಸಿದರು.
ನ್ಯಾಯಾಂಗ ಬಂಧನ ವಿಸ್ತರಣೆ: ನಗರದ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ಆರ್.ಹುಲಗಿ ಅವರು ಸಂಜೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಕಾರಾಗೃಹದಿಂದಲೇ ದರ್ಶನ್ ಅವರ ವಿಚಾರಣೆ ನಡೆಸಿದರು.ಬಳಿಕ ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಅ.4ರವರೆಗೆ ವಿಸ್ತರಣೆ ಮಾಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು.
ಆರೋಗ್ಯ ಸುಧಾರಿಸಿದೆ: `ದರ್ಶನ್ ಅವರ ಆರೋಗ್ಯ ಸಂಪೂರ್ಣ ಸುಧಾರಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದೇವೆ. ಕೆಲ ಔಷಧಗಳನ್ನು ನಿರಂತರವಾಗಿ ತೆಗೆದುಕೊಳ್ಳುವಂತೆ ಅವರಿಗೆ ಸೂಚಿಸಲಾಗಿದೆ. ಅಲ್ಲದೇ ಔಷಧೋಪಾಚಾರದ ಬಗ್ಗೆ ಕೆಲ ವಿವರಗಳನ್ನು ಕಾರಾಗೃಹ ವೈದ್ಯರಿಗೆ ನೀಡಲಾಗಿದೆ~ ಎಂದು ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಶಶಿಧರ ಬುಗ್ಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.