ADVERTISEMENT

ಆಹಾರ ಯೋಜನೆಗೆ ಸಂಚಕಾರ

ಕೊಡುಗೆ ಜಿಲ್ಲೆ ಮೂಲನಿವಾಸಿಗಳ ದ್ವಂದ್ವ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 20:15 IST
Last Updated 5 ಜುಲೈ 2013, 20:15 IST

ಮಡಿಕೇರಿ: ಅರಣ್ಯದಲ್ಲಿ ವಾಸಿಸುವ ಮೂಲ ನಿವಾಸಿಗಳಿಗೆ ಮಳೆಗಾಲದ ಆರು ತಿಂಗಳ ಕಾಲ ಉಚಿತವಾಗಿ ಆಹಾರ ಪದಾರ್ಥ  ನೀಡಬೇಕೆನ್ನುವ ಸರ್ಕಾರದ ಯೋಜನೆಯು ಮೂಲನಿವಾಸಿಗಳ ದ್ವಂದ್ವ ನಿಲುವಿನಿಂದಾಗಿ ಇದುವರೆಗೆ ಕೊಡಗು ಜಿಲ್ಲೆಯಲ್ಲಿ ಚಾಲನೆಗೊಂಡಿಲ್ಲ.

ಜೂನ್‌ನಲ್ಲಿ ಆರಂಭವಾಗಬೇಕಿದ್ದ ಈ ಯೋಜನೆಯು ಜುಲೈ ತಿಂಗಳಲ್ಲೂ ಆರಂಭವಾಗಿಲ್ಲ. ಮೂಲನಿವಾಸಿಗಳ ಸದಸ್ಯರು ಪ್ರತಿ ವರ್ಷ ತಮ್ಮ ಬೇಡಿಕೆ  ಬದಲಾಯಿಸುತ್ತಿರುವುದರಿಂದ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಡಳಿತ ಪ್ರತಿಕ್ರಿಯಿಸಿದೆ.

ಮೂಲನಿವಾಸಿಗಳ ಕುಟುಂಬಕ್ಕೆ ಪ್ರತಿ ತಿಂಗಳು 15 ಕೆ.ಜಿ ಅಕ್ಕಿ/ರಾಗಿ, 2 ಕೆ.ಜಿ. ತೊಗರಿಬೇಳೆ, 2 ಕೆ.ಜಿ. ಬೆಲ್ಲ, 1 ಲೀಟರ್ ಅಡುಗೆ ಎಣ್ಣೆ, 1 ಕೆ.ಜಿ. ಹುರುಳಿಕಾಳು ಹಾಗೂ 30 ಮೊಟ್ಟೆಗಳನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿತ್ತು. ಆದರೆ, ಅಕ್ಕಿ ತೆಗೆದುಕೊಳ್ಳಬೇಕೋ ಅಥವಾ ರಾಗಿ ಪಡೆಯಬೇಕೋ ಎನ್ನುವ ಆದಿವಾಸಿಗಳ ಗೊಂದಲದಿಂದಾಗಿ ಆಹಾರ ಪೂರೈಕೆ ಯೋಜನೆ ಇನ್ನೂ ಚಾಲನೆಗೊಂಡಿಲ್ಲ.

ಜಿಲ್ಲೆಯಲ್ಲಿ 7,500 ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿವೆ. ಪ್ರತಿ ಕುಟುಂಬಗಳಿಗೆ 15 ಕೆ.ಜಿ ಅಕ್ಕಿ ಅಥವಾ ರಾಗಿ ನೀಡಿದರೆ ಪ್ರತಿ ತಿಂಗಳು 1,125 ಟನ್ ಅಕ್ಕಿ ಅಥವಾ ರಾಗಿ ಬೇಕಾಗುತ್ತದೆ. ಇಷ್ಟೊಂದು ಅಗಾಧ ಪ್ರಮಾಣದ ಆಹಾರ ಧಾನ್ಯಗಳನ್ನು ಹೊಂದಿಸಲು ಜಿಲ್ಲಾಡಳಿತ ಕಷ್ಟಪಡುತ್ತಿದೆ.

ಗೊಂದಲ ಏಕೆ?: 2011ರಲ್ಲಿ ಈ ಯೋಜನೆ ಆರಂಭಗೊಂಡಾಗ, ಎಲ್ಲ ಫಲಾನುಭವಿಗಳ ಬಯಕೆಯಂತೆ ಅಕ್ಕಿ ನೀಡಲಾಗಿತ್ತು. 2012ರ ವೇಳೆಗೆ ತಮಗೆ ಅಕ್ಕಿ ಬೇಡ, ರಾಗಿ ಬೇಕು ಎಂದು ಅವರು ಬೇಡಿಕೆ ಸಲ್ಲಿಸಿದರು. ಇದಕ್ಕೆ ಅನುಗುಣವಾಗಿ ಆ ವರ್ಷಕ್ಕೆ ರಾಗಿ ನೀಡಲಾಯಿತು. ಈ ವರ್ಷ ಕೂಡ ರಾಗಿಯನ್ನು ಮುಂದುವರಿಸಲು ಫೆಬ್ರುವರಿ- ಮಾರ್ಚ್ ತಿಂಗಳಿನಲ್ಲಿಯೇ ಜಿಲ್ಲಾಡಳಿತ ಸಜ್ಜಾಗಿತ್ತು. ಆದರೆ, ಕೆಲವು ಕುಟುಂಬಗಳು ರಾಗಿಗೆ ತಕರಾರು ಎತ್ತಿದರು, ಪುನಃ ಅಕ್ಕಿಗೆ ಬೇಡಿಕೆ ಸಲ್ಲಿಸಿದರು.

