ADVERTISEMENT

ಉದ್ಯೋಗ, ಆರೋಗ್ಯಕ್ಕೆ ಬಿಎಸ್‌ಆರ್ ಆದ್ಯತೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 19:59 IST
Last Updated 20 ಏಪ್ರಿಲ್ 2013, 19:59 IST

ಬಳ್ಳಾರಿ: ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಉದ್ಯೋಗ, ಗುಣಮಟ್ಟದ ವಸತಿ, ಗುಣಮಟ್ಟದ ಆರೋಗ್ಯ ಸೇವೆ...ಈ ನಾಲ್ಕು ಪ್ರಮುಖ ಅಂಶಗಳ ಅನುಷ್ಠಾನಕ್ಕೆ ಒತ್ತು ನೀಡುವುದಾಗಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಶನಿವಾರ ನಗರದಲ್ಲಿ ಬಿಡುಗಡೆ ಮಾಡಿರುವ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

ಆಟೊರಿಕ್ಷಾ ಚಾಲಕ ಮೋಹನ್, ಗಾರೆ ಕೆಲಸದ ಕೆಂಚಣ್ಣ ಹಾಗೂ ಕೃಷಿಕ ಶಿವಯ್ಯ ಅವರಿಂದಲೇ ಪ್ರಣಾಳಿಕೆ ಬಿಡುಗಡೆ ಮಾಡಿಸಿದ ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ಬಡವ, ಶ್ರಮಿಕ, ರೈತರ ಹೆಸರಿನಲ್ಲಿ ಆರಂಭವಾಗಿರುವ ಪಕ್ಷ ಈ ವರ್ಗದವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

`ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಎಂಬ ಸಿದ್ಧಾಂತದೊಂದಿಗೆ, `ಸಮಗ್ರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ'ಯ ಗುರಿ ಇರಿಸಿಕೊಂಡು, `ಆರ್ಥಿಕ ಸ್ವಾತಂತ್ರ್ಯ ಮತ್ತು ಹಣಕಾಸಿನ ಸ್ವಾವಲಂಬನೆ' ಕನಸಿನೊಂದಿಗೆ, `ಗ್ರಾಮೀಣ ಕರ್ನಾಟಕಕ್ಕೂ ಜಾಗತೀಕರಣದ ಸ್ಪರ್ಶ' ನೀಡುವ ಕ್ರಿಯಾ ಯೋಜನೆಯೊಂದಿಗೆ ಪಕ್ಷ 12 ಪುಟಗಳ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಿದೆ ಎಂದು ಅವರು ಹೇಳಿದರು.ಸಂಸದೆ ಜೆ.ಶಾಂತಾ, ಶಾಸಕ ಮೃತ್ಯುಂಜಯ ಜಿನಗಾ ಮೊದಲಾದವರು ಉಪಸ್ಥಿತರಿದ್ದರು.

