ADVERTISEMENT

ಉಪನ್ಯಾಸಕರ ಮುಷ್ಕರದ ವಿರುದ್ಧ ಅರ್ಜಿ: ಸರ್ಕಾರ, ಶಿಕ್ಷಣ ಇಲಾಖೆಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಬೆಂಗಳೂರು: ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಮೌಲ್ಯಮಾಪನ ಬಹಿಷ್ಕರಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ವಕೀಲ ಎನ್.ವಾಸುದೇವ ಅವರು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ, ಪದವಿಪೂರ್ವ ಶಿಕ್ಷಣ ಮಂಡಳಿ ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕ ಸಂಘಕ್ಕೆ ನೋಟಿಸ್ ಜಾರಿಗೆ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ನೇತೃತ್ವದ ಪೀಠ ಆದೇಶಿಸಿದೆ.

ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಸರ್ಕಾರಿ ಸೇವೆಯಲ್ಲಿ ಇರುವವರು ಮುಷ್ಕರ ನಿರತರಾಗಬಾರದು. ಆದರೆ ಉಪನ್ಯಾಸಕರು, ಮೌಲ್ಯಮಾಪನ ಬಹಿಷ್ಕರಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಉಂಟುಮಾಡಿದ್ದರು. ಇದು ಕಾನೂನುಬಾಹಿರ ಎಂದು ದೂರಲಾಗಿದೆ.

ಈ ಮುಷ್ಕರದಿಂದ ಆಗಿರುವ ನಷ್ಟವನ್ನು ಉಪನ್ಯಾಸಕರೇ ಭರಿಸುವಂತೆ ಸೂಚಿಸಬೇಕು ಹಾಗೂ ಈ ಮುಷ್ಕರವು ನಿಯಮಬಾಹಿರ ಎಂದು ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಜಟಾಪಟಿ: ಕಾಯ್ದಿರಿಸಿದ ತೀರ್ಪು
ಮಾರ್ಚ್ 2ರಂದು ವಕೀಲರು, ಮಾಧ್ಯಮ ಪ್ರತಿನಿಧಿಗಳು, ಪೊಲೀಸರ ನಡುವೆ ನಡೆದ ಜಟಾಪಟಿಗೆ ಸಂಬಂಧಿಸಿದ ಅರ್ಜಿಯ ತೀರ್ಪನ್ನು ಹೈಕೋರ್ಟ್ ಬುಧವಾರ ಕಾಯ್ದಿರಿಸಿದೆ.

ಮಾಧ್ಯಮ ಹಾಗೂ ಪೊಲೀಸರ ವಿರುದ್ಧ ವಕೀಲರು ಸಲ್ಲಿಸಿರುವ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ. ಇದರ ವಿಚಾರಣೆಗೆಂದೇ ನಿಯೋಜನೆಗೊಂಡ ನ್ಯಾಯಮೂರ್ತಿ ಅಜಿತ್ ಗುಂಜಾಳ್ ನೇತೃತ್ವದ ವಿಶೇಷ ಪೀಠ ವಾದ, ಪ್ರತಿವಾದಗಳನ್ನು ಆಲಿಸಿ ಮುಗಿಸಿದೆ. ಈ ಹಿನ್ನೆಲೆಯಲ್ಲಿ ತೀರ್ಪನ್ನು ಕಾಯ್ದಿರಿಸಲಾಯಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.