ADVERTISEMENT

ಉರುಳಿಗೆ ಸಿಲುಕಿದ ಚಿರತೆಗೆ ಜೀವದಾನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 19:30 IST
Last Updated 9 ಜೂನ್ 2011, 19:30 IST
ಉರುಳಿಗೆ ಸಿಲುಕಿದ ಚಿರತೆಗೆ ಜೀವದಾನ
ಉರುಳಿಗೆ ಸಿಲುಕಿದ ಚಿರತೆಗೆ ಜೀವದಾನ   

ವಿಟ್ಲ:  ಕಾಡಾನೆಗಳೆರಡು ಅತ್ತ ಮೈಸೂರಿನಲ್ಲಿ ದಾಂಧಲೆ ನಡೆಸಿದ್ದು ಬುಧವಾರ ದೊಡ್ಡ ಸುದ್ದಿಯಾಗಿದ್ದರೆ, ಇತ್ತ ವಿಟ್ಲ ಪಡ್ನೂರಿನಲ್ಲಿ ಕಾಡು ಹಂದಿಗೆಂದು ಇಟ್ಟಿದ್ದ ಕುಣಿಕೆಗೆ ಗುರುವಾರ ಸಿಲುಕಿದ್ದ ಚಿರತೆಯೊಂದು ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿಯ ಸಕಾಲಿಕ ಕಾರ್ಯಾಚರಣೆ ಫಲವಾಗಿ 6 ವರ್ಷ ಪ್ರಾಯದ ಗಂಡು ಚಿರತೆ ಪ್ರಾಣ ಉಳಿಸಿಕೊಂಡಿತು.

ಆಹಾರ ಅರಸುತ್ತಾ ಬಂದ ಚಿರತೆ, ಪಡಾರು ಶಂಕರ ಭಟ್ಟ ಎಂಬುವವರ ಮನೆ ಸಮೀಪದ ಗುಡ್ಡದಲ್ಲಿ ಕಾಡುಹಂದಿ ಬೇಟೆಗೆ ಇಟ್ಟಿದ್ದ ತಂತಿಯ ಉರುಳಿಗೆ ಸಿಕ್ಕಿಕೊಂಡಿತ್ತು. ಸಮೀಪದ ಕಾಲುದಾರಿಯಲ್ಲಿ ಗುರುವಾರ ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದ ಮಕ್ಕಳು ಚಿರತೆಯ ಚೀರಾಟ ಕೇಳಿ ಭಯದಿಂದ ಮನೆಗೋಡಿ ವಿಚಾರ ತಿಳಿಸಿದರು. ಶಂಕರ ಭಟ್ಟರು ಬಂದು ವೀಕ್ಷಿಸಿದಾಗ ಚಿರತೆ ಕುಣಿಕೆಗೆ ಸಿಲುಕಿ ತಪ್ಪಿಸಿಕೊಳ್ಳಲಾಗದೆ ಪರದಾಡುತ್ತಿತ್ತು. ನಂತರ ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ಸುದ್ದಿ ಮುಟ್ಟಿಸಲಾಯಿತು.

ಯಶಸ್ವಿ ಕಾರ್ಯಾಚರಣೆ: ಸ್ಥಳಕ್ಕಾಗಮಿಸಿದ ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ, ಚಿರತೆಯನ್ನು ಜೀವಂತ ಹಿಡಿಯುವ ಬಗ್ಗೆ ಪಿಲಿಕುಳ ನಿಸರ್ಗಧಾಮದ ಸಿಬ್ಬಂದಿ ಜತೆ ಚರ್ಚಿಸಿದರು. ಇದೇ ವೇಳೆಗೆ ಮಂಗಳೂರು ಸಂಚಾರಿ ಅರಣ್ಯ ದಳದವರೂ ಸ್ಥಳಕ್ಕಾಗಮಿಸಿದರು. ಪಿಲಿಕುಲ ವೈದ್ಯರು ಆಗಮಿಸುವಾಗ ಮಧ್ಯಾಹ್ನ 2 ಗಂಟೆ ಕಳೆದಿತ್ತು.

ದೂರದಿಂದ ಹಾರಿಸಿದ ಮೊದಲ ಅರಿವಳಿಕೆ ಚುಚ್ಚುಮದ್ದು ಗುರಿ ತಪ್ಪಿತು. ನಂತರ ಇನ್ನಷ್ಟು ಸಮೀಪಕ್ಕೆ ತೆರಳಿ ಚುಚ್ಚುಮದ್ದು ನೀಡಲಾಯಿತು. ಪ್ರಜ್ಞಾಹೀನವಾದ ಚಿರತೆಯನ್ನು ಬೋನಿಗೆ ಹಾಕಲಾಯಿತು.

ಕಲೆಂಜಿಮಲೆಗೆ: ಚಿರತೆ 1.10 ಮೀ. ಉದ್ದವಿದೆ. ಕುಣಿಕೆಗೆ ಸಿಲುಕಿದ್ದಾಗ ಒದ್ದಾಡಿದ್ದರಿಂದ ಹೊಟ್ಟೆಗೆ ಗಂಭೀರ ಗಾಯಗಳಾಗಿವೆ. ಮೂತ್ರಪಿಂಡ, ಯಕೃತ್ತಿಗೂ ಗಾಯವಾಗಿರಬಹುದು~ ಎಂದ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ಜಯ, ಪಿಲಿಕುಳದಲ್ಲಿ ಸೂಕ್ತ ಚಿಕಿತ್ಸೆ ನೀಡಿ, ಗುಣಮುಖವಾದ ನಂತರ ಕಲೆಂಜಿಮಲೆ ರಕ್ಷಿತಾರಣ್ಯಕ್ಕೆ ಬಿಡುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.