ADVERTISEMENT

ಇತ್ಯರ್ಥಕ್ಕೆ ಕಾದ 2,500 ಮಕ್ಕಳ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

ಬೆಂಗಳೂರು: ಕಾನೂನಿನ ಎದುರು ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ (ಬಾಲಾಪರಾಧಿಗಳು) ಸಂಬಂಧಿಸಿದಂತೆ ರಾಜ್ಯದಲ್ಲಿ 2,500 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದರೆ, ಬೆಂಗಳೂರು ನಗರವೊಂದರಲ್ಲಿಯೇ 1,567 ಪ್ರಕರಣಗಳು ಇತ್ಯರ್ಥಕ್ಕಾಗಿ ಕಾದು ಕುಳಿತಿವೆ ಎಂದು ಅಧ್ಯಯನ ವರದಿಯೊಂದನ್ನು ಹೈಕೋರ್ಟ್‌ಗೆ ಗುರುವಾರ ಸಲ್ಲಿಸಲಾಯಿತು.

ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲಾಪರಾಧಿಗಳ ನ್ಯಾಯಾಲಯಗಳಲ್ಲಿ ಈ ಪ್ರಕರಣಗಳು ಇತ್ಯರ್ಥವಾಗದೇ ಇರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಅನ್ಯಾಯ ಆಗುತ್ತಿದೆ ಎಂದು ವಕೀಲೆ ಸುಮನಾ ಬಾಳಿಗ್ ಅವರು ಮಾಹಿತಿ ನೀಡಿದ್ದಾರೆ.

ಇಂತಹ ಮಕ್ಕಳು ಅನುಭವಿಸುತ್ತಿರುವ ಹಿಂಸೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಬಂದಿರುವ ವರದಿಯ ಆಧಾರದ ಮೇಲೆ ಕೋರ್ಟ್ ಖುದ್ದಾಗಿ ದೂರು ದಾಖಲು ಮಾಡಿಕೊಂಡು ನಡೆಸುತ್ತಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ. ಈ ಪ್ರಕರಣದಲ್ಲಿ ಕೋರ್ಟ್‌ಗೆ ಹೆಚ್ಚಿನ ಮಾಹಿತಿ ನೀಡಲು `ಕೋರ್ಟ್ ಸಹಾಯಕಿ~ಯಾಗಿ ಸುಮನಾ ಬಾಳಿಗ್ ಅವರನ್ನು ನೇಮಕ ಮಾಡಲಾಗಿದ್ದು, ಅವರು ಅಧ್ಯಯನ ನಡೆಸಿದ ನಂತರ ಈ ಮಾಹಿತಿ ನೀಡಿದ್ದಾರೆ.

ವರದಿಯಲ್ಲಿ ಏನಿದೆ?: `ಬಾಲಕರ ಮಂದಿರಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆ. ಇರುವ ಸಿಬ್ಬಂದಿಗೆ ಸೂಕ್ತ ತರಬೇತಿ ಇಲ್ಲ. ಇದರಿಂದಾಗಿ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚುತ್ತಿವೆ.

`ಶೌಚಾಲಯ, ಸ್ನಾನದ ಗೃಹ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ. ಮಕ್ಕಳಿಗೆ ಸ್ವಂತದ ಬಟ್ಟೆಬರೆಯೇ ಇಲ್ಲ. ಆರೋಗ್ಯ ತಪಾಸಣೆ ಸರಿಯಾಗಿ ನಡೆಯುತ್ತಿಲ್ಲ. ಹೆಚ್ಚಿನ ಮಕ್ಕಳು ಅವರ ಕೌಟುಂಬಿಕ ಹಿನ್ನೆಲೆಯಲ್ಲಿ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮನಃಪರಿವರ್ತನೆ ಮಾಡಿ ಮುಖ್ಯವಾಹಿನಿಗೆ ತರಬೇಕಾಗಿದೆ. ಆದರೆ, ಆ ನಿಟ್ಟಿನಲ್ಲಿ ಕೆಲಸ ಆಗುತ್ತಿಲ್ಲ. ಕೌನ್ಸೆಲಿಂಗ್ ನಡೆಯುತ್ತಿಲ್ಲ~ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

