ADVERTISEMENT

ಉಪನ್ಯಾಸಕರ ನೇಮಕಕ್ಕೆ ನಿಯಮ ಸಡಿಲ, ಆಯ್ಕೆ ನಂತರ ಬಿ.ಇಡಿ ವ್ಯಾಸಂಗ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಕ್ಕೆ ಅರ್ಜಿ ಸಲ್ಲಿಸುವಾಗಲೇ ಬಿ.ಇಡಿ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯ ಎಂಬ ನಿಯಮವನ್ನು ಸಡಿಲಗೊಳಿಸಿ, ಉಪನ್ಯಾಸಕರಾಗಿ ನೇಮಕಗೊಂಡ ನಂತರ 3-4 ವರ್ಷಗಳಲ್ಲಿ ಬಿ.ಇಡಿ ವಿದ್ಯಾರ್ಹತೆ ಪಡೆಯಬೇಕು ಎಂಬ ಷರತ್ತು ವಿಧಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಇಲ್ಲಿ ತಿಳಿಸಿದರು.

ಉಪನ್ಯಾಸಕರ ನೇರ ನೇಮಕಾತಿಗೆ ಪ್ರಕಟಿಸಿರುವ ವಿಶೇಷ ನೇಮಕಾತಿ ನಿಯಮಗಳಲ್ಲಿ ಬಿ.ಇಡಿ ಕಡ್ಡಾಯಗೊಳಿಸುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ನಾತಕೋತ್ತರ ಪದವಿ ಜೊತೆಗೆ ಬಿ.ಇಡಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಸಿಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಡ್ಡಾಯ ಎಂಬ ನಿಯಮವನ್ನು ಸಡಿಲಗೊಳಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ಉಪನ್ಯಾಸಕರಿಗೆ ಬಿ.ಇಡಿ ವಿದ್ಯಾರ್ಹತೆಯ ಅಗತ್ಯವಿದೆ. ಆದರೆ ನೇಮಕಾತಿ ಸಂದರ್ಭದಲ್ಲಿ ಕಡ್ಡಾಯ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದು ಅದಕ್ಕೆ ಮನ್ನಣೆ ನೀಡಲಾಗುವುದು. ಅಕ್ಟೋಬರ್ ತಿಂಗಳಲ್ಲಿ 1,765 ಉಪನ್ಯಾಸಕರ ನೇಮಕ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅವರು ಹೇಳಿದರು.

ವಾಣಿಜ್ಯ ವಿಭಾಗದ ಪದವಿ, ಸ್ನಾತಕೋತ್ತರ ಪದವೀಧರರಿಗೆ ಬಿ.ಇಡಿ ವ್ಯಾಸಂಗಕ್ಕೆ ಅವಕಾಶ ಇಲ್ಲ. ಅವರಿಗೂ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಬಿ.ಇಡಿ ಕಡ್ಡಾಯವನ್ನು ಸಡಿಲಿಸಲಾಗುವುದು. ಆದರೆ ಅವರಿಗೆ ಒಂದು ವರ್ಷದ ಕೋರ್ಸ್ ರೂಪಿಸಲಾಗುವುದು. ನೇಮಕಗೊಂಡ ನಂತರ ಆ ಕೋರ್ಸ್ ಅಧ್ಯಯನ ಮಾಡಬೇಕು ಎಂಬುದಾಗಿ ತಿಳಿಸಿದರು.
 
ಸೆ.18 ಮತ್ತು 23ರಂದು ಬಿ.ಇಡಿ ಕಡ್ಡಾಯದಿಂದ ಉಪನ್ಯಾಸಕ ಹುದ್ದೆಯ ಆಕಾಂಕ್ಷಿಗಳಿಗೆ ಆಗಿರುವ ತೊಂದರೆ ಬಗ್ಗೆ `ಪ್ರಜಾವಾಣಿ~ ವಿಶೇಷ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.