ADVERTISEMENT

ಇಂದು ಬಿಜೆಪಿ ಸಚಿವರ ಸಭೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ಬೆಂಗಳೂರು: ಪಕ್ಷ ಸಂಘಟನೆ, ಬಜೆಟ್ ತಯಾರಿ, ಪಕ್ಷದ ಆಂತರಿಕ ಬೆಳವಣಿಗೆಗಳು ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲು ರಾಜ್ಯ ಬಿಜೆಪಿ ವತಿಯಿಂದ ಸೋಮವಾರ ಎಲ್ಲ ಸಚಿವರ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲೇ ಈ ಸಭೆ ನಡೆಯಲಿದೆ.

ಜನವರಿ 30ರಂದೇ ಸಚಿವರ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೆಲ ಕಾರಣಗಳಿಂದ ಸಭೆಯನ್ನು ಮುಂದೂಡಲಾಗಿತ್ತು. ಸೋಮವಾರ ಸಂಜೆ ವಿಧಾನಮಂಡಲ ಕಲಾಪ ಮುಗಿದ ಬಳಿಕ ಸಭೆ ನಡೆಸಲು ನಿರ್ಧರಿಸಿದ್ದು, ಕಡ್ಡಾಯವಾಗಿ ಹಾಜರಾಗುವಂತೆ ಎಲ್ಲ ಸಚಿವರಿಗೂ ಪಕ್ಷದ ಕಚೇರಿಯಿಂದ ಸೂಚನೆ ರವಾನಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಆರು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಪ್ರಮುಖವಾಗಿ ಚರ್ಚೆ ನಡೆಯಲಿದೆ. ಸಚಿವರ ಕಾರ್ಯವೈಖರಿಯ ಬಗ್ಗೆಯೂ ಪರಿಶೀಲನೆ ನಡೆಸಲು ಮುಖಂಡರು ಯೋಚಿಸಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣಾ ತಯಾರಿ, ಪಕ್ಷ ಬಲವರ್ಧನೆಗೆ ವಿಭಾಗ ಮಟ್ಟದಲ್ಲಿ ಸಮಾವೇಶ ನಡೆಸುವುದು ಸೇರಿದಂತೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ಸಮಾಲೋಚನೆ ನಡೆಯಲಿದೆ.

ಪ್ರವಾಸ ನಿಗದಿ: ಪಕ್ಷ ಸಂಘಟನೆಯ ಹೆಸರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಬ್ಬರೇ ಪ್ರವಾಸ ಮಾಡುತ್ತಿರುವುದರಿಂದ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಎಲ್ಲ ಪ್ರಮುಖ ಮುಖಂಡರನ್ನೂ ಪ್ರವಾಸಕ್ಕೆ ನಿಯೋಜಿಸಲು ಯೋಚಿಸಲಾಗಿದೆ. ಕೆಲ ಪ್ರಮುಖ ಮುಖಂಡರಿಗೆ ನಿಗದಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಪಕ್ಷ ಸಂಘಟನೆಗೆ ಕ್ರಮ ಕೈಗೊಳ್ಳುವ ಹೊಣೆಗಾರಿಕೆ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ಬಜೆಟ್ ತಯಾರಿಯಲ್ಲಿ ಆದ್ಯತೆ ನೀಡಬೇಕಿರುವ ಅಂಶಗಳಿಗೆ ಸಂಬಂಧಿಸಿದಂತೆ ಪಕ್ಷದ ಅಭಿಪ್ರಾಯವನ್ನೂ ಇದೇ ಸಂದರ್ಭದಲ್ಲಿ ಪಡೆಯುವ ಸಾಧ್ಯತೆ ಇದೆ. ಪಕ್ಷದ ಹಿರಿಯ ಮುಖಂಡರು, ಸಂಘ ಪರಿವಾರದ ಕೆಲ ಪ್ರಮುಖರು, ಸಚಿವರು ಮತ್ತು ಪಕ್ಷದ ರಾಜ್ಯ ಘಟಕದ ಪ್ರಮುಖ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯಡಿಯೂರಪ್ಪ ಅವರೂ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.