`ಹೆಚ್ಚಿನ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಬಾಲ ಮಂದಿರಗಳಲ್ಲಿ 18 ವರ್ಷ ವಯಸ್ಸಿಗಿಂತ ಹೆಚ್ಚಿನ ವಯೋಮಾನದ ಮಕ್ಕಳನ್ನೂ ಸೇರಿಸಲಾಗುತ್ತಿದೆ. ಇದರಿಂದಲೂ ಸಮಸ್ಯೆ ಹೆಚ್ಚಾಗಿದೆ~ ಎಂದು ತಿಳಿಸಲಾಗಿದೆ. ಆದುದರಿಂದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಆದೇಶಿಸುವಂತೆ, ಈ ಮಕ್ಕಳನ್ನು ಸರ್ಕಾರಿ ವಸತಿಗೃಹಗಳಿಗೆ ಸೇರಿಸಲು ನಿರ್ದೇಶಿಸುವಂತೆ ಅವರು ಕೋರಿದ್ದಾರೆ.

ಈ ಎಲ್ಲ ಸಲಹೆ, ಸೂಚನೆಗಳನ್ನು ಪರಿಶೀಲಿಸಿದ ನಂತರ ಯಾವ ರೀತಿಯ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂಬ ಮಾಹಿತಿಯನ್ನು ನಾಲ್ಕು ವಾರಗಳಲ್ಲಿ ನೀಡುವಂತೆ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಪರ ವಕೀಲೆ ಜೈನಾ ಕೊಠಾರಿ ಹಾಗೂ ಸುಮನಾ ಅವರು ಸರ್ಕಾರದ ವಿರುದ್ಧ ವಾದ ಮಂಡಿಸಿದರು.
ಸಿಬ್ಬಂದಿ ಕೊರತೆ ಇತ್ಯಾದಿಗಳ ಕುರಿತು ಕೋರ್ಟ್‌ನಲ್ಲಿ ಹಾಜರು ಇದ್ದ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ನೀನಾ ನಾಯಕ್ ಅವರು ಕೂಡ ತಿಳಿಸಿದರು. ಅದಕ್ಕೆ ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿದ ನ್ಯಾಯಮೂರ್ತಿಗಳು, `ಇನ್ನಾದರೂ ಎಚ್ಚೆತ್ತುಕೊಳ್ಳಿ. ಏನಾದರೂ ಕ್ರಮಕ್ಕೆ ಮುಂದಾಗಿ. ಇಲ್ಲದಿದ್ದರೆ ಸರ್ಕಾರಕ್ಕೆ ಎಲ್ಲಿಯ ಗೌರವ ಉಳಿಯುತ್ತದೆ ಹೇಳಿ~ ಎಂದು ಪ್ರಶ್ನಿಸಿದರು.

`ಪ್ರತಿಫಲ ಬಯಸುವ ಸರ್ಕಾರ~
`ಇಂದಿನ ದಿನಗಳಲ್ಲಿ ಸರ್ಕಾರಕ್ಕೆ ಸೇವೆ ಎಂದರೆ ಏನು ಎನ್ನುವುದೇ ಗೊತ್ತಿಲ್ಲ. ಏನಾದರೂ ಪ್ರತಿಫಲ ಸಿಗುತ್ತದೆಯೇ ಎಂಬುದಕ್ಕೆ ಆಸೆ ಪಡುವುದಷ್ಟೇ ಅದರ ಕೆಲಸವಾಗಿಬಿಟ್ಟಿದೆ. ಪ್ರತಿಫಲ ಇದೆ ಎಂದರೆ ಮಾತ್ರ ಸೇವೆ. ಇಲ್ಲದಿದ್ದರೆ ಇಲ್ಲ. ಲಕ್ಷಾಂತರ ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಕೋರ್ಟ್ ಗಮನಕ್ಕೆ ಬಂದ ಪ್ರಕರಣಗಳಲ್ಲಿ ಮಾತ್ರ ಏನಾದರೊಂದು ಪರಿಹಾರ ಸಿಕ್ಕೀತು ಅಷ್ಟೇ. ಉಳಿದ ಮಕ್ಕಳ ಗತಿಯೇನು~ ಎಂದು ನ್ಯಾ.ಶೈಲೇಂದ್ರಕುಮಾರ್ ಪ್ರಶ್ನಿಸಿದರು. ಕಾನೂನಿನ ಎದುರು ಸಂಘರ್ಷಕ್ಕೆ ಒಳಗಾದ ಮಕ್ಕಳ ಬಗ್ಗೆ ಸರ್ಕಾರ ಕಾಳಜಿ ತೋರುತ್ತಿಲ್ಲ ಎಂದು ವಿಚಾರಣೆ ವೇಳೆ ವಕೀಲರು ಆರೋಪಿಸಿದಾಗ, ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT