ADVERTISEMENT

ಈರುಳ್ಳಿ ಬೆಲೆ ದಿಢೀರ್ ಕುಸಿತ : ರೈತರ ಆಕ್ರೋಶ, ಗ್ರಾಹಕ ನಿರಾಳ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2010, 5:30 IST
Last Updated 22 ಡಿಸೆಂಬರ್ 2010, 5:30 IST

ಬೆಂಗಳೂರು: ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ಇನ್ನೇನು ಮೂರಂಕಿಗೆ ತಲುಪಿಯೇ ಬಿಟ್ಟಿತು ಎನ್ನುವಷ್ಟರಲ್ಲಿ ಕೇಂದ್ರ ಸರ್ಕಾರ ಆಪತ್ಬಾಂಧವನ ರೂಪದಲ್ಲಿ ಗ್ರಾಹಕನ ಕೈಹಿಡಿದಿದೆ. 

 ಈರುಳ್ಳಿ ರಫ್ತಿನ ಮೇಲೆ ನಿಷೇಧ ಹಾಗೂ ನೆರೆಯ ಪಾಕಿಸ್ತಾನದಿಂದ ಈರುಳ್ಳಿ ಆಮದು ಮಾಡಿಕೊಳ್ಳಲು ಕೈಗೊಂಡ ನಿರ್ಧಾರದ ಫಲವಾಗಿ ಮಂಗಳವಾರ ನಗರದ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಸಗಟು ಬೆಲೆ ಶೇ 50ರಷ್ಟು ಕುಸಿತ ಕಂಡಿದೆ. ಇದ್ದಕ್ಕಿದ್ದಂತೆ ಬೆಲೆ ಕುಸಿದಿರುವುದನ್ನು ಕಂಡು ರೈತರು ಪ್ರತಿಭಟನೆಯನ್ನೂ ನಡೆಸಿದರು.

ಉತ್ತಮ ಗುಣಮಟ್ಟದ ಈರುಳ್ಳಿ ಮೂಟೆಗೆ (50 ಕೆ.ಜಿ) ಬೆಳಿಗ್ಗೆ ರೂ 3000ವರೆಗೆ ಇದ್ದ ಬೆಲೆ ಸಂಜೆ ವೇಳೆಗೆ ರೂ 2000ಗೆ ಇಳಿದಿದೆ. ಇದೇ ರೀತಿ ಮಧ್ಯಮ ಅಳತೆಯ ಈರುಳ್ಳಿ ಬೆಲೆ ಪ್ರತಿ ಮೂಟೆಗೆ ರೂ 500ರಿಂದ 1,000ವರೆಗೆ ಕಡಿಮೆಯಾಗಿದೆ. ಒಂದೇ ದಿನದಲ್ಲಿ ಶೇ 50ರಷ್ಟು ಬೆಲೆ ಇಳಿದಿದೆ. ರಫ್ತು ನಿಷೇಧದ ಹಿನ್ನೆಲೆಯಲ್ಲಿ ರಫ್ತುದಾರರು ಈರುಳ್ಳಿಯನ್ನು ಕೊಳ್ಳಲು ಹಿಂದೇಟು ಹಾಕಿರುವುದೇ ಪ್ರಮುಖ ಕಾರಣವಾಗಿದೆ (ಬೆಂಗಳೂರಿನಿಂದ ಮಲೇಷ್ಯಾ, ಬಾಂಗ್ಲಾದೇಶ ಹಾಗೂ ಇತರ ದೇಶಗಳಿಗೆ ಈರುಳ್ಳಿಯನ್ನು ರಫ್ತು ಮಾಡಲಾಗುತ್ತದೆ).

‘ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಿಂದ ಉತ್ತರ ಕರ್ನಾಟಕದಿಂದ ಬಂದ ಹಲವು ರೈತರು ಬೆಲೆ ಕುಸಿಯುತ್ತಿರುವುದನ್ನು ಕಂಡು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದರು. ಕೆಲವು ಟ್ರಕ್‌ಗಳ ಟಯರ್ ಪಂಕ್ಚರ್ ಮಾಡಿದರು. ಸಕಾಲದಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿದ್ದರಿಂದ ಹೆಚ್ಚೇನೂ ಹಾನಿಯಾಗಲಿಲ್ಲ’ ಎಂದು ಯಶವಂತಪುರದ ವ್ಯಾಪಾರಿಯೊಬ್ಬರು ಹೇಳಿದರು.

ಬೆಲೆ ಇನ್ನೂ ಇಳಿಕೆ: ‘ರಫ್ತು ನಿಷೇಧ ಒಂದೆಡೆಯಾದರೆ, ಪಾಕಿಸ್ತಾನದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿರುವುದು ಬೆಲೆ ಕುಸಿಯಲು ಮತ್ತೊಂದು ಪ್ರಮುಖ ಕಾರಣ’ ಎಂದು ಈರುಳ್ಳಿ ರಫ್ತುದಾರರೊಬ್ಬರು ಹೇಳಿದರು.

ಪಾಕಿಸ್ತಾನದ ಈರುಳ್ಳಿ ದೇಶದೆಲ್ಲೆಡೆ ಹರಿದುಬಂದರೆ, ಸ್ಥಳೀಯ ಈರುಳ್ಳಿಯ ಬೆಲೆ ಮತ್ತಷ್ಟು ಕುಸಿಯುವುದು ಖಚಿತ. ಇದು ಚಿಲ್ಲರೆ ವ್ಯಾಪಾರದ ಮೇಲೂ ಪರಿಣಾಮ ಬೀರಲಿದೆ.

ಕಳೆದ ನವೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಬೆಳೆ ಹಾನಿಗೊಳಗಾಗಿತ್ತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಕೆಲವು ರೈತರು, ವ್ಯಾಪಾರಸ್ಥರು ಅಕ್ರಮ ದಾಸ್ತಾನು ಮಾಡಿಕೊಂಡರು. ಇನ್ನೂ ಹೆಚ್ಚಿನ ಬೆಲೆ ಬರಬಹುದು ಎಂದು ಅವರು ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡಲಿಲ್ಲ. ಪೂರೈಕೆ ಕಡಿಮೆಯಾಗಿ, ಬೇಡಿಕೆ ಹೆಚ್ಚಿದ್ದರಿಂದ ಕಳೆದ 15-20 ದಿನಗಳಲ್ಲಿ ಈರುಳ್ಳಿ ಬೆಲೆ ದ್ವಿಗುಣಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.