ADVERTISEMENT

ಇನ್ಫೊಸಿಸ್‌ನಿಂದ ಚಾಲಕರಹಿತ ಬಂಡಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 20:09 IST
Last Updated 14 ಜುಲೈ 2017, 20:09 IST
ಇನ್ಫೊಸಿಸ್‌ನಿಂದ ಚಾಲಕರಹಿತ ಬಂಡಿ
ಇನ್ಫೊಸಿಸ್‌ನಿಂದ ಚಾಲಕರಹಿತ ಬಂಡಿ   

ಬೆಂಗಳೂರು: ಸಾಫ್ಟ್‌ವೇರ್‌ ದೈತ್ಯ ಸಂಸ್ಥೆ ಇನ್ಫೊಸಿಸ್‌ನ ಸಿಇಒ ವಿಶಾಲ್‌ ಸಿಕ್ಕಾ ಅವರು ಶುಕ್ರವಾರ ಸಂಸ್ಥೆಯ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಗೆ ಚಾಲಕರಹಿತ ಬಂಡಿಯಲ್ಲಿ ಬಂದು ಅಚ್ಚರಿ ಮೂಡಿಸಿದರು.

ಸಂಸ್ಥೆಯ ಮೈಸೂರು ಕ್ಯಾಂಪಸ್‌ನಲ್ಲಿ ಈ ಸ್ವಯಂಚಾಲಿತ ವಾಹನವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ವ್ಯಾಪಕವಾಗಿ ಬಳಕೆಗೆ  ಬರುತ್ತಿರುವ ಕೃತಕ ಬುದ್ಧಿಮತ್ತೆಯಂತಹ  ಹೊಸ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಸ್ಥೆಯ ಉದ್ಯೋಗಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಈ ಸ್ವಯಂ ಚಾಲಿತ ಬಂಡಿ ರೂಪಿಸಲಾಗಿದೆ.

ಸಂವೇದಿಗಳನ್ನು ಒಳಗೊಂಡ ಈ  ವಾಹನವು ತನ್ನ ಸುತ್ತಮುತ್ತಲಿನ ಪರಿಸರ ಮತ್ತು ಸಾಗುವ ಪಥವನ್ನು ಮಾನವನ ನೆರವಿಲ್ಲದೆ ಗುರುತಿಸುವ ಸಾಮರ್ಥ್ಯ ಒಳಗೊಂಡಿದೆ. ಅತ್ಯಾಧುನಿಕ ನಿಯಂತ್ರಣ ವ್ಯವಸ್ಥೆಯ ನೆರವಿನಿಂದ ಈ ವಾಹನವು ಸಾಗುವ ಪಥ ಮತ್ತು  ಅಡೆತಡೆಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ.

ADVERTISEMENT

‘ನಮ್ಮ ಸಂಸ್ಥೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಸ್ವಯಂಚಾಲಿತ ಪುಟ್ಟ ವಾಹನದಲ್ಲಿ ಕುಳಿತುಕೊಂಡು ನಾನು ಈ  ಸುದ್ದಿಗೋಷ್ಠಿಗೆ  ಬಂದಿರುವೆ.  ಚಾಲಕರಹಿತ ಚಾಲನಾ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಸಾವಿರಾರು ಎಂಜಿನಿಯರುಗಳಿಗೆ ತರಬೇತಿ ನೀಡಲು   ಇದರಿಂದ ಸಾಧ್ಯವಾಗಲಿದೆ.  ಸಂಶೋಧನೆ ಮತ್ತು ಸ್ವಯಂ ಚಾಲನೆ ತಂತ್ರಜ್ಞಾನ ಆಧರಿಸಿ ನಾವು  ನಮ್ಮ ಗ್ರಾಹಕರಿಗೆ ಈಗ ನೀಡುತ್ತಿರುವ ಸೇವೆಯನ್ನು  ನವಿಕರಿಸಲಿದ್ದೇವೆ’ ಎಂದು ವಿಶಾಲ್‌ ಸಿಕ್ಕಾ ಹೇಳಿದರು.

ವ್ಯಾಪಕ ಬದಲಾವಣೆಯ ತಂತ್ರಜ್ಞಾನ ಅಭಿವೃದ್ಧಿಪಡಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಯಾರೊಬ್ಬರೂ ಹೇಳುವಂತಿಲ್ಲ
ವಿಶಾಲ್‌ ಸಿಕ್ಕಾ
ಇನ್ಫೊಸಿಸ್‌ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.