
ತುಮಕೂರು: ತುಮಕೂರು ವಿಶ್ವವಿದ್ಯಾಲಯ ಆರಂಭವಾದ ದಶಕದ ಅವಧಿಯಲ್ಲಿ ಭ್ರಷ್ಟಾಚಾರದ ಆಪಾದನೆಗಳಲ್ಲಿ ಸಿಲುಕಿದೆ. ನಿರ್ಗಮಿತ ಕುಲಪತಿ ಡಾ.ಎಸ್.ಸಿ.ಶರ್ಮಾ ಅವಧಿಯಲ್ಲಿ ಕೇವಲ ಎಂಟೇ ತಿಂಗಳಲ್ಲಿ 6 ಮಂದಿಗೆ ಪಿಎಚ್.ಡಿ ನೀಡಲಾಗಿದೆ. ಈ ಆರು ಮಂದಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಹಾಗೂ ವಿಶ್ವವಿದ್ಯಾಲಯದ ನೀತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ.
ಸಂಶೋಧನಾ ಮಾರ್ಗಸೂಚಿಗೆ ವಿಶೇಷ ತಿದ್ದುಪಡಿ ತರಲಾಗಿದೆ. ಇದಕ್ಕೆ ಕುಲಾಧಿಪತಿಯೂ ಆದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಹಾಗೂ ಸಿಂಡಿಕೇಟ್, ಶೈಕ್ಷಣಿಕ ಮಂಡಳಿಯೂ ನೆರವಾಗಿದೆ. ಪಿಎಚ್.ಡಿ ಜತೆಗೆ ನಿಯಮಮೀರಿ ಡಿ.ಲಿಟ್, ಡಿ.ಎಸ್‌ಸಿ ಪದವಿಗಳನ್ನೂ ನೀಡಲಾಗಿದೆ. ಗೌರವ ಪ್ರಾಧ್ಯಾಪಕ ಹುದ್ದೆಗಳಿಗೆ ಶರ್ಮಾ ಅವರ ಸ್ವಜಾತಿ (ಬ್ರಾಹ್ಮಣ) ಬಂಧುಗಳನ್ನೇ ಹೆಚ್ಚನ ಸಂಖ್ಯೆಯಲ್ಲಿ ನೇಮಕಾತಿ ಮಾಡಿರುವ ದಾಖಲೆಗಳು ‘ಪ್ರಜಾವಾಣಿ‘ಗೆ ಲಭ್ಯವಾಗಿವೆ.
ಯಾರು, ಯಾರಿಗೆ ಪಿಎಚ್‌ಡಿ?: ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಕೇಶವ ಪ್ರಸನ್ನ, ತುಂಗಾಮಣಿ, ಆರ್.ಸವಿತಾ, ಭೌತಶಾಸ್ತ್ರದಲ್ಲಿ ಎಚ್.ಬಿ.ಪ್ರೇಮ್ಕುಮಾರ್, ಡಿ.ವಿ.ಸುನಿತಾ ಹಾಗೂ ಆಹಾರ ವಿಜ್ಞಾನ ವಿಷಯದಲ್ಲಿ ಎಸ್.ಜೆ.ಪ್ರಶಾಂತ್ ಎಂಟೇ ತಿಂಗಳಲ್ಲಿ ಪಿಎಚ್.ಡಿ ಪಡೆದಿದ್ದಾರೆ. ಜಾತಿ ಮತ್ತು ಗೆಳೆತನ ಪಿಎಚ್.ಡಿ ನೀಡಲು ಮಾನದಂಡ ಎಂಬ ಆರೋಪವಿದೆ.
ಶರ್ಮಾ ಅವಧಿಯಲ್ಲಿ ಸಂಶೋಧನಾ ಮಾನ್ಯತೆ ನೀಡಲಾದ ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ (ಈ ಹಿಂದೆ ಇದೇ ಕಾಲೇಜಿನಲ್ಲಿ ಶರ್ಮಾ ಪ್ರಾಂಶುಪಾಲರಾಗಿದ್ದರು) ‘ಸೆಂಟರ್ ಫಾರ್ ಮ್ಯಾನ್ಯುಫ್ಯಾಕ್ಚರಿಂಗ್ ರಿಸರ್ಚ್ ಆ್ಯಂಡ್ ಟೆಕ್ನಾಲಜಿ ಯುಟಿಲೈಸೇಷನ್’ ಸಂಶೋಧನಾ ಕೇಂದ್ರದಲ್ಲಿ ಕೇಶವ ಪ್ರಸನ್ನ, ತುಂಗಾಮಣಿ, ಆರ್.ಸವಿತಾ ಸಂಶೋಧನೆ ನಡೆಸಿದ್ದಾರೆ. ಈ ಮೂವರಿಗೂ ಇದೇ ಕೇಂದ್ರದ ಪ್ರಾಧ್ಯಾಪಕ, ಶರ್ಮಾರ ಆಪ್ತರು ಎನ್ನಲಾದ ಪಿ.ರಮಾಕಾಂತ್ ಕುಮಾರ್ ಸಂಶೋಧನಾ ಮಾರ್ಗದರ್ಶಕರು.
ಕೇಶವ ಪ್ರಸನ್ನ ಅವರ ‘ನಾಲೆಡ್ಜ್ ಬೇಸ್ಡ್ ಇನ್‌ಫಾರ್ಮೇಶನ್ ರಿಟ್ರೈವಲ್ ಫಾರ್ ಸಿಂಥೆಟಿಕ್ ಆ್ಯಂಡ್ ಗ್ರಾಮಾಟಿಕಲ್ ಅನಾಲಿಸಿಸ್ ಆಫ್ ಕನ್ನಡ ಸ್ಕ್ರಿಪ್ಟ್’, ಆರ್.ಸವಿತಾ ಅವರ ‘ಆಟೊಮೆಟಿಕ್ ಟಾರ್ಗೆಟ್ ರೆಕಗ್ನೇಷನ್ ಆಫ್ ಸಿಂಥೆಟಿಕ್ ಅಟ್ರ್ಯೂ ರೆಡಾರ್ ಇಮೇಜಸ್: ಯೂಸಿಂಗ್ ರೇಡಿಯಲ್ ಫ್ಯೂಚರ್ಸ್ ಆ್ಯಂಡ್ ಸಪೋರ್ಟ್ ವೆಕ್ಟರ್ ಮೆಷೀನ್ಸ್’ ಹಾಗೂ ಎಂ.ತುಂಗಾಮಣಿಯವರ ‘ಆಫ್ ಲೈನ್ ಪ್ರಿಂಟೆಡ್ ಕನ್ನಡ ಟೆಕ್ಸ್ಟ್ ರೆಕಗ್ನೇಷನ್: ಯೂಸಿಂಗ್ ಸಪೋರ್ಟ್ ವೆಕ್ಟರ್ ಮೆಷೀನ್ಸ್ ಆ್ಯಂಡ್ ಝರ್ನಿಕ್ ಮೊಮೆಂಟ್ಸ್’ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ನೀಡಲಾಗಿದೆ.
ಹಾಗೆಯೇ, ತುಮಕೂರು ವಿ.ವಿ ಭೌತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಚ್.ನಾಗಭೂಷಣ್ ಮಾರ್ಗದರ್ಶನದಲ್ಲಿ ಎಚ್.ಬಿ.ಪ್ರೇಮ್ಕುಮಾರ್ ಅವರ ‘ಸಿಂಥಸಿಸ್ ಸ್ಟ್ರಕ್ಚರಲ್ ಆ್ಯಂಡ್ ಲ್ಯುಮಿನೋಸೆಂಟ್ ಪ್ರಾಪರ್ಟೀಸ್ ಆಫ್ ರೇರ್ ಅರ್ಥ್ ಆ್ಯಂಡ್ ಟ್ರಾನ್ಸಿಷನ್ಸ್ ಮೆಟಲ್ ಲಾನ್ಸ್ ಡೋಪ್ಡ್ ವೈಎಐಒ–3 ನ್ಯಾನೊಪಾಸ್ಪರ್ಸ್ ಆ್ಯಂಡ್ ಸಿಗ್ನಲ್ ಕ್ರಿಸ್ಟಲ್ಸ್’, ಡಿ.ವಿ.ಸುನಿತಾರವರ ‘ಲೊನೊ, ಫೋಟೊ ಆ್ಯಂಡ್ ಥರ್ಮೊ ಲ್ಯುಮಿನೊಸಿನ್ಸ್ ಸ್ಟ ಡೀಸ್ ಆಫ್ ಪ್ಯೂರ್ ಆ್ಯಂಡ್ ರೇರ್ ಅರ್ಥ್ ಡೋಪ್ಡ್ ನ್ಯಾನೊ ಸಿಲಿಕೇಟ್ಸ್’ ಸಂಶೋಧನಾ ಪ್ರಬಂಧಗಳಿಗೂ ಪಿಎಚ್.ಡಿ ಕೊಡಲಾಗಿದೆ.
ಜೊತೆಗೆ, ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಡಾ.ಡಿ.ಸುರೇಶ್ ಮಾರ್ಗದರ್ಶನದಲ್ಲಿ ಎಸ್.ಜೆ.ಪ್ರಶಾಂತ್ ಅವರು ಆಹಾರ ವಿಜ್ಞಾನ ವಿಭಾಗದಲ್ಲಿ ನಡೆಸಿದ ‘ನ್ಯೂಟ್ರಾಸಿಟಿಕಲ್ ಪ್ರಾಪರ್ಟೀಸ್ ಆಫ್ ಸೆಲೆಕ್ಟಡ್ ಮೆಡಿಷಿನ್ ಪ್ಲಾಂಟ್ಸ್’ ಕುರಿತ ಸಂಶೋಧನೆಗೂ ಡಾಕ್ಟರೇಟ್ ದೊರಕಿದೆ. ಈ ಆರು ಮಂದಿಯೂ 2012ರ ಜೂನ್ 19ರಂದು ಒಂದೇ ದಿನ ಸಂಶೋಧನೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಆರ್.ಸವಿತಾ, ತುಂಗಾಮಣಿ ಮತ್ತು ಕೇಶವ ಪ್ರಸನ್ನ 2013ರ ಫೆಬ್ರುವರಿ 22ರಂದು ಒಂದೇ ದಿನ ಪ್ರಬಂಧಗಳನ್ನು ವಿ.ವಿ.ಗೆ ಸಲ್ಲಿಸಿದ್ದಾರೆ.
ಭೌತಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿರುವ ಪ್ರೇಮ್ಕುಮಾರ್, ಸುನಿತಾ ಈ ಮೂವರಿಗಿಂತಲೂ 8 ದಿನ ಮೊದಲು (2013ರ ಫೆಬ್ರುವರಿ 14) ಪ್ರಬಂಧ ಸಲ್ಲಿಸಿದ್ದಾರೆ. ಎಸ್.ಜೆ.ಪ್ರಶಾಂತ್ 2013ರ ಮಾರ್ಚ್ ತಿಂಗಳ 11ರಂದು ಪ್ರಬಂಧ ಸಲ್ಲಿಸಿದ್ದಾರೆ. ಆದರೆ ಈ ಪ್ರಬಂಧಗಳು ಸಲ್ಲಿಕೆಯಾದ ಕೇವಲ ಎರಡೇ ತಿಂಗಳಲ್ಲಿ ಮೌಲ್ಯಮಾಪನ ನಡೆದು, ಮೌಖಿಕ ಪರೀಕ್ಷೆ, ಸಿಂಡಿಕೇಟ್ ಒಪ್ಪಿಗೆ ದೊರೆತು ಪಿಎಚ್.ಡಿ ಪದವಿಯ ತಾತ್ಪೂರ್ತಿಕ ಪದವಿ ಪ್ರಮಾಣ ಪತ್ರವನ್ನೂ ಪ್ರದಾನ ಮಾಡಲಾಗಿದೆ.
ವಿ.ವಿ ಸಂಶೋಧನಾ ಮಾರ್ಗದರ್ಶಿ ನಿಯಮಗಳ ಪ್ರಕಾರ ಪೂರ್ಣಕಾಲಿಕೆಯ ಪಿಎಚ್.ಡಿ ಮಾಡಲು ಮಾರ್ಗದರ್ಶಕರ ಲಭ್ಯತೆಯ ನಂತರ ಕನಿಷ್ಠ 2 ವರ್ಷ ಹಾಗೂ ಅರೆ ಕಾಲಿಕವಾದರೆ ಕನಿಷ್ಠ 36 ತಿಂಗಳಾಗಿರಬೇಕಾಗಿದೆ. ಅಲ್ಲದೇ ಆರು ತಿಂಗಳ ಕೋರ್ಸ್ ವರ್ಕ್, ಆರು ತಿಂಗಳಿಗೆ ಒಂದರಂತೆ ಎರಡು ಶೈಕ್ಷಣಿಕ ವರದಿಗಳನ್ನು ಸಲ್ಲಿಸಿರಬೇಕೆಂಬ ನಿಯಮಗಳಿವೆ.
ಈ ಆರು ಮಂದಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಂಶೋಧನೆಯ ನಿಯಮಾವಳಿಗೆ ವಿ.ವಿ. ತಿದ್ದುಪಡಿ ತಂದಿದೆ. ಅರೆಕಾಲಿಕವಾಗಿ ಸಂಶೋಧನೆಗೆ ಹೆಸರು ನೋಂದಾಯಿಸಿಕೊಂಡಿದ್ದ ಇವರುಗಳ ಪಿಎಚ್.ಡಿ ಕೋರ್ಸ್ಅನ್ನು ಪೂರ್ಣ ಕಾಲಿಕವೆಂದು ಪರಿಗಣಿಸಿ ಸಿಂಡಿಕೇಟ್, ಶೈಕ್ಷಣಿಕ ಮಂಡಳಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಪಿಎಚ್.ಡಿ ಪ್ರವೇಶ ಪರೀಕ್ಷೆ ನಡೆಸಿದ್ದ ದಿನವನ್ನೇ (24.4.2011) ಇವರ ಸಂಶೋಧನೆಯ ನೋಂದಣಿ ದಿನಾಂಕವಾಗಿ ಇನ್ನು ಮುಂದೆ ಓದಿಕೊಳ್ಳಬೇಕೆಂದು ನಿರ್ಣಯ ತೆಗೆದುಕೊಳ್ಳಲಾಗಿದೆ.
