
ಮಂಡ್ಯ: ಸಂಪತ್ ರಿಫೈನರಿ ತೈಲ ಘಟಕದ ಕುಲುಮೆ ಸ್ವಚ್ಛಗೊಳಿಸಲು ಇಳಿದಿದ್ದ ಐವರು ಕಾರ್ಮಿಕರು ಆಕ್ಸಿಜನ್ ಕೊರತೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಮಂಡ್ಯದ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ನಡೆದಿದೆ.
ಬೆಳಿಗ್ಗೆ 10.30ರ ವೇಳೆಗೆ ಇಬ್ಬರು ಕಾರ್ಮಿಕರು 20 ಅಡಿ ಎತ್ತರದ ಕುಲುಮೆ ಸ್ವಚ್ಛಗೊಳಿಸಲು ಒಳಗಡೆ ಇಳಿದಿದ್ದಾರೆ. ಅವರು ಮೇಲಕ್ಕೆ ಬಾರದ ಕಾರಣ ಮತ್ತೆ ಮೂವರು ಒಳಗಡೆ ಇಳಿದಿದ್ದು, ಎಲ್ಲರೂ ಅಲ್ಲಿಯೇ ಸಾವನ್ನಪ್ಪಿದ್ದಾರೆ.
ಶ್ರೀರಾಮ (25), ಬಬ್ಲು (26), ರಾಜು (27), ಗಾಮ (37) ಹಾಗೂ ಚೇತು (24) ಎಂದು ಮೃತರನ್ನು ಗುರುತಿಸಲಾಗಿದೆ. ಇದರಲ್ಲಿ ರಾಜು ಮಾತ್ರ ಮಧ್ಯಪ್ರದೇಶದ ಮಿಠಾಯಾಲ್ನವನಾಗಿದ್ದು, ಉಳಿದವರೆಲ್ಲ ಬಿಹಾರಾದ ಮುಸ್ತಾಫಾಬಾದ್ನವರು. ಬಬ್ಲು ಹಾಗೂ ಗಾಮ ಸಹೋದರರು ಎಂದು ತಿಳಿದುಬಂದಿದೆ.
ಐವರೂ ಮೇಲುಗಡೆ ಬಾರದ್ದರಿಂದ ಗಾಬರಿಗೊಂಡ ಅಲ್ಲಿದ್ದ ಮೂವರು ಕಾರ್ಮಿಕರು ಅಗ್ನಿಶಾಮಕ ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮೈಸೂರು ಹಾಗೂ ಮಂಡ್ಯದಿಂದ ಬಂದ ಅಗ್ನಿಶಾಮಕ ಸೇವೆ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣೆ ಕಾರ್ಯಾಚರಣೆ ಆರಂಭಿಸಿದರು.
ಮೂರು ಗಂಟೆ ಯತ್ನ ವಿಫಲ: ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕುಲುಮೆ ಮೇಲುಗಡೆ ಏರಿ ಬ್ಯಾಟರಿ ಮೂಲಕ ಬೆಳಕು ಹಾಕಿದಾಗ ಎಲ್ಲರೂ ಮೂರ್ಛೆ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂತು. ಕೂಡಲೇ ಕುಲುಮೆನಲ್ಲಿ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಲಾಯಿತು. ಒಳಗಡೆ ಇಳಿಯುವುದು ಅಪಾಯಕಾರಿ ಎಂದು, ಕುಲುಮೆ ಸುತ್ತಲೂ ನಿರ್ಮಿಸಿದ್ದ ಇಟ್ಟಿಗೆ ಗೋಡೆಯನ್ನು ಒಡೆಯಲಾಯಿತು.
ಕೂಡಲೇ ಪಕ್ಕದ ಕೈಗಾರಿಕಾ ಕೇಂದ್ರವೊಂದರಲ್ಲಿದ್ದ ಗ್ಯಾಸ್ ಕಟರ್ ತರಿಸಿ, ಕುಲುಮೆಯ ಕಬ್ಬಿಣ ಕೊಳವೆ ಕೊರೆದು ದೇಹಗಳನ್ನು ಹೊರತೆಗೆಯಲಾಯಿತು. ಅಷ್ಟೊತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನೆ ನಡೆದ ಸುದ್ದಿ ತಿಳಿದ ಸುತ್ತಮುತ್ತಲಿನ ನೂರಾರು ಜನರು ವೀಕ್ಷಣೆಗೆ ಬಂದರು.
ಸಂಪತ್ ರಿಫೈನರಿ ಘಟಕದ ಮಾಲೀಕರಾದ ಕುಮಾರ್ ಹಾಗೂ ಅರುಣ್ ಅವರ ಮೊಬೈಲ್ ಸ್ವಿಚ್ಆಫ್ ಆಗಿವೆ. ಅವರನ್ನು ಪತ್ತೆ ಹಚ್ಚಲು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶವ ಪರೀಕ್ಷೆಯ ನಂತರ ಸಂಬಂಧಿಗಳಿಗೆ ಒಪ್ಪಿಸಲಾಗುವುದು. ಮಾಲೀಕರು ಸಿಕ್ಕ ನಂತರ ಪರಿಹಾರದ ಬಗೆಗೆ ನಿರ್ಧರಿಸಲಾಗುವುದು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.