ಮುಧೋಳ (ಬಾಗಲಕೋಟೆ ಜಿಲ್ಲೆ): ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದ ವೈದ್ಯರು ಹೊಟ್ಟೆಯೊಳಗೆ ಬ್ಯಾಂಡೇಜ್ ಬಟ್ಟೆ ಬಿಟ್ಟ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಮುಧೋಳ ನಗರದಲ್ಲಿ ನಡೆದಿದೆ.
ಇದರಿಂದ ಕುಪಿತರಾದ ಆಕೆಯ ಸಂಬಂಧಿಕರು ಶವವನ್ನು ಸರ್ಕಾರಿ ಆಸ್ಪತ್ರೆ ಎದುರಿನ ಬೆಳಗಾವಿ–ವಿಜಯಪುರ ರಸ್ತೆಯಲ್ಲಿಟ್ಟು ಪ್ರತಿಭಟಿಸಿದ ಘಟನೆ ಸೋಮವಾರ ನಡೆದಿದೆ. ಪ್ರತಿಭಟನೆಯಿಂದಾಗಿ ಐದು ತಾಸು ವಾಹನ ಸಂಚಾರ ಅಸ್ತವ್ಯಸ್ತವಾಯಿತು.
ಘಟನೆಯ ವಿವರ: ಪಟ್ಟಣದ ಪವನಚುಕ್ಕಿ ನಿವಾಸಿ ಮಂಜುಳಾ ಬಾರ್ಕಿ ಅವರಿಗೆ ಕಳೆದ ಮಾರ್ಚ್ 28ರಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಎಹರಿಗೆ ಮಾಡಿಸಲಾಗಿತ್ತು. ಮನೆಗೆ ಮರಳಿದ ಅವರಿಗೆ ಪದೇ ಪದೇ ಹೊಟ್ಟೆ ನೋವು ಹಾಗೂ ಜ್ವರ ಬರುತ್ತಿತ್ತು ಎನ್ನಲಾಗಿದೆ.
‘ಪಟ್ಟಣದ ಬೇರೆ ಬೇರೆ ಖಾಸಗಿ ಆಸ್ಪತ್ರೆಗಳಲ್ಲಿ ತೋರಿಸಿದರೂ ಹೊಟ್ಟೆ ನೋವು ವಾಸಿಯಾಗದ ಕಾರಣ ಅಲ್ಲಿನ ವೈದ್ಯರ ಶಿಫಾರಸಿನ ಮೇಲೆ ವಾರದ ಹಿಂದೆ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅಲ್ಲಿ ಸ್ಕ್ಯಾನಿಂಗ್ ನಡೆಸಿದ ವೈದ್ಯರು ಹೊಟ್ಟೆಯಲ್ಲಿ ಬ್ಯಾಂಡೇಜ್ ಹಾಗೂ ಹತ್ತಿಯ ಉಂಡೆ ಇರುವುದನ್ನು ಪತ್ತೆ ಮಾಡಿ ಶಸ್ತ್ರಚಿಕಿತ್ಸೆ ಮೂಲಕ ಹೊರಗೆ ತೆಗೆದರು. ಆದರೆ ನಂಜು ಹೆಚ್ಚಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಂಜೆ ಮಂಜುಳಾ ಮೃತಪಟ್ಟಳು’ ಎಂದು ಅವರ ಚಿಕ್ಕಪ್ಪ ತುಕಾರಾಮ ಗಲಗಲಿ ‘ಪ್ರಜಾವಾಣಿ’ಗೆ ತಿಳಿಸಿದರು.
ಮಂಜುಳಾ ಸಾವಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಆಕೆಯ ಸಂಬಂಧಿಗಳು ಪ್ರತಿಭಟನೆ ನಡೆಸಿದರು. ಇದಕ್ಕೆ ರೈತ ಸಂಘ ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಂಬಲ ನೀಡಿ, ರಸ್ತೆ ತಡೆ ಚಳವಳಿ ನಡೆಸಿದರು.
ಶಾಸಕ ಗೋವಿಂದ ಕಾರಜೋಳ, ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಭೇಟಿ ನೀಡಿ, ಮಹಿಳೆಯ ಸಂಬಂಧಿಕರಿಗೆ ಸಾಂತ್ವನ ಹೇಳಿ, ಅವರಿಂದ ಮಾಹಿತಿ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ವೈ.ಮೇಟಿ ಸ್ಥಳಕ್ಕೆ ಬಂದು ಪರಿಹಾರ ಘೋಷಿಸಲಿ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಗದೀಶ ನುಚ್ಚಿನ ಬಂದು, ತಾಲ್ಲೂಕು ಆಸ್ಪತ್ರೆ ವೈದ್ಯರು, ಸಿಬ್ಬಂದಿ ಹಾಗೂ ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿದರು. ಮಹಿಳೆಯ ಕುಟುಂಬಕ್ಕೂ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು. ನಂತರ ಶವವನ್ನು ಅಂತಿಮ ಸಂಸ್ಕಾರಕ್ಕೆ ಕೊಂಡೊಯ್ಯಲಾಯಿತು.
ಮುಖ್ಯಾಂಶಗಳು
* ಶಸ್ತ್ರಚಿಕಿತ್ಸೆ ನಂತರ ಹೊಟ್ಟೆಯೊಳಗೆ ಉಳಿದ ಬಟ್ಟೆ
* ಪದೇ ಪದೇ ಹೊಟ್ಟೆ ನೋವು
ಪ್ರಕರಣದಲ್ಲಿ ಮೇಲ್ನೋಟಕ್ಕೆ ವೈದ್ಯರ ನಿರ್ಲಕ್ಷ ಕಂಡುಬಂದಿದೆ. ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
-ಡಾ. ಜಗದೀಶ ನುಚ್ಚಿನ, ಜಿಲ್ಲಾ ಆರೋಗ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.