ADVERTISEMENT

ಉಗ್ರ ಯಾಸೀನ್‌ಗೆ ಕೊಪ್ಪದ ನಂಟು?

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಕೊಪ್ಪ: ನೇಪಾಳ ಗಡಿಯಲ್ಲಿ ಕಳೆದ ವಾರ ಸೆರೆ ಸಿಕ್ಕಿರುವ ಉಗ್ರ ಯಾಸೀನ್ ಭಟ್ಕಳ ಮತ್ತು ಆತನ ಸಹಚರರ ಅಡಗು ತಾಣಗಳು ತಾಲ್ಲೂಕಿನ ಕುದುರೆಗುಂಡಿ ಸಮೀಪದ ವಿಠಲಮಕ್ಕಿ ಹಾಗೂ ನರಸಿಂಹರಾಜಪುರ ತಾಲ್ಲೂಕಿನ ಕಟ್ಟಿನಮನೆ ಸಮೀಪದ ಹಕ್ಲುಮನೆ ತೋಟದ ಮನೆಯಲ್ಲಿ ಇತ್ತು ಎಂಬ ಶಂಕೆ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ಸಂಬಂಧ ವಿಠಲಮಕ್ಕಿ ಹಾಗೂ ಹಕ್ಲುಮನೆಗಳಿಗೆ ಸೋಮವಾರ ತನಿಖಾ ತಂಡ ಭೇಟಿ ನೀಡಿ ಪರಿಶೀಲಿಸಿದೆ ಎಂದು ಹೇಳಲಾಗಿದೆ.
ತಾಲ್ಲೂಕಿನ ವಿಠಲಮಕ್ಕಿಯ ಫಾರಂ ಹೌಸ್ ಒಂದರಲ್ಲಿ ಈ ಹಿಂದೆ ಹಲವಾರು ತಿಂಗಳು ಆತ ತಂಗಿದ್ದು, ಅಲ್ಲಿ ಶಸ್ತ್ರಾಸ್ತ್ರ ತಯಾರಿಕೆಗೆ ಸಿದ್ಧತೆ ನಡೆಸಿದ ಅನುಮಾನದ ಮೇಲೆ ಹಿರಿಯ ಪೊಲೀಸ್ ಅಧಿಕಾರಿ ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡದವರು 2008ರ ಸೆಪ್ಟೆಂಬರ್‌ನಲ್ಲಿ ದಾಳಿ ನಡೆಸಿ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಯಾಸೀನ್ ಸಹಚರ ಚಾಲಕ ರಫೀಕ್ ಎಂಬಾತ ವಾಸವಾಗಿದ್ದ ಹಕ್ಲುಮನೆ ತೋಟದ ಮನೆಗೂ ದಾಳಿ ನಡೆಸಲಾಗಿತ್ತು. ಪ್ರಕರಣದ ಸಂಬಂಧ ಯಾಸೀನ್ ಗೆಳೆಯ ಅಹಮದ್ ಬಾವನನ್ನು ಬಂಧಿಸಿದ್ದು, ತೋಟದಲ್ಲಿ ಕೃಷಿ ಕಾರ್ಯ ಹಾಗೂ ನಿರ್ಮಾಣ ಕಾಮಗಾರಿಯಲ್ಲಿ ಭಾಗಿಯಾಗಿದ್ದ ಕುದುರೆಗುಂಡಿಯ ಇಬ್ಬರು ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ತನಿಖಾ ದಳದ ಭೇಟಿಯ ಮಾಹಿತಿಯ ಹಿನ್ನೆಲೆಯಲ್ಲಿ ವಿಠಲಮಕ್ಕಿ ಮತ್ತು ಹಕ್ಲುಮನೆಗೆ ಸೋಮವಾರ ತೆರಳಿದ ಸುದ್ದಿಗಾರರಿಗೆ ನಿಖರವಾದ ಮಾಹಿತಿ ದೊರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT