ADVERTISEMENT

ಇನ್ಫಿ ನಾರಾಯಣಮೂರ್ತಿ ಅವರಿಂದಲೇ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST
ಇನ್ಫಿ ನಾರಾಯಣಮೂರ್ತಿ ಅವರಿಂದಲೇ ಉದ್ಘಾಟನೆ
ಇನ್ಫಿ ನಾರಾಯಣಮೂರ್ತಿ ಅವರಿಂದಲೇ ಉದ್ಘಾಟನೆ   

ಬೆಂಗಳೂರು: ಬೆಳಗಾವಿಯಲ್ಲಿ ಇದೇ 11, 12 ಮತ್ತು 13ರಂದು ನಡೆಯಲಿರುವ ಎರಡನೆಯ ವಿಶ್ವ ಕನ್ನಡ ಸಮ್ಮೇಳನವನ್ನು ಇನ್ಫೋಸಿಸ್ ಸಂಸ್ಥಾಪಕ ಡಾ.ಎನ್.ಆರ್. ನಾರಾಯಣ ಮೂರ್ತಿ ಅವರೇ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.

ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಮಾಹಿತಿ ನೀಡಲು ವಿಧಾನ ಸೌಧದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಯಡಿಯೂರಪ್ಪ ಅವರು, ‘ಉದ್ಘಾಟನೆ ಯಾರು ಮಾಡಬೇಕು ಎಂಬುದನ್ನು ಎಲ್ಲರೊಂದಿಗೆ ಚರ್ಚಿಸಿ ನಿರ್ಧರಿಸಲಾಗಿದೆ. ಈ ವಿಷಯದಲ್ಲಿ ಯಾ ವುದೇ ಬದಲಾವಣೆ ಇಲ್ಲ’ ಎಂದರು.

30 ಕೋಟಿ ರೂಪಾಯಿ: ‘ಕನ್ನಡ ಕೇವಲ ಭಾಷೆಯಲ್ಲ; ಅದು ಆರು ಕೋಟಿ ಕನ್ನಡಿಗರ ಸಹಬಾಳ್ವೆಯ ಸಂಕೇತ’ ಎಂದ ಯಡಿಯೂರಪ್ಪ, ಸಮ್ಮೇಳನಕ್ಕೆ ಈಗಾಗಲೇ ಸುಮಾರು 30 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಸಾಂಸ್ಕೃತಿಕ ವೈಭವ ಮತ್ತು ಜಾನಪದ ಸೊಗಡನ್ನು ಬಿಂಬಿಸುವ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ಪ್ರತಿ ಸಂಜೆ 15 ವೇದಿಕೆಗಳಲ್ಲಿ ಏಕಕಾಲದಲ್ಲಿ ನಡೆಯಲಿವೆ ಎಂದರು.

ನುಡಿ ತೇರು: ರಾಜ್ಯದ ಪ್ರತಿಯೊಂದು ಜಿಲ್ಲೆಯ ವೈಶಿಷ್ಟ್ಯವನ್ನು ಬಿಂಬಿಸುವ ಸ್ತಬ್ಧ ಚಿತ್ರಗಳನ್ನು ಹೊಂದಿರುವ ಕನ್ನಡ ನುಡಿ ತೇರು ಆಯಾ ಜಿಲ್ಲೆಗಳಿಂದ ಹೊರಟು ಮಾರ್ಚ್ 10ರಂದು ಬೆಳಗಾವಿ ನಗರಕ್ಕೆ ಆಗಮಿಸಲಿವೆ, ಮಾ. 11ರಂದು ಬೆಳಗಾವಿ ನಗರದಲ್ಲಿ ಆಕರ್ಷಕ ಮೆರವಣಿಗೆ ನಡೆಯಲಿದೆ. ಅಖಂಡ ಕರ್ನಾಟಕವನ್ನು ಭಾವನಾತ್ಮಕವಾಗಿ ಬೆಸೆಯುವ ಈ ಕಾರ್ಯಕ್ರಮ ಸಮ್ಮೇಳನದ ವಿಶೇಷ ಎಂದರು.

ಸಮ್ಮೇಳನದ ಅಂಗವಾಗಿ ಕನ್ನಡದ 100 ಮೇರು ಕೃತಿಗಳನ್ನು ಹೊರತರಲಾಗುತ್ತಿದೆ. ಕನ್ನಡದ ಶ್ರೇಷ್ಠ ಲೇಖಕರ ಕೃತಿಗಳು ಈ ಮಾಲೆಯಲ್ಲಿವೆ, ಸಮಗ್ರ ಜಾನಪದ ಮತ್ತು ಯಕ್ಷಗಾನ ಸಾಹಿತ್ಯ ಪ್ರಕಟಣಾ ಮಾಲೆಯಡಿ ಹೊರಬರುತ್ತಿರುವ ಮೊದಲ ಕಂತಿನ 36 ಗ್ರಂಥಗಳು ಬಿಡುಗಡೆಯಾಗಲಿವೆ, ವಿಧಾನ ಮಂಡಲ ಕಾರ್ಯಾಲಯ ಹೊರತಂದಿರುವ ಸುವರ್ಣ ಕರ್ನಾಟಕ ಸಂಪುಟವೂ ಇದರಲ್ಲಿ ಸೇರಿದೆ ಎಂದರು.

ಸಾಹಿತಿ ಡಾ.ಹಂಪ ನಾಗರಾಜಯ್ಯ ಮತ್ತು ಜಿ.ಎನ್. ಮೋಹನ್ ಸಂಪಾದಕತ್ವದ ‘ಪುನರಾವಲೋಕನ’ ಗ್ರಂಥವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ನೌಕರರಿಗೆ ರಜೆ: ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಸ್ಥೆಗಳ ನೌಕರರಿಗೆ ಅನ್ಯಕಾರ್ಯ ನಿಮಿತ್ತ ರಜೆ ನೀಡಲು ಕ್ರಮ ಕೈಗೊಳ್ಳಲಾಗಿದೆ.  ಅತಿಥಿ, ಗಣ್ಯರಿಗೆ ಬೆಳಗಾವಿ, ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಕ್ಕೆ ಅನುಕೂಲವಾಗುವಂತೆ ವಿಶೇಷ ರೈಲು ಮತ್ತು ವಿಮಾನಗಳ ಸಂಚಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಸಚಿವ ಉಮೇಶ್ ಕತ್ತಿ, ಸಂಸದ ಪ್ರಭಾಕರ ಕೋರೆ ಮತ್ತಿತರರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.