ಪ್ರಣಾಳಿಕೆಯ ಪ್ರಮುಖ ಅಂಶಗಳು

  • ಗರ್ಭಿಣಿಯರಿಗೆ 5ನೇ ತಿಂಗಳಿಂದ ಸತತ 6 ತಿಂಗಳು ಮಾಸಿಕ 5 ಸಾವಿರ ರೂಪಾಯಿ ಆರೋಗ್ಯ ಭತ್ಯೆ
  • ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕಾಗಿ ಜಿಲ್ಲೆಗಳಲ್ಲಿ ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆ
  • ವಿಶ್ವವಿದ್ಯಾಲಯಗಳಲ್ಲಿ ಜಾಗತಿಕ ಮಟ್ಟದ ಬೋಧನೆ, ಸಂಶೋಧನೆಗೆ ಪ್ರೋತ್ಸಾಹ
  • ಜಿಲ್ಲಾ ಕೇಂದ್ರಗಳಲ್ಲಿ ಪ್ರೊ.ಎಲ್.ಜಿ. ಹಾವನೂರ್ ಪ್ರತಿಭಾ ವಿಕಾಸ ಕೇಂದ್ರ
  • ಕಾನೂನು ಪದವೀಧರರಿಗೆ ವಕೀಲಿ ವೃತ್ತಿಯ ತರಬೇತಿಗಾಗಿ ಬೆಳಗಾವಿ, ಶಿವಮೊಗ್ಗ ಹಾಗೂ ಮೈಸೂರುಗಳಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅಡೊ್ವೀೀಟ್ ಫಿನಿಶಿಂಗ್ ಶಾಲೆ
  • ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗ ದೊರಕಿಸಲು ಸ್ಟೀವ್ ಜಾಬ್ಸ್ ಎಂಜಿನಿಯರ್ಸ್ ಗ್ರೂಮಿಂಗ್ ತರಬೇತಿ ಶಾಲೆ
  • ಉದ್ಯೋಗಾಕಾಂಕ್ಷಿ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸಲು ವಿಭಾಗಕ್ಕೊಂದು ಕಿತ್ತೂರು ಚೆನ್ನಮ್ಮ ಸ್ವಾಭಿಮಾನಿ ತರಬೇತಿ ಕೇಂದ್ರ ಸ್ಥಾಪನೆ
  • ನಗರಕ್ಕೆ ವಲಸೆ ಬರುವ ಕೂಲಿಕಾರರಿಗೆ ತರಬೇತಿ ನೀಡಲು ಡಾ.ಬಾಬು ಜಗಜೀವನ್‌ರಾಮ್ ಕರ್ಮಯೋಗಿ ಕೇಂದ್ರ
  • ಭ್ರಷ್ಟಾಚಾರ ನಿವಾರಣೆಗೆ ಸಂಪೂರ್ಣ ಸ್ವತಂತ್ರ, ರಾಜಕೀಯ ಹಸ್ತಕ್ಷೇಪವಿಲ್ಲದ ಪ್ರಬಲ ಸಂಸ್ಥೆಯನ್ನಾಗಿಸಲು ಲೋಕಾಯುಕ್ತ ಕಾನೂನಿಗೆ ಸೂಕ್ತ ತಿದ್ದುಪಡಿ
  • ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರು, ಬಡ ಕುಶಲ ಕರ್ಮಿಗಳು, ಅಲೆಮಾರಿ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ವೆಚ್ಚದಲ್ಲಿ 1 ಲಕ್ಷ ಪರಿಸರ ಸ್ನೇಹೀ ಮನೆಗಳ ನಿರ್ಮಾಣಕ್ಕೆ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣ ವಸತಿ ಪ್ರಾಧಿಕಾರ ಸ್ಥಾಪನೆ
  • ನರ್ಸಿಂಗ್ ಶಿಕ್ಷಣ ಗುಣಮಟ್ಟ ನಿಯಂತ್ರಣಕ್ಕೆ ನರ್ಸಿಂಗ್ ಎಜುಕೇಷನ್ ಕೌನ್ಸಿಲ್ ಸ್ಥಾಪನೆ
  • ಹತ್ತಿ ಗಿರಣಿ, ಸ್ಪಿನ್ನಿಂಗ್ ಮಿಲ್, ಶೇಂಗಾ ಬೀಜ ಡಿಕಾರ್ಟಿಕೇಷನ್ ಕೈಗಾರಿಕೆಗಳಿಂದ ಪ್ರಸಿದ್ಧಿ ಹೊಂದಿದ್ದ ಗದಗ, ಹುಬ್ಬಳ್ಳಿ, ಲಕ್ಷ್ಮೇಶ್ವರ, ರಾಣೆಬೆನ್ನೂರು, ದಾವಣಗೆರೆ, ಕುಕನೂರು ಮುಂತಾದ ಕಡೆ ಕೃಷಿ ಆಧರಿತ ಉದ್ಯಮಗಳಿಗೆ ಚೈತನ್ಯ
  • ಕೃಷಿ ವಿವಿ ಸಂಶೋಧನೆಗಳನ್ನು ಬೇಸಾಯಗಾರರ ಉಪಯೋಗಕ್ಕೆ ತರಲು `ಪ್ರಯೋಗ ಶಾಲೆಯಿಂದ ಜಮೀನಿನೆಡೆಗೆ' ವಿಸ್ತರಣಾ ಕಾರ್ಯಕ್ರಮದ ಅನುಷ್ಠಾನ
  • ಪ್ರತಿ ಗ್ರಾಮ ಪಂಚಾಯತಿಯಲ್ಲಿ `ಕಿಸಾನ್ ಭಂಡಾರ' ಸ್ಥಾಪಿಸಿ ಅವುಗಳ ಮೂಲಕ ಸಬ್ಸಿಡಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡುವುದು
  • ಕಾಫಿ ಬೆಳೆಗಾರರಿಗೆ ನೆರವು ನೀಡಲು ಗೋರಖ್‌ಸಿಂಗ್ ವರದಿ ಅನುಷ್ಠಾನಕ್ಕೆ ಕೇಂದ್ರದ ಮೇಲೆ ಒತ್ತಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT