ADVERTISEMENT

ಉತ್ತರದಲ್ಲಿ ತುಂತುರು; ಕರಾವಳಿಯಲ್ಲಿ ಆರ್ಭಟ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ಬೆಂಗಳೂರು: ರಾಜ್ಯದ ಕರಾವಳಿಯಲ್ಲಿ ಸೋಮವಾರ ವರುಣ ಆರ್ಭಟಿಸಿದರೆ, ಉತ್ತರ ಕರ್ನಾಟಕದಲ್ಲಿ ತುಂತುರು ಹನಿಗಳನ್ನು ಸಿಂಪಡಿಸಿದ್ದಾನೆ. ಮಲೆನಾಡಿನಲ್ಲಿ ಮುಂಗಾರು ಮಳೆ ಒಂದೇ ಸವನೆ ಜಿನುಗುತ್ತಿದೆ. ಸೂರ್ಯನಗರಿ ಗುಲ್ಬರ್ಗದಲ್ಲಿ ಬಿಸಿಲಿನ ಮಧ್ಯೆಯೇ ಸಣ್ಣ ಮಳೆಯಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತವೆಂಬಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಮುಖವಾಗಿದೆ.

ಹುಬ್ಬಳ್ಳಿ ವರದಿ: ಉತ್ತರ ಕರ್ನಾಟಕದ ನಾಲ್ಕೈದು ಜಿಲ್ಲೆಗಳಲ್ಲಿ ಶುಕ್ರವಾರವೂ ತುಂತುರು ಮಳೆ ಮುಂದುವರಿದಿದೆ.

ಧಾರವಾಡ, ವಿಜಾಪುರ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಮಳೆಯಾಗಿದ್ದು ಹೊನ್ನಾವರದಲ್ಲಿ ಅತಿ ಹೆಚ್ಚು ಅಂದರೆ 57 ಮಿ.ಮೀ. ಮಳೆಯಾಗಿದೆ.

ಮಂಗಳೂರು ವರದಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹಳಷ್ಟು ಕಡೆ ಸೋಮವಾರ ಇಡೀ ಹಗಲು ಮುಂಗಾರು ಮಳೆಯ ಆರ್ಭಟ ಜೋರಾಗಿದ್ದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಳಿಮುಖವಾಗಿತ್ತು.

ಮಂಗಳೂರಿನಲ್ಲಿ ಬಿರುಸಿನ ಗಾಳಿ-ಮಳೆಯಿಂದಾಗಿ ನಗರದ ಆರ್ಯ ಸಮಾಜ ರಸ್ತೆಯಲ್ಲಿ ಎರಡು ಕಡೆ ಮರಗಳು ಧರೆಗುರುಳಿವೆ. ಬಜ್ಪೆ ಸಮೀಪದ ಎಂಎಸ್‌ಇಜೆಡ್ ವ್ಯಾಪ್ತಿಯ ಜೋಕಟ್ಟೆ ಬಳಿ ಎರಡು ಮನೆಗಳ ಕಾಂಪೌಡ್ ಕುಸಿದಿದ್ದರೆ, ಹತ್ತಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.

ಮಂಗಳೂರು ತಾಲ್ಲೂಕಿನಲ್ಲಿ 208 ಮಿ.ಮೀ., ಬೆಳ್ತಂಗಡಿ 99, ಬಂಟ್ವಾಳದಲ್ಲಿ 186.8 ಮಿ.ಮೀ ಮಳೆಯಾಗಿದೆ.

ಉಡುಪಿ ವರದಿ: ಜಿಲ್ಲೆಯಲ್ಲಿ ಸೋಮವಾರವೂ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ. ದಿನವಿಡೀ ತುಂತುರು ಮಳೆ, ಆಗ್ಗಾಗ್ಗೆ ಧಾರಾಕಾರ ಸ್ವರೂಪ ತಾಳುತ್ತಿತ್ತು. ಗುಡುಗಿನ ಹಿಮ್ಮೇಳವೂ ಸೇರಿತ್ತು.

ಯಾವುದೇ ಹಾನಿ ವರದಿಯಾಗಿಲ್ಲ. 24 ಗಂಟೆಗಳ ಅವಧಿಯಲ್ಲಿ ಜ್ಲ್ಲಿಲೆಯಲ್ಲಿ ಸರಾಸರಿ 39 ಮಿಮೀ ಮಳೆಯಾಗಿದೆ. ಉಡುಪಿ 34 ಮಿಮೀ, ಕುಂದಾಪುರ 11.2, ಕಾರ್ಕಳದಲ್ಲಿ 72.8 ಮಿಮೀ ಮಳೆಯಾಗಿದೆ.

ಚಿಕ್ಕಮಗಳೂರು ವರದಿ: ಜಿಲ್ಲೆಯ ವಿವಿಧೆಡೆ ಮಳೆ ಪ್ರಮಾಣ ಇಳಿಕೆಯಾಗಿದ್ದರೂ ಕೆಲವೆಡೆ ಹಾನಿಯಾಗಿದೆ.

ಆವತಿ ಹೋಬಳಿ ಕೆರೆಮಕ್ಕಿ ಗ್ರಾಮದಲ್ಲಿ ಗಾಳಿ-ಮಳೆಗೆ ಜಖಂಗೊಂಡಿದೆ. ಕಳಸ ಹೋಬಳಿ ತೋಟದೂರು ಗ್ರಾಮದಲ್ಲಿ ಮರದ ರೆಂಬೆ ಬಿದ್ದು ಎತ್ತು ಸಾವಿಗೀಡಾಗಿದೆ. ಜಿಲ್ಲೆಯಲ್ಲಿ ಸರಾಸರಿ 625.8 ಮಿ.ಮೀ, ಶೃಂಗೇರಿ ಕೆರೆಕಟ್ಟೆಯಲ್ಲಿ ಗರಿಷ್ಠ 72. ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.