ADVERTISEMENT

ಈ ಅಂಗನವಾಡಿಗಳಿಗೆ ಮೂರು ದಿನ `ಮುಟ್ಟಿನ ರಜೆ'!

ರವೀಂದ್ರ ಭಟ್ಟ
Published 22 ಡಿಸೆಂಬರ್ 2012, 19:59 IST
Last Updated 22 ಡಿಸೆಂಬರ್ 2012, 19:59 IST
ಮೈಸೂರು ನಗರದ ಕುಂಬಾರಕೊಪ್ಪಲು ಮಹದೇಶ್ವರ ಬಡಾವಣೆಯ ಪಾಂಡುರಂಗ ದೇವಾಲಯದಲ್ಲಿ ನಡೆಯುವ ಅಂಗನವಾಡಿ
ಮೈಸೂರು ನಗರದ ಕುಂಬಾರಕೊಪ್ಪಲು ಮಹದೇಶ್ವರ ಬಡಾವಣೆಯ ಪಾಂಡುರಂಗ ದೇವಾಲಯದಲ್ಲಿ ನಡೆಯುವ ಅಂಗನವಾಡಿ   

ಮೈಸೂರು: ಈ ಅಂಗನವಾಡಿಗಳಿಗೆ ಸರ್ಕಾರಿ ರಜೆ, ಭಾನುವಾರದ ರಜೆ ಜೊತೆಗೆ ತಿಂಗಳಿಗೆ ಇನ್ನೂ ಮೂರು ದಿನ ಹೆಚ್ಚುವರಿ ರಜೆ ಸಿಗುತ್ತವೆ. ಅದು `ಮುಟ್ಟಿನ ರಜೆ'.

ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಕೋರ್ ಸಮಿತಿ ಸದಸ್ಯ ಸಿದ್ದಲಿಂಗೇಗೌಡ ಶನಿವಾರ ಮೈಸೂರು ನಗರದ ಅಂಗನವಾಡಿಗಳ ಪರಿಸ್ಥಿತಿ ಅಧ್ಯಯನ ನಡೆಸಿದ ಸಂದರ್ಭದಲ್ಲಿ ಇಂತಹ ವಿಚಿತ್ರ ರಜೆ ಇರುವುದು ಪತ್ತೆಯಾಯಿತು.

ಹೀಗೆ ಮುಟ್ಟಿನ ರಜೆ ಪಡೆಯುವ 19ಕ್ಕೂ ಹೆಚ್ಚು ಅಂಗನವಾಡಿಗಳು ಮೈಸೂರು ನಗರದಲ್ಲಿವೆ. ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲದೇ ಇರುವುದರಿಂದ ದೇವಾಲಯಗಳಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಹೀಗೆ ದೇವಾಲಯಗಳಲ್ಲಿ ಇರುವ ಅಂಗನವಾಡಿಗಳ ಮುಖ್ಯ ಸಮಸ್ಯೆ ಎಂದರೆ ಅಂಗನವಾಡಿ ಕಾರ್ಯಕರ್ತೆ ಮುಟ್ಟಾದರೆ ಅವರು ದೇವಾಲಯದ ಒಳಕ್ಕೆ ಹೋಗುವಂತಿಲ್ಲ. ಆ ಮೂರೂ ದಿನ ಅಂಗನವಾಡಿ ದೇವಾಲಯದ ಹೊರಕ್ಕೆ ನಡೆಸಬೇಕು. ಇಲ್ಲವೇ ರಜೆ ನೀಡಬೇಕು.

ಮೈಸೂರು ನಗರದ ಕುಂಬಾರಕೊಪ್ಪಲು ಮಹದೇಶ್ವರ ಬಡಾವಣೆಯ ಪಾಂಡುರಂಗ ದೇವಾಲಯ, ಕುಂಬಾರಕೊಪ್ಪಲು ಮುಖ್ಯರಸ್ತೆಯ ರಾಮಮಂದಿರ, ಮಂಜೇಗೌಡನಕೊಪ್ಪಲು ವಿನಾಯಕ ದೇವಸ್ಥಾನ, ಕುಂಬಳದಮ್ಮನ ದೇವಾಲಯಗಳಲ್ಲಿ ಅಂಗನವಾಡಿ ಕೇಂದ್ರಗಳಿವೆ. ಇನ್ನೂ ಹಲವಾರು ದೇವಾಲಯಗಳಲ್ಲಿ ಅಂಗನವಾಡಿ ಕೇಂದ್ರಗಳು ಇದ್ದರೂ ಅವುಗಳನ್ನು ದೇವಾಲಯ ಎಂದು ಹೆಸರಿಸದೆ ಸಮುದಾಯ ಭವನ ಎಂದು ಕರೆದು ಅಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಅಲ್ಲಿಯೂ ಸಮಸ್ಯೆ ಮಾತ್ರ ಇದೇ ಆಗಿರುತ್ತದೆ.

