ADVERTISEMENT

ಇನ್ನೆರಡು ದಿನಗಳಲ್ಲಿ ಮಳೆ ಸಾಧ್ಯತೆ

ಅರಬ್ಬೀಸಮುದ್ರದಲ್ಲಿ ವಾಯುಭಾರ ಕುಸಿತ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 5:51 IST
Last Updated 14 ಮಾರ್ಚ್ 2018, 5:51 IST

ಬೆಂಗಳೂರು: ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ, ಮಲೆನಾಡಿನಲ್ಲಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಎರಡು ದಿನಗಳಲ್ಲಿ ಗಾಳಿಯಿಂದ ಕೂಡಿದ ಮಳೆಯಾಗಲಿದೆ. ಇಲ್ಲಿನ ವಾಡಿಕೆ ಉಷ್ಣಾಂಶದಲ್ಲೂ ಕುಸಿತ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಿಂದೂ ಮಹಾಸಾಗರ, ಅದಕ್ಕೆ ಬಂಗಾಳಕೊಲ್ಲಿ ಸೇರುವಲ್ಲಿ ಮತ್ತು ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಗಾಳಿಯ ಒತ್ತಡದಲ್ಲಿ ಇಳಿಕೆ ಕಂಡುಬಂದಿದೆ. ಇದರ ಪರಿಣಾಮವಾಗಿ ಅರಬ್ಬೀ ಸಮುದ್ರದ ನೈರುತ್ಯ ಭಾಗದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದೆ. ಇದು ವಾಯವ್ಯದಿಕ್ಕಿನತ್ತ ಸಾಗುತ್ತಿದ್ದು, 48 ಗಂಟೆಗಳಲ್ಲಿ ಅದು ಮತ್ತಷ್ಟು ತೀವ್ರತೆ ಪಡೆದುಕೊಳ್ಳುವ ನಿರೀಕ್ಷೆ ಇದೆ. ಇದರ ಪರಿಣಾಮವಾಗಿ ರಾಜ್ಯದ ಜೊತೆ ತಮಿಳುನಾಡು ಮತ್ತು ಕೇರಳದಲ್ಲೂ ಮಳೆ ಬರಲಿದೆ ಎಂದು ಇಲಾಖೆ ತಿಳಿಸಿದೆ.

ಲಕ್ಷದ್ವೀಪ, ಅರಬ್ಬೀ ಸಮುದ್ರದ ನೈರುತ್ಯ ಭಾಗ, ಕೇರಳದ ಕರಾವಳಿ, ತಮಿಳುನಾಡಿನ ಕನ್ಯಾಕುಮಾರಿ ಪ್ರದೇಶದಲ್ಲಿ ಗಂಟೆಗೆ 45ಕಿ.ಮೀ.ಯಿಂದ 65 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ತಮಿಳುನಾಡು, ಕೇರಳದ ಜೊತೆಗೆ ರಾಜ್ಯದ ಕರಾವಳಿಯಲ್ಲೂ ಸಮುದ್ರ ಪ್ರಕ್ಷುಬ್ಧಗೊಳ್ಳಲಿದೆ. ಮೀನುಗಾರರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಇಲಾಖೆ ಹೇಳಿದೆ.

ADVERTISEMENT

‘ಅರಬ್ಬೀ ಸಮುದ್ರದಲ್ಲಿ ಮಾರ್ಚ್‌ ತಿಂಗಳಲ್ಲಿ ವಾಯುಭಾರ ಕುಸಿತ ಉಂಟಾಗುವುದು ಕಡಿಮೆ. ಇದು ತೀರಾ ಅಪರೂಪದ ವಿದ್ಯಮಾನ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌.ಶ್ರೀನಿವಾಸ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.