ವಿಷಯದ ಗಂಭೀರತೆ ಅರಿತ ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಅವರು ಪ್ರತಿ ಕುಟುಂಬಗಳ ಸಮೀಕ್ಷೆ ನಡೆಸಿ, ಅವರು ಯಾವುದಕ್ಕೆ ಬೇಡಿಕೆ ಸಲ್ಲಿಸುತ್ತಾರೆ ಎನ್ನುವುದನ್ನು ವರದಿ ನೀಡುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದರು. ಸಮೀಕ್ಷೆಯಲ್ಲಿ ಬಹುತೇಕ ಕುಟುಂಬಗಳು ಅಕ್ಕಿಗೆ ಬೇಡಿಕೆ ಸಲ್ಲಿಸಿದವು.

ಅಷ್ಟರಲ್ಲಿ, ಪಟ್ಟಣ ಪಂಚಾಯಿತಿ ಚುನಾವಣೆ, ವಿಧಾನಸಭೆ ಚುನಾವಣೆಗಳು ಘೋಷಣೆಯಾಗಿದ್ದರಿಂದ ಆಹಾರ ಪದಾರ್ಥಗಳ ಪೂರೈಕೆಗಾಗಿ ಟೆಂಡರ್ ಕರೆಯುವ ಪ್ರಕ್ರಿಯೆ ಮುಂದಕ್ಕೆ ಹೋಯಿತು.

ಮೂಲನಿವಾಸಿಗಳ ಪಟ್ಟಿ: ಕೊಡಗು ಜಿಲ್ಲೆಯ ಮೂಲನಿವಾಸಿಗಳ ಪಟ್ಟಿಯಲ್ಲಿರುವ ಜೇನು ಕುರುಬ, ಯರವ, ಸೋಲಿಗರು, ಕುಡಿಯರ ಕುಟುಂಬಗಳ ಬಹುತೇಕ ಸದಸ್ಯರು ಅರಣ್ಯಗಳಲ್ಲಿ ವಾಸಿಸುತ್ತಾರೆ. ಇಲ್ಲಿ ಮಳೆಗಾಲದಲ್ಲಿ ವಿಪರೀತ ಮಳೆ ಸುರಿಯುವುದರಿಂದ ಅರಣ್ಯವಾಸಿಗಳಿಗೆ ಆಹಾರ ಹುಡುಕಿಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ, ಈ ಅವಧಿಯಲ್ಲಿ ಅವರು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲಿ, ಸಾವಿಗೆ ತುತ್ತಾಗುತ್ತಾರೆ.

ಇದನ್ನು ತಡೆಯಬೇಕೆನ್ನುವ ಉದ್ದೇಶದಿಂದ ಮೂಲನಿವಾಸಿಗಳ ಬದುಕಿಗೆ ಆಸರೆಯಾಗುವ ಸಲುವಾಗಿ ಪೌಷ್ಟಿಕ ಆಹಾರ ಪೂರೈಕೆ ಯೋಜನೆಯನ್ನು ಸಮಾಜ ಕಲ್ಯಾಣ ಇಲಾಖೆಯು 2011ರಲ್ಲಿ ರೂಪಿಸಿತ್ತು. ಫಲಾನುಭವಿಗಳನ್ನು ಗುರುತಿಸುವ ಕೆಲಸವನ್ನು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಅಧಿಕಾರಿಗಳಿಗೆ ವಹಿಸಲಾಯಿತು.

`ಬೇಡಿಕೆ ಬದಲು- ತಂದ ಫಜೀತಿ'
ಪ್ರತಿ ವರ್ಷ ಮೂಲನಿವಾಸಿಗಳು ತಮ್ಮ ಬೇಡಿಕೆಯನ್ನು (ಅಕ್ಕಿ/ರಾಗಿ) ಬದಲಾಯಿಸುತ್ತಿದ್ದರೆ. ಅಷ್ಟೊಂದು ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಹೊಂದಿಸುವುದು ಕಷ್ಟವಾಗುತ್ತದೆ. 1,125 ಟನ್ ಆಹಾರ ಪದಾರ್ಥಗಳನ್ನು ಏಕಾಏಕಿ ಹೊಂದಿಸುವುದು ಸಾಮಾನ್ಯವಲ್ಲ. ಫಲಾನುಭವಿಗಳ ಹೊಸ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಯಾವ ರೀತಿ ಸೂಚನೆ ಬರುತ್ತದೆಯೋ ಅದರಂತೆ ಪಾಲಿಸಲಾಗುವುದು.
-ಡಾ.ಎನ್.ವಿ. ಪ್ರಸಾದ್,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.