`ಮುಟ್ಟಿನ ಸಮಯದಲ್ಲಿ ದೇವಾಲಯದ ಒಳಕ್ಕೆ ಹೋಗಲು ನಮಗೆ ಭಯವಾಗುತ್ತದೆ. ಜೊತೆಗೆ ಮುಜುಗರ. ಆ ಸಮಯದಲ್ಲಿ ದೇವಾಲಯ ಪ್ರವೇಶಿಸಿ ನಾವು ಯಾವ ನರಕಕ್ಕೆ ಹೋಗಬೇಕು? ಆದರೆ ಅದೇ ಸಂದರ್ಭದಲ್ಲಿ ಯಾರಾದರೂ ಪರಿಶೀಲನೆಗೆ ಬರುವ ಸಾಧ್ಯತೆ ಇದ್ದರೆ ಎಲ್ಲ ಭಾರವನ್ನೂ ದೇವರ ಮೇಲೆ ಹಾಕಿ ದೇವಾಲಯದ ಹೊರಕ್ಕೆ ಅಂಗನವಾಡಿ ನಡೆಸುತ್ತೇವೆ' ಎಂದು ದೇವಾಲಯವೊಂದರಲ್ಲಿ ನಡೆಯುವ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯೊಬ್ಬರು ಹೇಳುತ್ತಾರೆ.

`ದೇವಾಲಯದಲ್ಲಿ ಅಂಗನವಾಡಿ ಕೇಂದ್ರ ನಡೆಸಿದರೆ ಶೌಚಾಲಯ, ಉಗ್ರಾಣ, ಅಡುಗೆ ಮನೆ ಸೇರಿದಂತೆ ಇತರ ಮೂಲಸೌಲಭ್ಯಗಳ ಕೊರತೆ ಇರುತ್ತದೆ. ಅಲ್ಲದೆ ಕೆಲವು ದೇವಾಲಯಗಳು ಶಿಥಿಲವಾಗಿರುವುದರಿಂದ ಮಕ್ಕಳ ಪ್ರಾಣಕ್ಕೂ ಆತಂಕವಿದೆ. ದೇವಾಲಯಗಳಲ್ಲಿ ಅಂಗನವಾಡಿ ಕೇಂದ್ರ ನಡೆಸುವುದು ಮಾನವಹಕ್ಕು ಉಲ್ಲಂಘನೆ ಹಾಗೂ ಮಕ್ಕಳ ಹಕ್ಕು ಉಲ್ಲಂಘನೆಯಾಗಿದೆ. ತಕ್ಷಣವೇ ಇದನ್ನು ಬದಲಾಯಿಸಬೇಕು' ಎಂದು ಸಿದ್ದಲಿಂಗೇಗೌಡ ಒತ್ತಾಯಿಸುತ್ತಾರೆ. ಈ ಸಂಬಂಧ ಅವರು ಮಾನವಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಒಟ್ಟಾರೆ 60 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿದ್ದು ಅವುಗಳಲ್ಲಿ 1800ಕ್ಕೂ ಹೆಚ್ಚು ಅಂಗನವಾಡಿಗಳು ದೇವಾಲಯಗಳಲ್ಲಿ ನಡೆಯುತ್ತಿವೆ. ಬಹುತೇಕ ಎಲ್ಲ ಕಡೆ ಇದೇ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು. ದೇವಾಲಯಗಳಲ್ಲಿ ಅಂಗನವಾಡಿ ಕೇಂದ್ರ ನಡೆಸುವುದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೂ ತೊಂದರೆಯಾಗುತ್ತಿದೆ. ದೇವಾಲಯಕ್ಕೆ ಅವರ ಪ್ರವೇಶಕ್ಕೆ ಕೆಲವು ಕಡೆ ನಿರ್ಬಂಧವಿದೆ ಎಂದು ಅವರು ದೂರಿದರು.

ಮೈಸೂರು ಜಿಲ್ಲೆಯಲ್ಲಿ 2827 ಅಂಗನವಾಡಿ ಕೇಂದ್ರಗಳಿವೆ. ಅವುಗಳಲ್ಲಿ 1793 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ. ಈಗ 185 ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ಥಳ ಹುಡುಕುವುದೇ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ರೂ 750  ಬಾಡಿಗೆ ನಿಗದಿ ಮಾಡಿದೆ. ಈ ಬಾಡಿಗೆಗೆ ಕಟ್ಟಡ ದೊರೆಯದೇ ಇರುವುದರಿಂದ ಅನಿವಾರ್ಯವಾಗಿ ದೇವಾಲಯಗಳಲ್ಲಿ ಅಂಗನವಾಡಿ ನಡೆಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎನ್.ಆರ್.ವಿಜಯ್ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಮುಟ್ಟಾದಾಗ ದೇವಾಲಯ ಪ್ರವೇಶ ಮಾಡುವುದಕ್ಕೆ ಸಂಕೋಚ ಪಡುವುದು ತಮ್ಮ ಗಮನಕ್ಕೂ ಬಂದಿದೆ. ಈ ಹಿನ್ನೆಲೆಯಲ್ಲಿಯೇ ದೇವಾಲಯಗಳಲ್ಲಿ ನಡೆಯುವ ಅಂಗನವಾಡಿಗಳನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.