ಈ ತಿದ್ದುಪಡಿಯ ಲಾಭ ಕೇವಲ 6 ಮಂದಿಗಷ್ಟೇ ದಕ್ಕಿದ್ದು, ಇವರಂತೆಯೇ ಸಂಶೋಧನೆಗೆ ಹೆಸರು ನೋಂದಾಯಿಸಿಕೊಂಡಿದ್ದ ಉಳಿದವರಿಗೆ ಸಿಕ್ಕಿಲ್ಲ. ದೇಶದ ಯಾವ ವಿ.ವಿ.ಯಲ್ಲೂ ಇಲ್ಲದ ಇಂಥ ಒಂದು ವಿಶೇಷ ಅವಕಾಶವನ್ನು ತುಮಕೂರು ವಿ.ವಿ. ಈ ಆರು ಮಂದಿಗೆ ಕಲ್ಪಿಸಿಕೊಟ್ಟಿದೆ. ಕುಲಸಚಿವ ಪ್ರೊ.ಶಿವಲಿಂಗಯ್ಯ ಅವರನ್ನು ಬದಿಗೆ ಸರಿಸಿ ಶೈಕ್ಷಣಿಕ ವಿಭಾಗದ ಉಪ ಕುಲಸಚಿವ ರೂಪೇಶ್ ಕುಮಾರ್ ಅವರನ್ನು ಬಳಸಿಕೊಂಡು ಪಿಎಚ್.ಡಿ ಮಾರ್ಗದರ್ಶಿ ಸೂತ್ರಗಳಿಗೆ ತಿದ್ದುಪಡಿ ತರಲಾಗಿದೆ.
ಈ ವಿಶೇಷ ತಿದ್ದುಪಡಿಗಾಗಿಯೇ ಕರೆಯಲಾಗಿದ್ದ ವಿಶೇಷ ಸಿಂಡಿಕೇಟ್ ಸಭೆಯ ಕಾರ್ಯಸೂಚಿಯಲ್ಲಿ (ಅಜೆಂಡಾ) ಹೀಗೊಂದು ತಿದ್ದುಪಡಿಯ ಪ್ರಸ್ತಾವವೇ ಇರಲಿಲ್ಲ. ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಅಪ್ಪಣೆಯ ಮೇರೆಗೆ ಮತ್ತು ಅವರ ಸೂಚನೆಯಂತೆ ತಿದ್ದುಪಡಿ ತರಲಾಗಿದೆ. ಈ ವಿಶೇಷ ತಿದ್ದುಪಡಿಗೆ ಕುಲಾಧಿಪತಿಯಾದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಕುಲಪತಿ ಶರ್ಮಾ ಅವರಿಗೆ ವಿಶೇಷ ವಿವೇಚನಾಧಿಕಾರ ನೀಡಿ ಸೂಚನಾ ರೂಪದ ಅನುಮತಿ ನೀಡಿದ್ದಾರೆ.(ರಾಜ್ಯಪಾಲರ ಪತ್ರ ಸಂಖ್ಯೆ: ಜಿಡಿ 14 ಎಂಟಿಯು 2012, ದಿನಾಂಕ 19-–11-–2012). ಕುಲಾಧಿಪತಿ ಅನುಮತಿ ಸಿಕ್ಕ ನಂತರ ಸಿಂಡಿಕೇಟ್, ಶೈಕ್ಷಣಿಕ ಮಂಡಳಿ ಸಭೆಯಲ್ಲೂ ಒಪ್ಪಿಗೆ ಪಡೆಯಲಾಗಿದೆ. ಡಾ.ಶರ್ಮಾ ಅಧಿಕಾರದಿಂದ ನಿರ್ಗಮಿಸುವ ಕೆಲವೇ ದಿನಗಳ ಮುನ್ನ ಈ ಆರು ಮಂದಿಗೂ ಪಿಎಚ್.ಡಿ ಪದವಿಯ ತಾತ್ಪೂರ್ತಿಕ ಪ್ರಮಾಣ ಪತ್ರ ನೀಡಲಾಗಿದೆ.
ಮುಂದಿನ ಭಾಗದಲ್ಲಿ : ಮೌಲ್ಯಮಾಪನಕ್ಕೆ ಕಣ್ಣಿಲ್ಲ ಕಾಲಿವೆ...!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.